ಗುರುವಾರ , ಡಿಸೆಂಬರ್ 1, 2022
24 °C
ಆರು ವರ್ಷಗಳಿಂದ ಅಭಿವೃದ್ಧಿಗೆ ಕಾದಿರುವ ಜನ

ನಾಡಪ್ರಭು ಕೆಂಪೇಗೌಡ ಬಡಾವಣೆ: ಲೆಕ್ಕಪರಿಶೋಧನೆ ವಿಳಂಬ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿವೇಶನ ಹಂಚಿಕೆಯಾಗಿ ಆರು ವರ್ಷಗಳು ಕಳೆದಿದ್ದರೂ ನಾಡಪ್ರಭು ಕೆಂಪೇಗೌಡ ಬಡಾವಣೆಯು ಅಭಿವೃದ್ಧಿಗೆ ಕಾದಿದೆ. ಈ ನಡುವೆ ಸಮಗ್ರ ಲೆಕ್ಕಪರಿಶೋಧನೆ ವಿಳಂಬವಾಗುತ್ತಿದ್ದು, ಇದು ಕೂಡ ಅಭಿವೃದ್ಧಿಗೆ ಮತ್ತೊಂದು ತೊಡಕಾಗುವ ಆತಂಕ ನಿವೇಶನದಾರರನ್ನು ಕಾಡುತ್ತಿದೆ.

2,652 ಎಕರೆ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹2,600 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಬಿಡಿಎ ಯೋಜನೆ ರೂಪಿಸಿತ್ತು. ಎಲ್‌ ಆ್ಯಂಡ್ ಟಿ ಮತ್ತು ಎಸ್‌ಪಿಎಂಎಲ್‌ ಅಮೃತ್ ಕಂಪನಿಗಳು ಈ ಕಾಮಗಾರಿ ನಿರ್ವಹಿಸಿವೆ. ಆದರೆ, ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡಿಲ್ಲ.

‘ಅವೈಜ್ಞಾನಿಕವಾಗಿ ಅಂದಾಜು ಸಿದ್ಧಪಡಿಸಿರುವುದರಿಂದ ಕಾಮಗಾರಿ ಪೂರ್ಣಗೊಳಿಲು ಸಾಧ್ಯವಾಗಿಲ್ಲ. ಹೆಚ್ಚುವರಿ ₹650 ಕೋಟಿ ಅಗತ್ಯವಿದೆ’ ಎಂದು ಕಂಪನಿಗಳು ಬಿಡಿಎ ಮುಂದೆ ಬೇಡಿಕೆ ಇಟ್ಟಿದ್ದವು. ಪೂರ್ಣಗೊಂಡಿರುವ ಕಾಮಗಾರಿ ಬಗ್ಗೆ ಆಂತರಿಕ ಲೆಕ್ಕ ಪರಿಶೋಧನೆಯನ್ನು ಬಿಡಿಎ ನಿರ್ವಹಿಸಿತು. ಹೆಚ್ಚುವರಿ ಹಣ ಕೇಳುತ್ತಿರುವುದು ಸರಿಯಾಗಿದೆ ಎಂದು ಆಂತರಿಕ ಲೆಕ್ಕಪರಿಶೋಧನಾ ವರದಿ ಹೇಳಿತ್ತು.

2021 ಜನವರಿ 31ರಂದು ಬಿಡಿಎ ಮಂಡಳಿ ಸಭೆಯಲ್ಲಿ ವರದಿ ಮಂಡಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಿತು. ಅನುಮೋದನೆ ನೀಡದ ಸರ್ಕಾರ, ಮೂರನೇ ಸಂಸ್ಥೆಯಿಂದ ಲೆಕ್ಕಪರಿಶೋಧನೆ ಮಾಡಿಸಲು ಸೂಚನೆ ನೀಡಿತು. ಅದರಂತೆ 2022ರ ಫೆಬ್ರುವರಿಯಲ್ಲಿ ‘ಬ್ಯೂರೋ ವೆರಿಟಾಸ್’ ಸಂಸ್ಥೆಗೆ ಲೆಕ್ಕಪರಿಶೋಧನೆಯ
ಜವಾಬ್ದಾರಿಯನ್ನು ಬಿಡಿಎ ನೀಡಿತ್ತು.

‘ಜೂನ್ ವೇಳೆಗೆ ಬ್ಯೂರೊ ವೆರಿಟಾಸ್ ಮತ್ತು ಬಿಡಿಎ ನಡುವೆ ಹಣಕಾಸು ನಿಗದಿ ವಿಷಯದಲ್ಲಿ ಘರ್ಷಣೆ ಏರ್ಪಟ್ಟಿತು. ಆ ಸಂಸ್ಥೆಯೂ ಹೊರ ನಡೆಯಿತು. ಜೂನ್ 2ರಿಂದ ಮತ್ತೊಂದು ಸಂಸ್ಥೆ ಲೆಕ್ಕಪರೀಶೋಧನೆ ನಡೆಸುತ್ತಿದೆ.
ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದರು. ಆದರೆ, ನಾಲ್ಕು ತಿಂಗಳು ಕಳೆದರೂ ಲೆಕ್ಕ ಪರಿಶೋಧನೆ ಪೂರ್ಣಗೊಂಡಿಲ್ಲ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ವಕ್ತಾರ ಸೂರ್ಯಕಿರಣ್ ತಿಳಿಸಿದರು.

‘ಲೆಕ್ಕಪರಿಶೋಧನೆ ವರದಿ ಬಂದ ಬಳಿಕ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಿ ಅದನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಬೇಕು. ಅನುಮೋದನೆ ದೊರೆಯುವಷ್ಟರಲ್ಲಿ ಬಿಬಿಎಂಪಿ ಅಥವಾ ವಿಧಾನಸಭೆ ಚುನಾವಣೆ ಎದುರಾದರೆ ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಇನ್ನಷ್ಟು ವಿಳಂಬ ಆಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಸದ್ಯ ಕಾಮಗಾರಿ ಆರಂಭವಾಗಿದ್ದು, ಲೆಕ್ಕಪರಿಶೋಧನಾ ವರದಿ ಶೀಘ್ರವೇ ಬರುವ ಸಾಧ್ಯತೆ ಇದೆ. ಕೂಡಲೇ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗ ಆರಂಭವಾಗಿರುವ ಕಾಮಗಾರಿಗೆ ತೊಡಕಾಗುವುದಿಲ್ಲ’ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

1300 ಎಕರೆ ಭೂಸ್ವಾಧೀನ ಬಾಕಿ

ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 4,040 ಎಕರೆ ಭೂಸ್ವಾಧೀನಕ್ಕೆ ಬಿಡಿಎ ಉದ್ದೇಶಿಸಿತ್ತು. ಈ ಪೈಕಿ 2,652 ಎಕರೆ ಸ್ವಾಧೀನವಾಗಿದೆ.

600 ಎಕರೆಗೆ ಸಂಬಂಧಿಸಿದ ವ್ಯಾಜ್ಯ ಹೈಕೋರ್ಟ್‌ನಲ್ಲಿದ್ದು, ತೀರ್ಪಿಗಾಗಿ ಬಿಡಿಎ ಕಾಯುತ್ತಿದೆ. 2,652 ಎಕರೆ ಬಡಾವಣೆಯ ಮಧ್ಯದಲ್ಲೇ ವ್ಯಾಜ್ಯದ ಭೂಮಿಯೂ ಇದೆ.

ಒಟ್ಟಾರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಈಗಿರುವ ಬಡಾವಣೆ ಸಂಪೂರ್ಣ ಅಭಿವೃದ್ಧಿ ಆಗುವುದಿಲ್ಲ ಎಂಬುದು ನಿವೇಶನದಾರರ ಆತಂಕ. ಇದರ ನಡುವೆ 300 ಎಕರೆಯಷ್ಟು ಜಾಗದಲ್ಲಿ ಕಂದಾಯ ಬಡಾವಣೆಗಳು ನಿರ್ಮಾಣವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು