ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸಿಪಾಳ್ಯದ ಸ್ಥಿತಿ ಕಂಡು ಮೇಯರ್ ಕಂಗಾಲು

ಪಾದಚಾರಿ ಮಾರ್ಗ ಒತ್ತುವರಿ: ₹ 10 ಸಾವಿರ ದಂಡ
Last Updated 11 ಅಕ್ಟೋಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಪಕ್ಕದಲ್ಲಿ ಆಳೆತ್ತರ ಕಸದ ರಾಶಿ, ಬೇಕಾಬಿಟ್ಟಿ ನಿಲ್ಲಿಸಿದ್ದ ಬಸ್‌ಗಳು, ಹೊಂಡಗುಂಡಿಗಳಿಂದ ಕೂಡಿದ್ದ ರಸ್ತೆ....

ಕಲಾಸಿಪಾಳ್ಯ ಬಸ್‌ ನಿಲ್ದಾಣದ ವಾಸ್ತವ ಸ್ಥಿತಿ ಕಂಡು ಮೇಯರ್‌ ಗಂಗಾಂಬಿಕೆ ಅಕ್ಷರಶಃ ಅವಾಕ್ಕಾದರು.

ಈ ಪ್ರದೇಶದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮೇಯರ್‌ ಗುರುವಾರ ಇಲ್ಲಿಗೆ ಭೇಟಿ ನೀಡಿದರು. ಬಸ್‌ನಿಲ್ದಾಣ ಕಾಮಗಾರಿ ಸಲುವಾಗಿ ನಿಲ್ಲಿಸಿದ್ದ ಶೀಟುಗಳ ಪಕ್ಕದಲ್ಲಿ ಅಲ್ಲಲ್ಲಿ ಕಸ ರಾಶಿ ಹಾಕಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.

‘ನೂರಾರು ಮಂದಿ ಓಡಾಡುವ ಸ್ಥಳದಲ್ಲೇ ಇಷ್ಟೊಂದು ಕಸ ರಾಶಿ ಬಿದ್ದಿದೆ. ಅಲ್ಲಿಯವರೆಗೆ ನೀವು ಏನು ಮಾಡುತ್ತಿದ್ದಿರಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಇನ್ನುಮುಂದೆ ಇಲ್ಲಿ ಕಸ ಹಾಕುವುದನ್ನು ತಡೆಯಲು ಕ್ರಮಕೈಗೊಳ್ಳಿ’ ಎಂದು ಸೂಚನೆ ನೀಡಿದರು.

ಕಲಾಸಿಪಾಳ್ಯ ಬಸ್‌ನಿಲ್ದಾಣದ ರಸ್ತೆ ಗುಂಡಿಗಳಿಂದ ಕೂಡಿದ್ದನ್ನು ಕಂಡ ಮೇಯರ್‌, ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು. ‌

ಮಾರಿಯಮ್ಮ ದೇವಸ್ಥಾನ ಬಳಿಯ ಪಾದಚಾರಿ ಮಾರ್ಗವನ್ನು ಟೈರ್‌ ದುರಸ್ತಿ ಮಳಿಗೆಗಳು ಆಕ್ರಮಿಸಿಕೊಂಡಿದ್ದವು. ಇದಕ್ಕೆ ಆಕ್ರೋಶ ಸಮಾಧಾನ ವ್ಯಕ್ತಪಡಿಸಿದ ಮೇಯರ್‌, ‘ದಾರಿಯಲ್ಲಿ ಟೈರ್‌ಗಳೇ ತುಂಬಿದ್ದರೆ ಜನ ಓಡಾಡುವುದು ಹೇಗೆ’ ಎಂದು ಮಳಿಗೆಗಳ ಮಾಲೀಕರನ್ನು ಪ್ರಶ್ನಿಸಿದರು.

ಪಾದಚಾರಿ ಮಳಿಗೆಯಲ್ಲೇ ಸಾಮಗ್ರಿಗಳನ್ನು ಇಟ್ಟಿದ್ದ ಕೆಜಿಎನ್‌ ರೋಡ್‌ಲೈನ್ಸ್‌ ಸಂಸ್ಥೆಗೆ ಮೇಯರ್‌ ₹ 10 ಸಾವಿರ ದಂಡ ವಿಧಿಸಿದರು. ಸಗಟು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಿಥಿಲಾವಸ್ಥೆಯಲ್ಲಿರುವ ಮಳಿಗೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದರು.

‘ಮಳಿಗೆಗಳ ಚಾವಣಿಯನ್ನು ದುರಸ್ತಿಪಡಿಸಬೇಕು. ನೆಲಕ್ಕೆ ಶಹಬಾದ್‌ ಕಲ್ಲುಗಳನ್ನು ಅಳವಡಿಸಬೇಕು. ನೀರಿನ ಸಂಪ್‌ ನಿರ್ಮಿಸಬೇಕು. ಇಲ್ಲಿನ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

1984ರಲ್ಲಿ ಸಗಟು ಮಾರುಕಟ್ಟೆಯ ಮೂರು ಘಟಕಗಳನ್ನು ನಿರ್ಮಿಸಲಾಗಿದೆ. 1987ರವರೆಗೆ ಈ ಮಳಿಗೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುತ್ತಿಗೆಗೆ ನೀಡಲಾಗಿತ್ತು. ಪ್ರತಿ ವರ್ಷ ₹ 1 ಲಕ್ಷ ಬಾಡಿಗೆ ಹೆಚ್ಚಿಸುವ ಷರತ್ತು ವಿಧಿಸಲಾಗಿತ್ತು. ಇದರ ಅಭಿವೃದ್ಧಿ ಕಾಮಗಾರಿಯನ್ನು ಬಿಬಿಎಂಪಿ ನಿರ್ವಹಿಸುತ್ತದೆ. ಮಳಿಗೆಗಳ ನಿರ್ವಹಣೆಯನ್ನು ಎಪಿಎಂಸಿಯವರೇ ನೋಡಿಕೊಳ್ಳುತ್ತಿದ್ದಾರೆ. ಈ ಮಾರುಕಟ್ಟೆಯಿಂದ ಪ್ರಸಕ್ತ ಸಾಲಿನಲ್ಲಿ ₹ 1.20 ಕೋಟಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿದ್ದು, ಇದುವರೆಗೆ ₹ 90 ಲಕ್ಷ ಸಂಗ್ರಹಿಸಲಾಗಿದೆ.

ಅಂಕಿ ಅಂಶ

₹ 9.29 ಕೋಟಿ

ಕಲಾಸಿಪಾಳ್ಯ ಸಗಟು ಮಾರುಕಟ್ಟೆಯ ದುರಸ್ತಿ ಕಾಮಗಾರಿಯ ಅಂದಾಜು ವೆಚ್ಚ

382

ಮಳಿಗೆಗಳು ಸಗಟು ಮಾರುಕಟ್ಟೆಯಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT