ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ತಂತಿ ತುಳಿದು ತಾಯಿ, ಮಗು ಸಾವು: ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ

ಇದು ದುರಾಡಳಿತ ಎಂದು ಸ್ವಯಂಪ್ರೇರಿತ ಪ್ರಕರಣ ದಾಖಿಸಿಕೊಂಡು ತನಿಖೆ ಆರಂಭಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ
Published 22 ನವೆಂಬರ್ 2023, 12:39 IST
Last Updated 22 ನವೆಂಬರ್ 2023, 12:39 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಗೋಡಿ ಹೋಪ್‌ ಫಾರ್ಮ್‌ ಬಳಿಯ ವೈಟ್ ಫೀಲ್ಡ್‌ ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಬೆಸ್ಕಾಂ ವಿದ್ಯುತ್‌ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿರುವ ಲೋಕಾಯುಕ್ತರು, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂನ ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯ ಮುಖ್ಯ ಎಂಜಿನಿಯರ್‌, ಪೂರ್ವ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್‌, ವೈಟ್‌ಫೀಲ್ಡ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌, ಇ–4 ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ದುರ್ಘಟನೆ ಸಂಭವಿಸಿದ ಸ್ಥಳದ ವ್ಯಾಪ್ತಿಯ ಸಹಾಯಕ ಎಂಜಿನಿಯರ್‌ಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

‘ವಿದ್ಯುತ್‌ ಮಾರ್ಗಗಳ ನಿರ್ವಹಣೆಯಲ್ಲಿನ ಲೋಪದಿಂದಾಗಿಯೇ ದುರ್ಘಟನೆ ಸಂಭವಿಸಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಗಳು ಕಂಡುಬರುತ್ತಿವೆ. ಇದನ್ನು ‘ದುರಾಡಳಿತ’ದ ವ್ಯಾಪ್ತಿಯಲ್ಲಿ ಪರಿಗಣಸಿ ವಿಚಾರಣೆ ಆರಂಭಿಸಲಾಗಿದೆ’ ಎಂದು ಲೋಕಾಯುಕ್ತರು ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

‘ಬೆಸ್ಕಾಂ ಸ್ಥಳೀಯ ಕಚೇರಿಯಿಂದ 100 ಮೀಟರ್‌ ದೂರದಲ್ಲೇ ದುರ್ಘಟನೆ ಸಂಭವಿಸಿದೆ. ರಾತ್ರಿಯೇ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿತ್ತು. ಅದೇ ಮಾರ್ಗದಲ್ಲಿ ವಿದ್ಯುತ್‌ ಹರಿಸಿದ್ದರಿಂದ ಇಬ್ಬರ ಸಾವು ಸಂಭವಿಸಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ನಿಯಮಿತವಾಗಿ ವಿದ್ಯುತ್‌ ಮಾರ್ಗಗಳನ್ನು ಪರಿಶೀಲಿಸುವುದು ಮತ್ತು ತುಕ್ಕು ಹಿಡಿದ, ತುಂಡಾಗುವ ಸ್ಥಿತಿಯಲ್ಲಿರುವ ತಂತಿಗಳನ್ನು ಬದಲಿಸಬೇಕಿರುವುದು ಬೆಸ್ಕಾಂ ಅಧಿಕಾರಿಗಳ ಜವಾಬ್ದಾರಿ. ಆದರೆ, ಆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಪಾದಚಾರಿ ಮಾರ್ಗಗಳಲ್ಲೂ ವಿದ್ಯುತ್‌ ತಂತಿಗಳು ಜೋತು ಬಿದ್ದಿರುವುದನ್ನು ಕಾಣಬಹುದು. ಇವೆಲ್ಲವೂ ದುರಾಡಳಿತ ಮತ್ತು ಕರ್ತವ್ಯಲೋಪಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಪೊಲೀಸ್‌ ತನಿಖೆಗೂ ಆದೇಶ: ದುರ್ಘಟನೆಗೆ ಸಂಬಂಧಿಸಿದಂತೆ ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತದ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕದ ಎಸ್‌ಪಿಯವರಿಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ಮುಂದಿನ ವಿಚಾರಣೆ ಡಿಸೆಂಬರ್‌ 8ಕ್ಕೆ ನಿಗದಿಯಾಗಿದ್ದು, ಅಷ್ಟರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಗಡುವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT