ಸೋಮವಾರ, ನವೆಂಬರ್ 18, 2019
25 °C
ಡೆಲ್‌ ಉದ್ಯೋಗಿ ಪಾಯಲ್‌ ಸುರೇಖಾ ಕೊಲೆ l ಮೊಬೈಲ್ ಲೊಕೇಶನ್ ಬಳಸಿ ಅಪರಾಧಿ ಪತ್ತೆ ಮಾಡಿದ್ದ ಪೊಲೀಸರು

ಆರೋಪಿ ಪತ್ತೆಗೆ ನೆರವಾದ ಜರ್ಕಿನ್‌, ಸಿಡಿಆರ್‌!

Published:
Updated:
Prajavani

ಬೆಂಗಳೂರು: ಪುಟ್ಟೇನಹಳ್ಳಿ ಕೆರೆ ದಂಡೆ ಪೊದೆಯೊಳಗೆ ಬಿದ್ದಿದ್ದ ಜರ್ಕಿನ್‌, ಚಾಕು ಮತ್ತು ಮೊಬೈಲ್‌ ಸಿಡಿಆರ್‌ ವಿವರ ಡೆಲ್‌ ಉದ್ಯೋಗಿ ಪಾಯಲ್‌ ಸುರೇಖಾ ಕೊಲೆ ಅಪರಾಧಿ ಜೇಮ್ಸ್‌ ಕುಮಾರ್‌ ರಾಯ್‌ ಪತ್ತೆಗೆ ನೆರವಾದವು.

‍ಪಾಯಲ್‌ ಕೊಲೆ ಪ್ರಕರಣದಲ್ಲಿ ಜೇಮ್ಸ್‌ ಕುಮಾರ್‌ ರಾಯ್‌ ಅವರಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಜೆ.ಪಿ ನಗರದಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ಎಸ್‌.ಕೆ. ಉಮೇಶ್‌ ಈ ಪ್ರಕರಣದ ತನಿಖೆ ನಡೆಸಿದ್ದರು. ಅವರು ನಡೆಸಿದ್ದ ತನಿಖೆಯನ್ನೇ ಆಧಾರವಾಗಿಟ್ಟುಕೊಂಡು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

2010ರ ಡಿಸೆಂಬರ್‌ 17ರಂದು ಜೆ.ಪಿ.ನಗರ 6ನೇ ಹಂತದ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಸುರೇಖಾ ಅವರನ್ನು ಅಪರಾಧಿ ಕತ್ತು ಸೀಳಿ ಕೊಲೆ ಮಾಡಿದ್ದ. ಅವರ ದೇಹದ ಮೇಲೂ 50– 60 ಸಲ ಚಾಕುವಿನಿಂದ ಇರಿದಿದ್ದ. ಹತ್ತು ನಿಮಿಷದಲ್ಲಿ ಕೃತ್ಯವೆಸಗಿ ಕಂಬಿ ಕಿತ್ತಿದ್ದ. ಪುಟ್ಟೇನಹಳ್ಳಿ ಕೆರೆ ಬಳಿ ಚಾಕು ಹಾಗೂ ಜರ್ಕಿನ್‌ ಬಿಸಾಡಿದ್ದ ಸಂಗತಿ ತನಿಖೆಯಿಂದ ಬಯಲಿಗೆ ಬಂದಿತ್ತು. 

ಸುರೇಖಾ ಅವರ ಪತಿ ಅನಂತನಾರಾಯಣ ಮಿಶ್ರಾ ಅವರನ್ನು ಪೊಲೀಸರು ವಿಚಾರಣೆ ಮಾಡಿದಾಗ ಅಪರಾಧಿ ರಾಯ್‌ ಕುರಿತು ಮಾಹಿತಿ ನೀಡಿದ್ದರು. ಈ ಜಾಡು ಹಿಡಿದು ಹೊರಟಾಗ ಕೃತ್ಯ ನಡೆದ ದಿನ ಆತ ಬಳಸಿದ ಮೊಬೈಲ್‌ ಲೊಕೇಶನ್ ಜೆ.ಪಿ. ನಗರದಲ್ಲಿ ಪತ್ತೆ ಆಗಿತ್ತು. ಅವನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ.

ಆನಂತರ  ಚಾಕು, ಜರ್ಕಿನ್‌ ಬಿಸಾಡಿದ್ದ ಜಾಗ ತೋರಿಸಿದ್ದ. ಶವದ ಮೇಲಿದ್ದ ಅಪರಾಧಿಯ ಕೂದಲು, ಜರ್ಕಿನ್‌ ಮೇಲೆ ಬಿದ್ದಿದ್ದ ರಕ್ತ, ಚಾಕುವಿನ ಮೇಲಿದ್ದ ಕಲೆಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಿಂದ ರಾಯ್‌ ಕೊಲೆಗಾರ ಎಂಬುದು ಖಚಿತವಾಯಿತು ಎಂದು ಉಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‍ಪಾಯಲ್‌ ಮತ್ತು ಅನಂತ ನಾರಾಯಣ ಮಿಶ್ರಾ ಬೆಂಗಳೂರಿನಲ್ಲಿ 2006ರಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್‌ಸಿ ಓದುತ್ತಿದ್ದರು. ಈ ಸಂದರ್ಭದಲ್ಲಿ ಪ್ರೀತಿ ಬೆಳೆದು ಆರ್‌ಬಿಐ ಬಡಾವಣೆಯ ಉಮಾ ಸಂಜೀವಿನಿ ಅಪಾರ್ಟ್‌ಮೆಂಟ್‌ನಲ್ಲಿ ‘ಲಿವಿಂಗ್‌ ಟುಗೆದರ್‌’ ಸಂಬಂಧದಲ್ಲಿದ್ದರು. 2008ರಲ್ಲಿ ಮದುವೆ ಆಗಿದ್ದರು. ಮದುವೆಗೆ ‍ಪಾಯಲ್‌ ಅವರ ತಂದೆ ದೀನ್‌ ದಯಾಳ್‌ ಸುರೇಖಾ ಅವರ ವಿರೋಧವಿತ್ತು.

ಅಳಿಯನೇ ಮಗಳನ್ನು ಕೊಂದಿದ್ದಾರೆ ಎಂದು ದೀನ್‌ ದಯಾಳ್‌ ಅವರಿಗೆ ಅನುಮಾನವಿತ್ತು. ಜೈಲಿನಲ್ಲಿದ್ದ ರಾಯ್‌ ಕೂಡಾ ಸುರೇಖಾ ಅವರನ್ನು ಕೊಲೆ ಮಾಡಲು ತಮಗೆ ಮಿಶ್ರಾ ₹10 ಲಕ್ಷ ಕೊಟ್ಟಿದ್ದಾರೆ ಎಂದು ಪತ್ರ ಬರೆದಿದ್ದು ಈ ಅನುಮಾನವನ್ನು ಗಟ್ಟಿಗೊಳಿಸಿತ್ತು. ಇದರಿಂದಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ, ಸಿಬಿಐ ಜೆ.ಪಿ. ನಗರ ಪೊಲೀಸರ ತನಿಖೆಯನ್ನೇ ಎತ್ತಿ ಹಿಡಿದಿತ್ತು.

ಕೆಲಸದಿಂದ ತೆಗೆದಿದ್ದೇ ಕೊಲೆಗೆ ಕಾರಣ!
ಪಾಯಲ್‌ ಸುರೇಖಾ ಹಾಗೂ ಅವರ ಪತಿ ಅನಂತ ನಾರಾಯಣ ಮಿಶ್ರಾ ಒಡಿಶಾಕ್ಕೆ ಹಿಂತಿರುಗಿದ ಬಳಿಕ ಕಟಕ್‌ನಲ್ಲಿ ‘ಜಿಮ್‌’ ಆರಂಭಿಸಿದರು. ಅಲ್ಲಿ ಇನ್‌ಸ್ಟ್ರಕ್ಟರ್‌ ಆಗಿ ಜೇಮ್ಸ್‌ ಸೇರಿಕೊಂಡಿದ್ದ. ಜಿಮ್‌ಗೆ ಬರುವ ಮಹಿಳೆಯರ ಫೋಟೊಗಳನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಕ್ಲಿಕ್ಕಿಸುತ್ತಿದ್ದ. ಅಲ್ಲದೆ, ವ್ಯಾಯಾಮಕ್ಕೆ ಇಟ್ಟಿದ್ದ ಸಲಕರಣೆಗಳನ್ನು ಮಾರಿಕೊಳ್ಳುತ್ತಿದ್ದ. ಈ ವಿಷಯ ಸುರೇಖಾ ಅವರ ಗಮನಕ್ಕೆ ಬಂದ ಬಳಿಕ ಪತಿಗೆ ಹೇಳಿ ಅವನನ್ನು ಕೆಲಸದಿಂದ ತೆಗೆಸಿದ್ದರು. ಇದೇ ಕೊಲೆಗೆ ಕಾರಣವಾಯಿತು.

2010ರಲ್ಲಿ ಸುರೇಖಾ ಅವರಿಗೆ ಬೆಂಗಳೂರಿನ ಡೆಲ್‌ನಲ್ಲಿ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರಲು ಪತಿ ಜೊತೆ ಬಂದಿದ್ದರು. ಮೊದಲಿದ್ದ ಮನೆಯ ಬಳಿಯಲ್ಲೇ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಇದ್ದರು. ಮಿಶ್ರಾ ಅವರೂ ಒಂದು ವಾರ ಇದ್ದು ಹೋಗಿದ್ದರು. ಮಿಶ್ರಾ ಮತ್ತು ರಾಯ್‌ ಇಬ್ಬರಿಗೂ ಗೆಳೆಯರಾಗಿದ್ದ ಸಾಫ್ಟ್‌ವೇರ್‌ ಕಂಪನಿಯೊಂದರ ಉದ್ಯೋಗಿ ಭವಾನಿ ಶಂಕರ್‌, ಸುರೇಖಾ ದಂಪತಿ ಪುನಃ ಬೆಂಗಳೂರಿಗೆ ಬಂದ ವಿಷಯವನ್ನು ರಾಯ್‌ಗೆ ಹೇಳಿದ್ದರು. ಸುರೇಖಾ ಮನೆಗೂ ಅವರನ್ನು ಕರೆದುಕೊಂಡು ಹೋಗಿದ್ದರು. ಇದಾದ ಒಂದೇ ವಾರದಲ್ಲಿ ಅಪರಾಧಿ ಸುರೇಖಾ ಅವರ ಕೊಲೆ ಮಾಡಿದ್ದ. ಅಪರಾಧಿ ಮೊಬೈಲ್‌ ವಶಪಡಿಸಿಕೊಂಡಿದ್ದ ಜೆ.ಪಿ ನಗರ ಪೊಲೀಸರು ಮಹಿಳೆಯರ ಚಿತ್ರಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ಮಿಶ್ರಾ ಅವರನ್ನೇ ಕೊಲ್ಲಲು ಯೋಜಿಸಿದ್ದ!
ಕೆಲಸದಿಂದ ತೆಗೆದಿದ್ದಕ್ಕಾಗಿ ಹಗೆ ಸಾಧಿಸುತ್ತಿದ್ದ ಜೇಮ್ಸ್‌, ಜಿಮ್‌ ಮಾಲೀಕ ಮಿಶ್ರಾ ಅವರನ್ನೇ ಕೊಲೆ ಮಾಡಲು ಬಯಸಿದ್ದ. ಈ ಉದ್ದೇಶಕ್ಕಾಗಿ ಬಿಹಾರದ ಮುಂಗೇರ್‌ನಿಂದ ಪಿಸ್ತೂಲ್‌ ಖರೀದಿಸಿಕೊಂಡು ಬಂದಿದ್ದ. ಆದರೆ, ಅವರನ್ನು ಕೊಲ್ಲುವುದು ಕಷ್ಟ ಎಂಬುದನ್ನು ಮನಗಂಡಿದ್ದ ಅಪರಾಧಿ ಯೋಜನೆ ಬದಲಾಯಿಸಿದ್ದ.

ಅಂದು ಬೆಳಿಗ್ಗೆಯೇ ಹೈದರಾಬಾದಿನಿಂದ ನಗರಕ್ಕೆ ಬಂದಿದ್ದ ಅಪರಾಧಿ ಮಿಶ್ರಾ ಅವರ ಬಗ್ಗೆ ಮಾಹಿತಿ ಪಡೆದಿದ್ದ. ಬೆಂಗಳೂರಿನಿಂದ ಕಟಕ್‌ಗೆ ಅವರು ಹಿಂತಿರುಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಸುರೇಖಾ ಅವರಿದ್ದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಹೋಗಿದ್ದ. ಇದನ್ನು ಮುನಾವರ್‌ ಅಲಿ ಎಂಬುವವರು ಗಮನಿಸಿದ್ದರು. ಪ್ರಕರಣದಲ್ಲಿ ಭವಾನಿ ಶಂಕರ್, ಮುನಾವರ್‌ ಅಲಿ ಹಾಗೂ ರಮೇಶ್‌ ಎಂಬುವವರು ಪ್ರಮುಖವಾಗಿ ಸಾಕ್ಷಿ ಹೇಳಿದ್ದರು.

ಪೊಲೀಸರನ್ನೇ ಅನುಮಾನಿಸಿದ್ದ ಸಿಬಿಐ?
ಸುರೇಖಾ ಅವರ ಕೊಲೆ ‍ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಪೊಲೀಸರನ್ನೇ ಅನುಮಾನಿಸಿದ್ದರು. ನಿಜವಾದ ಕೊಲೆ ಆರೋಪಿಯನ್ನು ಬಿಟ್ಟು ನಿರಪರಾಧಿಯನ್ನು ಬಂಧಿಸಿರುವ ಭಾವನೆ ಅವರಿಗಿತ್ತು ಎನ್ನಲಾಗಿದೆ.

ಈ ಸಂಬಂಧ ಪ್ರಕರಣದ ತನಿಖಾಧಿಕಾರಿ ಆಗಿದ್ದ ಜೆ.ಪಿ. ನಗರದ ಇನ್‌ಸ್ಪೆಕ್ಟರ್‌ ಉಮೇಶ್‌ ಅವರನ್ನು ನೂರಕ್ಕೂ ಹೆಚ್ಚು ಸಲ ಕರೆದು ವಿಚಾರಣೆ ನಡೆಸಲಾಗಿತ್ತು. ಆದರೆ, ತಾವು ನಡೆಸಿರುವ ತನಿಖೆ ನಿಖರವಾಗಿದೆ ಎಂದು ಪದೇ ಪದೇ ಪ್ರತಿಪಾದಿಸಿದರು. ಈ ಮಧ್ಯೆ, ಸಿಬಿಐ, ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಬದಲಾವಣೆ ಮಾಡಿತು. ಈ ತಂಡ ಪೊಲೀಸರ ತನಿಖೆಯನ್ನೇ ಸಮರ್ಥಿಸಿತು.

ಪ್ರತಿಕ್ರಿಯಿಸಿ (+)