ಭಾನುವಾರ, ಆಗಸ್ಟ್ 25, 2019
20 °C
ಜಲಮಂಡಳಿ ಹಸ್ತಾಂತರಿಸಬೇಕಿದೆ 1,530 ಚ.ಮೀ. ಜಾಗ

ಒಆರ್‌ಆರ್‌ ಮೆಟ್ರೊ ಮಾರ್ಗ ಭೂಸ್ವಾಧೀನದ್ದೇ ಸಮಸ್ಯೆ

Published:
Updated:

ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ಕೆ.ಆರ್.ಪುರದಿಂದ ಸಿಲ್ಕ್‌ ಬೋರ್ಡ್‌ವರೆಗಿನ 17 ಕಿ.ಮೀ ಉದ್ದದ ಮಾರ್ಗ ನಿರ್ಮಾಣಕ್ಕೆ ಇನ್ನೂ 3 ಸಾವಿರ ಚದರ ಮೀಟರ್ ಜಾಗ ಭೂಸ್ವಾಧೀನ ಆಗಬೇಕಿದೆ.

₹5,990 ಕೋಟಿ ಮೊತ್ತದ ಹೊರವರ್ತುಲ ರಸ್ತೆಯ ಮಾರ್ಗಕ್ಕೆ 40,757 ಚದರ ಮೀಟರ್ ಭೂಮಿ ಅಗತ್ಯವಿದೆ. ಈ ಮೊದಲಿನ ಅಂದಾಜಿನಂತೆ 36 ಸಾವಿರ ಚದರ ಮೀಟರ್‌ ಭೂಮಿ ಸಾಕಾಗುತ್ತಿತ್ತು. ಆದರೆ, ಸಿಲ್ಕ್ ಬೋರ್ಡ್‌ ಬಳಿ ಸಾರಿಗೆ ಹಬ್ ನಿರ್ಮಿಸುವ ಪರಿಷ್ಕೃತ ಅಂದಾಜಿನ ಪ್ರಕಾರ ಹೆಚ್ಚುವರಿಯಾಗಿ 4 ಸಾವಿರ ಚದರ ಮೀಟರ್ ಜಾಗ ಬೇಕಿದೆ.

ಇದರಲ್ಲಿ 18 ಸಾವಿರ ಚದರ ಮೀಟರ್ ಸರ್ಕಾರಿ ಜಾಗವೇ ಆಗಿದ್ದು, ಬಿಬಿಎಂಪಿ ಮತ್ತು ಬಿಡಿಎ ವಶದಲ್ಲಿದ್ದ ಬಹುತೇಕ ಜಾಗ ಈಗಾಗಲೇ ಹಸ್ತಾಂತರವಾಗಿದೆ. ಒಟ್ಟು 3,000 ಚದರ ಮೀಟರ್‌ ಮಾತ್ರ ಸ್ವಾಧೀನಕ್ಕೆ ಬಾಕಿ ಇದ್ದು, ಇದರಲ್ಲಿ ಕೋಡಿಬಿಸನಹಳ್ಳಿ ಬಳಿ ಜಲಮಂಡಳಿಯ 1,530 ಚದರ ಮೀಟರ್ ಭೂಮಿ ಸ್ವಾಧೀನ ಆಗಬೇಕಿದೆ. ಈ ಜಾಗದಲ್ಲಿ ಈಗ ಪೊಲೀಸ್ ಠಾಣೆ ಇದೆ. ಠಾಣೆಗೆ ಬೇರೆ ಜಾಗವನ್ನು ಜಲಮಂಡಳಿ ನೀಡುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಎಂಆರ್‌ಸಿಎಲ್‌ಗೆ ಭೂಮಿ ಹಸ್ತಾಂತರ ಆಗಲಿದೆ.

‘ಆದಷ್ಟು ಬೇಗ ಪ್ರಕ್ರಿಯೆಗಳನ್ನು ಮುಗಿಸಿಕೊಡುವಂತೆ ಜಲಮಂಡಳಿಗೆ ಮನವಿ ಮಾಡಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಚನ್ನಪ್ಪ ಗೌಡರ ತಿಳಿಸಿದರು.

ಇದನ್ನು ಹೊರತುಪಡಿಸಿದರೆ ಖಾಸಗಿ ಭೂಮಿ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದ್ದು, ಸ್ವಾಧೀನ ಆಗಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದೂ ಮಾಹಿತಿ ನೀಡಿದರು.

ತೆರವಾಗಬೇಕಿದೆ ಇಂದಿರಾ ಕ್ಯಾಂಟೀನ್

ಮಾರತಹಳ್ಳಿ ಬಳಿ ಮೆಟ್ರೊ ಮಾರ್ಗಕ್ಕೆ ಅಗತ್ಯ ಇರುವ ಭೂಮಿಯನ್ನು ಬಿಎಂಟಿಸಿಯಿಂದ ಬಿಎಂಆರ್‌ಸಿಎಲ್ ಪಡೆದುಕೊಂಡಿದೆ. ಆದರೆ, ಈ ಜಾಗದಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದೆ.

‘ಭೂಮಿ ಹಸ್ತಾಂತರ ಕಾರ್ಯ ಪೂರ್ಣಗೊಂಡಿದ್ದರೂ ಸ್ವಾಧೀನ ಸಾಧ್ಯವಾಗುತ್ತಿಲ್ಲ. ಇಂದಿರಾ ಕ್ಯಾಂಟೀನ್‌ ಬೇರೆಡೆ ಸ್ಥಳಾಂತರ ಮಾಡಲು ಬಿಬಿಎಂಪಿಗೆ ₹22 ಲಕ್ಷ ಪರಿಹಾರವನ್ನೂ ನೀಡಲಾಗಿದೆ’ ಎಂದು ಎಂ.ಎಸ್. ಚನ್ನಪ್ಪ ಗೌಡರ ಹೇಳಿದರು.

Post Comments (+)