ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್

Published 12 ಮೇ 2024, 15:43 IST
Last Updated 12 ಮೇ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಅದೇ ಕಂಪನಿಯ ವ್ಯವಸ್ಥಾಪಕನ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕೋರಮಂಗಲದ ಪೇಯಿಂಗ್ ಗೆಸ್ಟ್‌ (ಪಿ.ಜಿ) ಕಟ್ಟಡದಲ್ಲಿ ವಾಸವಿರುವ 27 ವರ್ಷ ವಯಸ್ಸಿನ ಯುವತಿ ದೂರು ನೀಡಿದ್ದಾರೆ. ಅದರನ್ವಯ ಕಂಪನಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಯುವತಿ, ಮೂರು ತಿಂಗಳ ಹಿಂದೆಯಷ್ಟೇ ಕೊರಿಯರ್ ಕಂಪನಿ ಕೆಲಸಕ್ಕೆ ಸೇರಿದ್ದರು. ಆರೋಪಿಯ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 10 ಗಂಟೆಯವರೆಗೂ ಯುವತಿಯನ್ನು ಕಚೇರಿಯಲ್ಲಿ ಕೂರಿಸಿಕೊಳ್ಳುತ್ತಿದ್ದ ಆರೋಪಿ, ಹೆಚ್ಚುವರಿ ಕೆಲಸ ಮಾಡಿಸುತ್ತಿದ್ದ. ನಂತರ, ತನ್ನ ಕಾರಿನಲ್ಲಿಯೇ ಯುವತಿಯನ್ನು ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಕರೆದೊಯ್ದು ಬಿಟ್ಟು ಬರುತ್ತಿದ್ದ’ ಎಂದು ತಿಳಿಸಿದರು.

‘ಮೇ 4ರಂದು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಅಸಭ್ಯವಾಗಿ ವರ್ತಿಸಿದ್ದ. ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ತಾನು ಹೇಳಿದಂತೆ ಕೇಳದಿದ್ದರೆ, ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದ. ಇದರಿಂದ ನೊಂದ ಯುವತಿ, ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿದರು.

‘ಯುವತಿಗೆ ಸಂಬಂಧಪಟ್ಟ ಲೈಂಗಿಕ ಕಿರುಕುಳ ಪ್ರಕರಣವಾಗಿರುವುದರಿಂದ, ಅವರ ಹೆಸರು ಹಾಗೂ ವಿಳಾಸ ಬಹಿರಂಗಪಡಿಸಲಾಗದು. ಜೊತೆಗೆ, ಆರೋಪಿ ಹೆಸರು ಸಹ ಗೌಪ್ಯವಾಗಿರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT