ಬೆಂಗಳೂರು: ಬಿಬಿಎಂಪಿಯ ಎಲ್ಲ 243 ವಾರ್ಡ್‌ಗಳಲ್ಲಿ ಮುಂದಿನ ತಿಂಗಳಲ್ಲೇ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾವೇರಿನಗರದ ಶಿವ ದೇವಸ್ಥಾನದ ಬಳಿ ಭಾನುವಾರ ನಡೆದ ಸಮಾರಂಭದಲ್ಲಿ ಪಶ್ಚಿಮ ಕಾರ್ಡ್ ರಸ್ತೆಯಿಂದ ವರ್ತುಲ ರಸ್ತೆ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
'ನಮ್ಮ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಶಿಕ್ಷಣ ಮತ್ತು ಆರೋಗ್ಯಕ್ಕೂ ಆದ್ಯತೆ ನೀಡಿದೆ. ಬೆಂಗಳೂರಿನಲ್ಲಿ 20 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಜನರಿಗೆ ವಾರ್ಡ್ ಮಟ್ಟದಲ್ಲೇ ವೈದ್ಯಕೀಯ ಸೌಲಭ್ಯ ಒದಗಿಸಲು ನಮ್ಮ ಕ್ಲಿನಿಕ್ ಗಳನ್ನು ಆರಂಭಿಸಲಾಗುತ್ತಿದೆ' ಎಂದರು.
ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ₹6,000 ಕೋಟಿ ಅನುದಾನ ಒದಗಿಸಲಾಗಿದೆ. 400 ಕಿ.ಮೀ. ಉದ್ದದ ರಾಜಕಾಲುವೆಗಳ ಅಭಿವೃದ್ಧಿಗೆ ₹1,600 ಕೋಟಿ ಒದಗಿಸಲಾಗಿದೆ. ₹15,000 ಕೋಟಿ ವೆಚ್ಚದ ಉಪನಗರ ರೈಲು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪೆರಿಫೆರಲ್ ವರ್ತುಲ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಬೊಮ್ಮಾಯಿ ಹೇಳಿದರು.
ಬಿಬಿಎಂಪಿಯ ಪ್ರತಿ ವಾರ್ಡ್ ನಲ್ಲೂ ಚುನಾಯಿತ ಪ್ರತಿನಿಧಿಗಳು ಇದ್ದರೆ ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚುತ್ತದೆ. ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು ಎಂದರು.
ಸ್ಥಳೀಯ ಶಾಸಕರೂ ಆಗಿರುವ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಮುನಿರತ್ನ, ಬೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯ ಎ. ದೇವೇಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.