ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿರುವ ಅಜ್ಜ– ಅಜ್ಜಿ ನೋಡಲು ಬೆಂಗಳೂರಿಂದ ನಡೆದೇ ಹೊರಟಿದ್ದ ಬಾಲಕಿ!

Last Updated 7 ಸೆಪ್ಟೆಂಬರ್ 2021, 17:28 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯನ್ನು ತಾವರೆಕೆರೆ ಸಮೀಪದ ಮನೆಯೊಂದರಲ್ಲಿ ಪತ್ತೆ ಮಾಡಿರುವ ಪೊಲೀಸರು, ಆಕೆಯನ್ನು ಸುರಕ್ಷಿತವಾಗಿ ಸಂಬಂಧಿಕರ ಸುಪರ್ದಿಗೆ ಒಪ್ಪಿಸಿದ್ದಾರೆ.

'ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಬಾಲಕಿ, ಕೊಡಗಿನಲ್ಲಿರುವ ಅಜ್ಜ–ಅಜ್ಜಿ ನೋಡಲೆಂದು ಬೆಂಗಳೂರಿನಿಂದ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ನಡಿಗೆ ಮೂಲಕ 30 ಕಿ.ಮೀ ಕ್ರಮಿಸಿ ತಾವರೆಕೆರೆ ಬಳಿ ಮಹಿಳೆಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮನೆಗೆ ಹೋಗಿ ಬಾಲಕಿಯನ್ನು ಕರೆತರಲಾಗಿದೆ’ ಎಂದು ಬನಶಂಕರಿ ಪೊಲೀಸರು ಹೇಳಿದರು.

‘ಒಂದೂವರೆ ವರ್ಷದ ಹಿಂದೆಯೇ ಬಾಲಕಿಯ ತಂದೆ–ತಾಯಿ ತೀರಿಕೊಂಡಿದ್ದಾರೆ. ಅನಾಥೆ ಆಗಿದ್ದ ಬಾಲಕಿಯನ್ನು ಸಂಬಂಧಿಯಾದ ಅಯ್ಯಪ್ಪ ಎಂಬುವರು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಶಾಲೆಗೂ ಸೇರಿಸಿದ್ದರು. ಆಗಸ್ಟ್ 21ರಂದು ಬಾಲಕಿ ನಾಪತ್ತೆಯಾಗಿದ್ದರು. ಗಾಬರಿಗೊಂಡಿದ್ದ ಅಯ್ಯಪ್ಪ, ಠಾಣೆಗೆ ದೂರು ನೀಡಿದ್ದರು.’

‘ಮನೆ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿತ್ತು. ಬಾಲಕಿ ನಡಿಗೆ ಮೂಲಕವೇ ಮೈಸೂರು ರಸ್ತೆಯತ್ತ ಹೊರಟಿದ್ದು ಗೊತ್ತಾಗಿತ್ತು. ಬಳಿಕ ಎಲ್ಲ ಠಾಣೆ ವ್ಯಾಪ್ತಿಯ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕಲಾಯಿತು. ಬಾಲಕಿಯ ಫೋಟೊ ಸಮೇತ ಭಿತ್ತಿಪತ್ರಗಳನ್ನು ಮುದ್ರಿಸಿ, ಮಾರ್ಗದುದ್ದಕ್ಕೂ ಹಂಚಿಕೆ ಮಾಡಲಾಗಿತ್ತು’ ಎಂದೂ ಪೊಲೀಸರು ತಿಳಿಸಿದರು.

‘ರಸ್ತೆಯಲ್ಲಿ ನಡೆದು ಸುಸ್ತಾಗಿದ್ದ ಬಾಲಕಿಯನ್ನು ಮಹಿಳೆಯೊಬ್ಬರು ಮಾತನಾಡಿಸಿದ್ದರು. ‘ನನಗೆ ತಂದೆ–ತಾಯಿ ಇಲ್ಲ. ಕೊಡಗಿನಲ್ಲಿರುವ ಅಜ್ಜ– ಅಜ್ಜಿ ಮನೆಗೆ ಹೊರಟಿದ್ದೇನೆ’ ಎಂದಿದ್ದ ಬಾಲಕಿ, ಕೆಲದಿನ ಆಶ್ರಯ ನೀಡುವಂತೆ ಕೋರಿದ್ದಳು. ಅದಕ್ಕೆ ಒಪ್ಪಿದ್ದ ಮಹಿಳೆ, ಬಾಲಕಿಯನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮನೆಗೆ ಹೋಗಿ ಬಾಲಕಿಯನ್ನು ಕರೆತರಲಾಗಿದೆ. ಮಹಿಳೆ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದೂ ಹೇಳಿದರು.

ಸಂಬಂಧಿಕರ ವಿಚಾರಣೆ: ‘ಸಂಬಂಧಿಕರು ಬಾಲಕಿಗೆ ತೊಂದರೆ ನೀಡಿರುವ ಅನುಮಾನವಿತ್ತು. ಹೀಗಾಗಿ, ಸಂಬಂಧಿಕರನ್ನು ವಿಚಾರಣೆ ನಡೆಸಲಾಯಿತು. ಯಾವುದೇ ತೊಂದರೆ ನೀಡಿರಲಿಲ್ಲವೆಂಬುದು ಬಾಲಕಿ ಹೇಳಿಕೆಯಿಂದ ಖಾತ್ರಿ ಆಯಿತು. ಹೀಗಾಗಿ, ಬಾಲಕಿಯನ್ನು ಸಂಬಂಧಿಕರ ಜೊತೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT