ಸೋಮವಾರ, ಜುಲೈ 4, 2022
24 °C
ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಸಿದ್ದರಾಮಯ್ಯ ಘೋಷಣೆ

ಬಿಜೆಪಿ ಕಿತ್ತೊಗೆಯಲು ಹೋರಾಟ: ಸಿದ್ದರಾಮಯ್ಯ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಕೋಮುವಾದಿ, ಭ್ರಷ್ಟ, ದುರಾಡಳಿತದಿಂದ ಕೂಡಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕಲು ರಾಜಕೀಯ ಹೋರಾಟವೂ ಅಗತ್ಯವಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‌ಬಸವನಗುಡಿಯ ನ್ಯಾಷನಲ್‌ ಕಾಲೇಜು ಆಟದ ಮೈದಾನದಲ್ಲಿ ಗುರುವಾರ ನಡೆದ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ, ‘ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರಕ್ಕೆ ನೀರು ಕೊಡಬೇಕೋ ಬೇಡವೋ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ರಾಜಕೀಯ ಹೋರಾಟ ಬೇರೆ ಸಮಯದಲ್ಲಿ ಮಾಡುತ್ತೇವೆ. ನೀರಿನ ವಿಚಾರದಲ್ಲಿ ಅಲ್ಲ. ರಾಜಕೀಯ ಹೋರಾಟ ಬಹಿರಂಗವಾಗಿ ಮಾಡುವ ಸಮಯ ಬಂದಾಗ ಮಾಡುತ್ತೇವೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌ನವರು ತೂಕ ಇಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಮಾಡುತ್ತಿದ್ದಾರೆ, ರಾಜಕೀಯ ಕಾರಣಕ್ಕೆ ಮಾಡುತ್ತಿದ್ದಾರೆ ಎಂಬೆಲ್ಲಾ ಟೀಕೆಗಳನ್ನು ಬಿಜೆಪಿಯವರು ಮಾಡಿದ್ದರು. ಆದರೆ, ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಎಲ್ಲ ಟೀಕೆಗಳಿಗೆ ಜನರೇ ಉತ್ತರ ನೀಡಿದ್ದಾರೆ’ ಎಂದರು.

‘ಇದು ಡಿ.ಕೆ. ಶಿವಕುಮಾರ್ ಯಶಸ್ಸಲ್ಲ‌. ಕಾಂಗ್ರೆಸ್ಸಿನ ಯಶಸ್ಸೂ ಅಲ್ಲ. ನಾಡಿನ‌ ಜನರು ಮಾಡಿರುವ ಆಶೀರ್ವಾದ. ನನ್ನ ವಿರೋಧ‌ ಪಕ್ಷದವರು ಟೀಕೆ, ಟಿಪ್ಪಣಿ ಮೂಲಕ ಸುಂಟರಗಾಳಿ ಎರಗಿದ್ದರು. ರಾಮನಗರದಲ್ಲಿ ಸಾಕಷ್ಟು ತೊಂದರೆ ಕೊಟ್ಟರು. ನನ್ನನ್ನು ಜೈಲಿಗೆ ಕಳಿಸಬೇಕೆಂದು ಪಣ ತೊಟ್ಟಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್‌ ಭಾವನಾತ್ಮಕವಾಗಿ ಮಾತನಾಡಿದರು.

‘ಯೋಜನೆ ನಮ್ಮ ನೆಲ, ನಮ್ಮ ಹಣ ವೆಚ್ಚವಾಗಲಿದೆ. ಇದು ರಾಜ್ಯಕ್ಕಾಗಿ ಹೋರಾಟ. ರಾಜಕಾರಣ ಮಾಡುವ ಸಂದರ್ಭದಲ್ಲಿ ಅದನ್ನು ಮಾಡೋಣ. ಪಾದಯಾತ್ರೆಗೆ ಹೋಗದಂತೆ ಮುಖ್ಯಮಂತ್ರಿ ಕಚೇರಿಯಿಂದ ಹಲವು ನಟರಿಗೆ ಕರೆ ಮಾಡಲಾಗಿದೆ’ ಎಂದ ಅವರು, ‘ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಉತ್ತಮ ಆಡಳಿತ ಕೊಡಲು ನಮ್ಮ ನಾಯಕರು ಸಜ್ಜಾಗಿದ್ದಾರೆ’ ಎಂದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ‘ಈ ಯೋಜನೆಗೆ ಪರಿಸರ ಸಚಿವಾಲಯದಿಂದ ನಿರಕ್ಷೇಪಣಾ ಪತ್ರ ಬೇಕಾಗಿದೆ. ರಾಜ್ಯ ಸರ್ಕಾರ ಒತ್ತಾಯಿಸಿದರೆ ಕೇಂದ್ರ ಅನುಮತಿ ನೀಡಲಿದೆ. ಕಬ್ಬಿಣದ ಅದಿರು ಗಣಿಗಾರಿಕೆ ಅನುಮತಿ ನೀಡುವ ಕೇಂದ್ರ ಸರ್ಕಾರ, ಮೇಕೆದಾಟು ಯೋಜನೆಗೆ ಮಾತ್ರ ಕೊಡುತ್ತಿಲ್ಲ. ಈ ಯೋಜನೆಗೆ ಕೇಂದ್ರ, ರಾಜ್ಯ ಬಿಜೆಪಿ ಹಾಗೂ ಜೆಡಿಎಸ್‌ನಿಂದ ವಿರೋಧವಿದೆ. ವಿಶ್ವಗುರು ನರೇಂದ್ರ ಮೋದಿಗೆ ರಾಜ್ಯದ ಬಗ್ಗೆ ಯೋಚಿಸುವಷ್ಟು ಸಮಯ ಇಲ್ಲ’ ಎಂದು ಟೀಕಿಸಿದರು.

‘ಮೇಕೆದಾಟು ಪಾದಯಾತ್ರೆ ರಾಜಕೀಯ ಹೋರಾಟ ಅಲ್ಲ. ಯಾವ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ. ಬದಲಾಗಿ ಬೆಂಗಳೂರು ಭಾಗದ ಜನರ ಕುಡಿಯವ ನೀರಿನ ಸಮಸ್ಯೆ ಬಗೆಹರಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ
ಹೇಳಿದರು.

‘ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇದೆ. ಕೇಂದ್ರದಲ್ಲಂತೂ ವಾಂತಿ‌ ಬರುವಷ್ಟು ಬಹುಮತ ಇದೆ. ಆದರೂ ಮೇಕೆದಾಟು ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ನಾಗಪುರದಿಂದ ಬರುವ ಸಂದೇಶವನ್ನು ಜಾರಿ ಮಾಡುವ ಸರ್ಕಾರ ರಾಜ್ಯದಲ್ಲಿದೆ. ಇವರು ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳುತ್ತಾರೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು