ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ಹಳದಿ ಮಾರ್ಗ: ಇನ್ನೂ ತಲುಪದ ಚಾಲಕ ರಹಿತ ಕೋಚ್‌ನ ಎರಡನೇ ಸೆಟ್‌

Published 13 ಜೂನ್ 2024, 0:01 IST
Last Updated 13 ಜೂನ್ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ಚಾಲಕ ರಹಿತ ಎಂಜಿನ್‌ ಹೊಂದಿರುವ ಕೋಚ್‌ನ ಎರಡನೇ ಸೆಟ್‌ ಇನ್ನೂ ತಲುಪಿಲ್ಲ. ಹೀಗಾಗಿ ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ ಒಂದೇ ಪ್ರೊಟೊ ಟೈಪ್‌ (ಮೂಲ ಮಾದರಿ) ರೋಲಿಂಗ್ ಸ್ಟಾಕ್‌ನಲ್ಲಿಯೇ (ಕೋಚ್‌ಗಳು) ಜೂನ್‌ 13ರಿಂದ ಪ್ರಮುಖ ಪರೀಕ್ಷೆಗಳನ್ನು ನಡೆಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಚೀನಾದ ಸಿಆರ್‌ಆರ್‌ಸಿ ತಯಾರಿಸಿರುವ ಮೂಲ ಮಾದರಿಯ ಆರು ಕೋಚ್‌ಗಳು (ಒಂದು ಸೆಟ್‌) ಫೆಬ್ರುವರಿ ಎರಡನೇ ವಾರದಲ್ಲಿ ಬೆಂಗಳೂರಿಗೆ ತಲುಪಿದ್ದವು. ಹೆಬ್ಬಗೋಡಿಯಲ್ಲಿರುವ ಮೆಟ್ರೊ ಡಿಪೊದಲ್ಲಿ ಕೋಚ್‌ಗಳನ್ನು ಜೋಡಿಸಲಾಗಿತ್ತು. ಮಾರ್ಚ್‌ನಲ್ಲಿ ರೈಲನ್ನು ಹಳಿಗೆ ಇಳಿಸಿ ಪರೀಕಾರ್ಥ ಸಂಚಾರ ನಡೆಸಬೇಕಿತ್ತು. ಪ್ರಮುಖ ಪರೀಕ್ಷೆಗಳನ್ನು ನಡೆಸಲು ಎರಡು ಕೋಚ್‌ಗಳ ಅವಶ್ಯವಿದ್ದು, ಏಪ್ರಿಲ್‌ ಕೊನೆಗೆ ಅಥವಾ ಮೇ ತಿಂಗಳಲ್ಲಿ ಇನ್ನೊಂದು ಸೆಟ್ ಬರುವುದಾಗಿ ಬಿಎಂಆರ್‌ಸಿಎಲ್‌ ತಂತ್ರಜ್ಞರು ನಿರೀಕ್ಷಿಸಿದ್ದರು. ಆದರೆ, ಎರಡನೇ ಸೆಟ್ ಬಂದಿಲ್ಲ.

ಎರಡು ಸೆಟ್‌ಗಳು ಚೀನಾದಿಂದ ಬರಬೇಕಿದ್ದವು. ಆದರೆ ಒಂದೇ ಸೆಟ್‌ ಬಂತು. ಎರಡನೇ ಸೆಟ್‌ ಪಶ್ಚಿಮ ಬಂಗಾಳದ ಟಿಟಾಗಢ್‌ ರೈಲ್ವೆ ಸಿಸ್ಟಮ್‌ ಲಿಮಿಟೆಡ್‌ನಿಂದ ಬರಲಿದೆ. ಆಗಸ್ಟ್‌ನಲ್ಲಿ ನಗರಕ್ಕೆ ತಲುಪಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಟ್ಯಾಟಿಕ್‌ ಮತ್ತು ಎಲೆಕ್ಟ್ರಿಕಲ್‌ ಸರ್ಕಿಟ್‌ ಪರೀಕ್ಷೆಗಾಗಿ ಬೋಗಿಗಳನ್ನು ಜೋಡಿಸಿ, ಪರೀಕ್ಷಾ ಟ್ರ್ಯಾಕ್‌ಗೆ ಇಳಿಸಲಾಗಿದೆ. ಜೂನ್ 13ರಿಂದ ಮುಖ್ಯ ಪರೀಕ್ಷೆಗಳನ್ನು ಆರಂಭಿಸಲಾಗುವುದು. 37 ಮಾದರಿಯ ಪರೀಕ್ಷೆಗಳು ನಡೆಯಲಿವೆ. ಆನಂತರ ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆಗಳೊಂದಿಗೆ ಸಿಸ್ಟಂ ಸಂಯೋಜನೆ ಮಾಡಲಾಗುತ್ತದೆ. ಈ ವರ್ಷದ ಡಿಸೆಂಬರ್‌ ಒಳಗೆ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಮೆಟ್ರೊ‘ ಇತರ ಮಾರ್ಗಗಳಲ್ಲಿ ‘ಡಿಸ್ಟೆನ್ಸ್‌ ಟು ಗೊ’ (ಡಿಟಿಜಿ) ವ್ಯವಸ್ಥೆಯ ಲೋಕೊ ಪೈಲೆಟ್‌ ಮೆಟ್ರೊಗಳೇ ಸಂಚರಿಸುತ್ತಿವೆ. ಆರ್‌.ವಿ.ರಸ್ತೆ–ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಮಾತ್ರ ಚಾಲಕ ರಹಿತ ರೈಲು ಸಂಚರಿಸಲು, ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗಿದೆ. ವಾಣಿಜ್ಯ ಸಂಚಾರ ಆರಂಭಿಸುವಾಗ ಲೋಕೊ ಮಾದರಿಯ ರೈಲುಗಳ ಪೈಲೆಟ್‌ಗಳನ್ನು (ಚಾಲಕರನ್ನು) ನಿಯೋಜಿಸಲಾಗುವುದು. ಯಾವುದೇ ಸಮಸ್ಯೆ ಉಂಟಾಗದಿರುವುದು ಖಾತ್ರಿಯಾದ ಮೇಲೆ ಲೋಕೊ ಪೈಲೆಟ್‌ಗಳಿಲ್ಲದೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಂಡರೆ ಎಲೆಕ್ಟ್ರಾನಿಕ್‌ ಸಿಟಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನದಟ್ಟಣೆಯನ್ನು ಕಡಿಮೆಗೊಳಿಸಲಿದೆ. 

‘ಅವಸರ ಮಾಡಬೇಡಿ’

ಆರಂಭಿಕ ನಿಲ್ದಾಣ ಆರ್‌.ವಿ. ರಸ್ತೆಯಲ್ಲಿಯೇ ಮೆಟ್ರೊ ನಿಲ್ದಾಣ ಪೂರ್ಣಗೊಂಡಿಲ್ಲ. ಜಯದೇವ ಮೆಟ್ರೊ ನಿಲ್ದಾಣದ ಕಾಮಗಾರಿಯೂ ಮುಗಿದಿಲ್ಲ. ಹಳಿ ಕಾಮಗಾರಿ ಮುಗಿದಿದೆ ಎಂದು ಪರೀಕ್ಷೆಗಳನ್ನು ಮಾಡಬಹುದು. ಆದರೆ, ವಾಣಿಜ್ಯ ಸಂಚಾರ ಹೇಗೆ ಆರಂಭಿಸುತ್ತಾರೆ? ಹಳಿಯಲ್ಲಿಯೂ ಪ‍ರೀಕ್ಷೆ ಮಾಡಲು ಅಗತ್ಯ ರೈಲು ಕೋಚ್‌ಗಳು ಬಾರದೇ ಇರುವಾಗ ಅವಸರ ಏಕೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಹಳಿಗೆ ಒಬ್ಬರು ಹಾರಿದ್ದರು. ಇನ್ನೊಮ್ಮೆ ಹಳಿಯ ಮೇಲೆ ಮರದ ಕೊಂಬೆ ಬಿದ್ದಿತ್ತು. ಇಂಥ ಸಂದರ್ಭದಲ್ಲಿ ಲೋಕೊ ಪೈಲೆಟ್‌ಗಳು ತಕ್ಷಣಕ್ಕೆ ಮೆಟ್ರೊ ರೈಲುಗಳನ್ನು ಸ್ಥಗಿತಗೊಳಿಸಿದ್ದರು. ಚಾಲಕ ರಹಿತ ಎಂಜಿನ್‌ ರೈಲು ಚಲಾಯಿಸುವಾಗ ಇಂಥ ಅಡೆತಡೆಗಳು ಉಂಟಾದರೆ ತಕ್ಷಣ ನಿಲ್ಲಿಸಲು ಹೇಗೆ ಕ್ರಮ ಕೈಗೊಳ್ಳುತ್ತಾರೆ? ಎಲ್ಲೋ ಇರುವ ಕಂಟ್ರೋಲ್‌ ವ್ಯವಸ್ಥೆಗೆ ಮಾಹಿತಿ ರವಾನಿಸಿ, ಅವರು ಕ್ರಮ ಕೈಗೊಳ್ಳುವ ಹೊತ್ತಿಗೆ ಇಲ್ಲಿ ರೈಲುಗಳು ಮುಂದಕ್ಕೆ ಚಲಿಸಿದ್ದರೆ ಇನ್ನಷ್ಟು ಅವಘಡಗಳು ಉಂಟಾಗಬಹುದು. ಮೊದಲು ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಅಗತ್ಯ ಇರುವ ಕೋಚ್‌ ಸೆಟ್‌ಗಳು ಬಂದ ಬಳಿಕವೇ ಪರೀಕ್ಷೆ ಆರಂಭಿಸುವುದು ಒಳಿತು ಎಂಬುದು ಅವರ ಸಲಹೆ.

ನಿಲ್ದಾಣಗಳು

ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್‌ ರಸ್ತೆ, ಇನ್ಫೊಸಿಸ್‌ ಫೌಂಡೇಶನ್‌ (ಕೋಣಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್‌ ಸಿಟಿ, ಬಿರಿಟೆನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಬಿಟಿಎಂ ಲೇಔಟ್‌, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್‌ವಿ. ರಸ್ತೆ ಸೇರಿ ಒಟ್ಟು 16 ನಿಲ್ದಾಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT