ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧೀಯ ಸಸ್ಯ ಎಲ್ಲರಿಗೂ ಸಿಗಲಿ: ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ

Last Updated 6 ಮಾರ್ಚ್ 2021, 21:12 IST
ಅಕ್ಷರ ಗಾತ್ರ

ಬೆಂಗಳೂರು: ‘ಜೀವ ವೈವಿಧ್ಯದ ಉಪಯೋಗ ಜನಸಾಮಾನ್ಯರನ್ನೂ ತಲುಪಬೇಕು. ಆಯುರ್ವೇದದ ಔಷಧೀಯ ಗುಣವುಳ್ಳ ಸಸ್ಯಗಳು ಎಲ್ಲ ಭಾಗದ ಜನರಿಗೆ ಸಿಗಬೇಕು. ಇದಕ್ಕಾಗಿ ಜೀವ ವೈವಿಧ್ಯ ಮಂಡಳಿ ರೂಪಿಸುವ ಯೋಜನೆಗಳಿಗೆ ಸರ್ಕಾರದ ಸಹಕಾರ ಇರಲಿದೆ’ ಎಂದು ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಶನಿವಾರ ಆಯೋಜಿಸಿದ್ದ ‘ವಿಶೇಷ ಮಾದರಿ ಜೀವ ವೈವಿಧ್ಯ ಯೋಜನೆ’ಗೆ ಚಾಲನೆ ನೀಡಿದರು. ಬಳಿಕ ನಡೆದ ‘ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಲಾಭ ಹಂಚಿಕೆ’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಸಂಸ್ಥೆಗಳು ಪ್ರಕೃತಿ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ತಯಾರಿಸುವ ಉತ್ಪನ್ನಗಳು ಜನರನ್ನು ತಲುಪಬೇಕು. ಇದಕ್ಕಾಗಿ ಪರಿಸರ ಮತ್ತು ಅರಣ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದರು.

ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ಜೀವ ವೈವಿಧ್ಯ ಮಂಡಳಿಯು ಅರಣ್ಯ ಸಂಪತ್ತನ್ನು ಉಳಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪರಿಸರ, ಅರಣ್ಯ ಇಲಾಖೆಗಳಂತೆ ಮಂಡಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಮನವಿ ಮಾಡಿದರು.

‘ಮಂಡಳಿಯಲ್ಲಿ ಸಂಗ್ರಹವಾಗಿರುವ ಸುಮಾರು ₹5 ಕೋಟಿ ಅನುದಾನವನ್ನು ತಾಲ್ಲೂಕು ಹಂತದಲ್ಲಿ ಜೀವ ವೈವಿಧ್ಯ ಅಭಿವೃದ್ಧಿಪಡಿಸಲು ವಿನಿಯೋಗಿಸಲಾಗುತ್ತಿದೆ. ಜೀವ ವೈವಿಧ್ಯ ಮಂಡಳಿಯಿಂದ ರಾಜ್ಯದ ಅಪರೂಪದ ಜೀವ ವೈವಿಧ್ಯ ತಾಣಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದ್ದು, ಸರ್ಕಾರ ಇದಕ್ಕೆ
ಪ್ರೋತ್ಸಾಹಿಸಬೇಕು’ ಎಂದರು.

ಪರಿಸರ ಕಾರ್ಯಕರ್ತ ಡಾ.ವಾಮನ ಆಚಾರ್ಯ,‘ಜೀವ ವೈವಿಧ್ಯವನ್ನುಅಭಿವೃದ್ಧಿಪಡಿಸುವ ಕೆಲಸ ಆಗಬೇಕು. ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ನೈಸರ್ಗಿಕ ಸಂಪತ್ತನ್ನು ನಿರ್ದಿಷ್ಟ ಸ್ಥಳದಲ್ಲಿ ಮರುಸೃಷ್ಟಿಸಿ ಎಲ್ಲರಿಗೂ ತಲುಪಿಸಬೇಕು’ ಎಂದು ಹೇಳಿದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ, ‘ದಟ್ಟ ಅರಣ್ಯಗಳು ಮತ್ತೆ ಮರುಕಳಿಸಬೇಕು. ಅದಕ್ಕಾಗಿ ಜೀವ ವೈವಿಧ್ಯ ಮಂಡಳಿ, ಅರಣ್ಯ ಇಲಾಖೆಯೊಡನೆ ಎಲ್ಲರೂ ಸಹಕರಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ, ಯಲ್ಲಾಪುರ, ಸಾಗರ, ಸೊರಬ, ಬಳ್ಳಾರಿ, ಹೊಸನಗರ, ಶಿರಸಿ ಮತ್ತು ಸಿದ್ಧಾಪುರದ ತಾಲ್ಲೂಕು ಪಂಚಾಯಿತಿಗಳಲ್ಲಿನ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಪ್ರತಿನಿಧಿಗಳಿಗೆ ಅನುದಾನದ ಚೆಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT