ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವಾರ್ಡ್‌ಗೂ ಎಲೆ ಕತ್ತರಿಸುವ ಯಂತ್ರ

ಆಗಸ್ಟ್‌ ಒಳಗೆ ಖರೀದಿಸಿ: ಮೇಯರ್‌ ಸೂಚನೆ
Last Updated 22 ಜುಲೈ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಎಲ್ಲ ವಾರ್ಡ್‌ಗಳಿಗೂ ಒಂದೊಂದು ಎಲೆ ಹುಡಿ ಮಾಡುವ ಯಂತ್ರ (ಶೆಡ್ಡರ್ ಮತ್ತು ಚಾಪರ್ ಯಂತ್ರ) ವಿತರಿಸಬೇಕು. ಆಗಸ್ಟ್‌ 1ರ ಒಳಗೆ ಯಂತ್ರ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಗಂಗಾಂಬಿಕೆ ಅವರು ಕಸ ವಿಲೇವಾರಿ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದರು.

ನಗರದ ಸ್ವಚ್ಛತೆ ಕಾಪಾಡುವ ಕುರಿತು ಸೋಮವಾರ ಸಭೆ ನಡೆಸಿದ ಮೇಯರ್‌, ಸ್ಮಶಾನಗಳಲ್ಲಿ ಸ್ವಚ್ಛತೆ ಕಾಪಾಡಲು ಕೈಗೊಂಡ ಕ್ರಮಗಳು ಹಾಗೂ ಅಲ್ಲಿ ಉತ್ಪತ್ತಿ ಆಗುವ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಬಗ್ಗೆಯೂ ಸಮಾಲೋಚನೆ ನಡೆಸಿದರು.

‘ನಗರದ ಕೇಂದ್ರ ಪ್ರದೇಶದ ಮೂರು ವಲಯಗಳಲ್ಲಿ ಬರುವ ಎಲ್ಲಾ ಸ್ಮಶಾನಗಳಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯವಿರುವ ಯಂತ್ರೋಪಕರಣ ಖರೀದಿ, ಸಿಬ್ಬಂದಿ ನಿಯೋಜನೆಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಗಲುವ ವೆಚ್ಚದ ಬಗ್ಗೆ ವಾರದೊಳಗಾಗಿ ಅಂದಾಜು ಪಟ್ಟಿ ಸಿದ್ಧಪಡಿಸಬೇಕು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಲಾಗು
ವುದು’ ಎಂದರು‌.

ಹರಿಶ್ಚಂದ್ರ ಘಾಟ್, ವಿಲ್ಸನ್ ಗಾರ್ಡನ್, ಶಾಂತಿನಗರ, ಹಲಸೂರು ಹಾಗೂ ನಂದಿದುರ್ಗದ ಸ್ಮಶಾನಗಳಲ್ಲಿ ಮೆಶ್ ಕಾಂಪೋಸ್ಟ್ ಅಳವಡಿಸಲಾಗುತ್ತಿದೆ. ಎಂಟು ವಲಯಗಳಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಸ್ಥಳ ಗುರುತಿಸಲಾಗಿದೆ. ಶೌಚಾಲಯ ನಿರ್ಮಾಣದ ಕೆಲಸವನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಡೆಂಗಿ ತಡೆಗೆ ಕ್ರಮ ಕೈಗೊಳ್ಳಿ

ನಗರದಲ್ಲಿ ಡೆಂಗಿ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಮೇಯರ್‌ ಅವರು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

‘ಎಲ್ಲೆಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳಿವೆ ಎಂಬುದನ್ನು ಗುರುತಿಸಿ ಅಲ್ಲಿ ಫಾಗಿಂಗ್ ನಡೆಸಬೇಕು. ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ನಮಗೆ ಮಾಹಿತಿ ಕೊಡಿ. ಅವರಿಗೆ ನೀಡಿರುವ ಗುತ್ತಿಗೆ ರದ್ದುಪಡಿಸುವುದಲ್ಲದೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಡೆಂಗಿ ನಿಯಂತ್ರಣದ ಬಗ್ಗೆ ಚರ್ಚಿಸಲು ಆರೋಗ್ಯಾಧಿಕಾರಿಗಳು ಪ್ರತಿ ವಾರ್ಡ್‌ನಲ್ಲೂ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಭೆ ನಡೆಸಬೇಕು. ಸೊಳ್ಳೆ ನಿಯಂತ್ರಣ ಮಾಡಲು ಗುತ್ತಿಗೆ ಪಡೆದವರನ್ನೂ ಆಹ್ವಾನಿಸಿ, ಅವರು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT