ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಹಡಿ ಕಟ್ಟಡಕ್ಕೆ ಭೂವಿವಾದ ಅಡ್ಡಿ

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ
Last Updated 24 ಅಕ್ಟೋಬರ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಡವರಿಗೆ ವಸತಿ ಒದಗಿಸುವ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆ ಆರಂಭದಲ್ಲೇ ಅನೇಕ ಅಡ್ಡಿ ಆತಂಕಗಳನ್ನು ಎದುರಿಸುತ್ತಿದೆ. ಈ ಯೋಜನೆಗೆ ಗುರುತಿಸಲಾದ ಜಮೀನುಗಳಲ್ಲಿ ಮೂರನೇ ಒಂದರಷ್ಟು ಜಮೀನುಗಳಲ್ಲಿಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಒಂದೋ ಭೂವಿವಾದದ ತೊಡಕು ಎದುರಾಗಿದೆ ಅಥವಾ ಸ್ಥಳೀಯರ ವಿರೋಧವಿದೆ. ಇದರಿಂದಾಗಿ ಇಡೀ ಯೋಜನೆಯೇ ಕುಂಟುತ್ತಾ ಸಾಗುತ್ತಿದೆ.

ಎ.ಟಿ.ರಾಮಸ್ವಾಮಿ ವರದಿ ಆಧಾರದಲ್ಲಿ ಒತ್ತುವರಿ ತೆರವುಗೊಳಿಸಿದ ಜಾಗಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆಯ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಮೋನೊಲಿಥಿಕ್‌ ಶಿಯರ್‌ ವಿನ್ಯಾಸವನ್ನು ಬಳಸಲಿದ್ದೇವೆ. ಏನೇ ತೊಡಕುಗಳಿದ್ದರೂ ಎರಡು ವರ್ಷಗಳ ಒಳಗೆ ಈ ಯೋಜನೆ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.

ಈ ಯೋಜನೆ ಕುರಿತು ವಸತಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳು ಪ್ರಸ್ತುತಪಡಿಸಿದ ಮಾಹಿತಿ ಪ್ರಕಾರ, ‘ಈ ಯೋಜನೆಯ ಮೊದಲು ಐದು ಪ್ಯಾಕೇಜ್‌ಗಳಲ್ಲಿ 26,102 ಮನೆಗಳನ್ನು ನಿರ್ಮಿಸಲು 175 ಎಕರೆ 34 ಗುಂಟೆ ಜಾಗ ಗುರುತಿಸಿದ್ದು, ಈ ಪೈಕಿ ಅರ್ಧದಷ್ಟು ಜಮೀನುಗಳಿಗೆ ಸಂಬಂಧಿಸಿ ತೊಡಕುಗಳಿವೆ. ಈ ಯೋಜನೆಗೆ ₹ 2,737.81 ಕೋಟಿ ಮಂಜೂರಾಗಿದೆ. ವಸತಿ ಸಮುಚ್ಚಯಗಳನ್ನು ನಿರ್ಮಿಸುವುದರ ಜೊತೆಗೆ ಅವುಗಳಿಗೆ ಸಂಪರ್ಕ ರಸ್ತೆ, ಬೀದಿ ದೀಪ, ಮಳೆ ನೀರು ಸಂಗ್ರಹ ವ್ಯವಸ್ಥೆ ಮತ್ತಿತರ ಸವಲತ್ತುಗಳನ್ನು ಕಲ್ಪಿಸಲು ಇದು ಬಳಕೆ ಆಗಲಿದೆ'. 60 ಎಕರೆ 11 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಿವೆ. 25 ಎಕರೆ 6 ಗುಂಟೆ ಜಾಗದಲ್ಲಿ ನಿರ್ಮಾಣ ಚಟುವಟಿಕೆ ಆರಂಭವಾಗಿದೆಯಾದರೂ ಅಲ್ಲಿ ಸ್ಥಳೀಯರ ವಿರೋಧದಿಂದಾಗಿ ಕೆಲಸ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಸ್ಥಳದಲ್ಲಿ ದೇವಸ್ಥಾನ ಮತ್ತಿತರ ರಚನೆಗಳಿದ್ದು ಅವುಗಳನ್ನು ಬಿಟ್ಟುಕೊಡಲು ಸ್ಥಳೀಯರು ಒಪ್ಪುತ್ತಿಲ್ಲ.

ಕೆಲವು ಪ್ರಕರಣಗಳಲ್ಲಿ ನಿವೇಶನಗಳನ್ನು ಕಂದಾಯ ಇಲಾಖೆ ಇನ್ನಷ್ಟೇ ರಾಜೀವ ಗಾಂಧಿ ವಸತಿ ನಿಗಮಕ್ಕೆ (ಆರ್‌ಜಿಎಚ್‌ಸಿಎಲ್) ಹಸ್ತಾಂತರಿಸಬೇಕಿದೆ. ಒಂದು ಪ್ರಕರಣದಲ್ಲಿ ಯೋಜನೆಗೆ ಗುರುತಿಸಿದ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಜಾಗ ಬಿಟ್ಟುಕೊಡಬೇಕಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಒಂದು ಕಡೆ ವಸತಿ ನಿರ್ಮಾಣಕ್ಕೆ ಅರಣ್ಯ ಇಲಾಖೆಯೂ ಆಕ್ಷೇಪ ವ್ಯಕ್ತಪಡಿಸಿದೆ.

ನಿಗಮವು ವಸತಿ ಸಮುಚ್ಚಯಗಳ ನಿರ್ಮಾಣಕ್ಕೆ ಗುತ್ತಿಗೆ ಕಂಪನಿಗಳನ್ನು ಆಯ್ಕೆ ಮಾಡುವಲ್ಲೂ ಸಮಸ್ಯೆ ಎದುರಿಸುತ್ತಿದೆ. ‘ನಾವು ಸೂಚಿಸಿರುವ ವಿನ್ಯಾಸದಲ್ಲಿ 14 ಮಹಡಿಗಳ ಕಟ್ಟಡ ನಿರ್ಮಿಸುವುದಕ್ಕೆ ಅಗತ್ಯ ಇರುವಷ್ಟು ಯಂತ್ರೋಪಕರಣಗಳನ್ನು ಬಹುತೇಕ ಕಂಪನಿಗಳು ಹೊಂದಿಲ್ಲ. ಟೆಂಡರ್‌ ಪ್ರೀಮಿಯಂ ದರಗಳನ್ನು ಪರಿಷ್ಕರಿಸಿದ ಬಳಿಕ ಐದು ಪ್ಯಾಕೇಜ್‌ಗಳನ್ನು ನಿರ್ವಹಿಸಲು ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ಆದರೆ, ಇನ್ನುಳಿದ ಎರಡು ಪ್ಯಾಕೇಜ್‌ಗಳಿಗೆ ಒಬ್ಬ ಗುತ್ತಿಗೆದಾರ ಮಾತ್ರ ಆಸಕ್ತಿ ತೊರಿಸಿದ್ದಾರೆ. ಅವು
ಗಳಿಗೆ ನಾವು ಮರುಟೆಂಡರ್‌ ಕರೆಯಲೇ ಬೇಕಾದ ಅನಿವಾರ್ಯ ನಿರ್ಮಾಣವಾಗಿದೆ’ ಎಂದು ನಿಗಮದ ಮುಖ್ಯ ಎಂಜಿನಿ
ಯರ್‌ ಸಣ್ಣ ಚಿಟ್ಟಿಯಪ್ಪ ತಿಳಿಸಿದರು.

’ಈ ಯೋಜನೆಗೆ ಗುರುತಿಸಿದ ಜಾಗಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ನಿಗಮದ ಪರವಾಗಿಯೇ ತೀರ್ಪು ಬರಲಿದೆ.. ಬೆಂಗಳೂರು ನಗರ ಜಿಲ್ಲಾಧಿಕಾರಿಯವರು 1,014 ಎಕರೆ ಜಾಗವನ್ನು ಒದಗಿಸಿದ್ದಾರೆ. ವ್ಯಾಜ್ಯಗಳಿಂದಾಗಿ ಯೋಜನೆ ವಿಳಂಬವಾದರೆ ಪರ್ಯಾಯ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದು’ ಎಂದು ಅವರು ತಿಳಿಸಿದರು.

ಅಂಕಿ ಅಂಶ

9 – ಯೋಜನೆಯ ಮೊದಲ ಹಂತದಲ್ಲಿ ಟೆಂಡರ್‌ ಕರೆದಿರುವ ಪ್ಯಾಕೇಜ್‌ಗಳು

3 – ಮರು ಟೆಂಡರ್‌ ಕರೆದಿರುವ ಪ್ಯಾಕೇಜ್‌ಗಳು

46,499 – ಒಂಬತ್ತು ‍ಪ್ಯಾಕೇಜ್‌ಗಳಲ್ಲಿ ನಿರ್ಮಾಣವಾಗುವ ಒಟ್ಟು ಮನೆಗಳು

38,403 – ಮೂರು ಬಿಎಚ್‌ಕೆ ಮನೆಗಳು

8,096 – ಎರಡು ಬಿಎಚ್‌ಕೆ ಮನೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT