ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷ ತೆವಳಿದ ಹಸಿರು ಮಾರ್ಗದ ವಿಸ್ತರಣೆ

ನಾಗಸಂದ್ರ–ಬಿಐಇಸಿ ನಡುವೆ ಆಗಸ್ಟ್‌ನಲ್ಲಿ ಮೆಟ್ರೊ ರೈಲು ಸಂಚಾರ ನಿರೀಕ್ಷೆ
Last Updated 29 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

ಬೆಂಗಳೂರು: ಭೂ ವಿವಾದ, ಗುತ್ತಿಗೆದಾರರ ವಿಳಂಬ ಸೇರಿ ಹಲವು ತೊಡಕುಗಳ ನಡುವೆ ಮೆಟ್ರೊ ರೈಲು ಹಸಿರು ಮಾರ್ಗದ ವಿಸ್ತರಣೆ (ರೀಚ್‌–3ಸಿ) ಕಾಮಗಾರಿ ಐದು ವರ್ಷಗಳಿಂದ ಕುಂಟುತ್ತಾ ಸಾಗಿದೆ.

ನಾಗಸಂದ್ರದಿಂದ ಬಿಐಇಸಿ (ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ) ತನಕ 3.77 ಕಿಲೋ ಮೀಟರ್‌ ಉದ್ದದ ಮಾರ್ಗದಲ್ಲಿ ಮೂರು ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಬಹುಬೇಡಿಕೆಯ ಈ ಕಾಮಗಾರಿ 2017ರ ಮೇ ತಿಂಗಳಿನಲ್ಲಿ ಆರಂಭವಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯೇ ಈ ಮಾರ್ಗಕ್ಕೆ ಕಗ್ಗಂಟಾಗಿ ಕಾಡಿತ್ತು. ಹೈಕೋರ್ಟ್‌ನಲ್ಲೂ ವ್ಯಾಜ್ಯ ಇದ್ದಿದ್ದರಿಂದ ಈ ಮಾರ್ಗದ ವಿಸ್ತರಣೆ ಕಾಮಗಾರಿಗೆ ಗ್ರಹಣವೇ ಹಿಡಿದಿತ್ತು. ಕಾಮಗಾರಿಯೂ ಸ್ಥಗಿತಗೊಂಡಿತ್ತು.

ಚಿಕ್ಕಬಿದರಕಲ್ಲು ಮೂಲಕ ಜಿಂದಾಲ್‌–ಪ್ರೆಸ್ಟೀಜ್‌ ಲೇಔಟ್‌ ಹಾಗೂ ಅಂಚೆಪಾಳ್ಯ ಮೆಟ್ರೊ ನಿಲ್ದಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಸವಾಲಾಗಿತ್ತು. ಪ್ರೆಸ್ಟೀಜ್‌ ಸಂಸ್ಥೆಯು ತನ್ನ ಪ್ರದೇಶದಲ್ಲಿ 12.5 ಅಡಿ ಅಗಲದ ರಸ್ತೆ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನೀಡಲು ಒಪ್ಪಿದ ಬಳಿಕ ಸಮಸ್ಯೆ ಇತ್ಯರ್ಥವಾಗಿದೆ.

ಈಗ ಕಾಮಗಾರಿ ನಡೆಯುತ್ತಿದೆಯಾದರೂ ವೇಗ ಪಡೆದುಕೊಂಡಿಲ್ಲ. ನಾಗಸಂದ್ರದಿಂದ ನೈಸ್ ರಸ್ತೆ ತನಕ ಎತ್ತರಿಸಿದ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ನೈಸ್‌ ರಸ್ತೆಯ ಜಂಕ್ಷನ್‌ನಲ್ಲಿ ಕಾಮಗಾರಿ ನಡೆಯು ತ್ತಿದ್ದು, ಪಿಲ್ಲರ್‌ಗಳು ನಿರ್ಮಾಣವಾಗುತ್ತಿವೆ. ಅವುಗಳ ಮೇಲೆ ಕ್ಯಾಪ್ ಅಳವಡಿಸಿ ಸೆಗ್ಮೆಂಟ್‌ಗಳನ್ನು ಜೋಡಿಸುವ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ.

ಬಳಿಕ ಹಳಿಗಳ ಜೋಡಣೆ, ಸಿಗ್ನಲಿಂಗ್, ಸಿಸ್ಟಮ್‌ ಕಾಮಗಾರಿ ನಡೆಯಬೇಕಿದೆ. ಜೊತೆ ಜೊತೆಯಲ್ಲೇ ನಿಲ್ದಾಣಗಳ ನಿರ್ಮಾಣ ಕೆಲಸ ನಡೆಯುತ್ತಿದೆ. ಆದರೆ, ನಿರೀಕ್ಷೆಯಷ್ಟು ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಹೇಳುತ್ತಾರೆ.

ಸಿಂಪ್ಲೆಕ್ಸ್ ಕಂಪನಿ ಈ ಕಾಮಗಾರಿ ನಿರ್ವಹಿಸುತ್ತಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳ ವೇಗಕ್ಕೆ ಸ್ಪಂದಿಸುತ್ತಿಲ್ಲ. ಜೂನ್‌ ವೇಳೆಗೆ ಕಾಮಗಾರಿ ಪೂರ್ಣಗೊಂಡು ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ, ಇನ್ನೂ ಎರಡು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.

ತುಮಕೂರು ರಸ್ತೆ ದಟ್ಟಣೆಗೆ ಪರಿಹಾರ

ಈ ಮಾರ್ಗದ ಕಾಮಗಾರಿ ಪೂರ್ಣಗೊಂಡರೆ ತುಮಕೂರು ರಸ್ತೆಯಲ್ಲಿ ನೈಸ್‌ ರಸ್ತೆ ಜಂಕ್ಷನ್‌ನಿಂದ ಆಚೆಗೆ ಮಾದಾವರ ತನಕ ಮೆಟ್ರೊ ರೈಲು ಮಾರ್ಗ ವಿಸ್ತರಣೆಯಾದಂತೆ ಆಗಲಿದೆ. ನೆಲಮಂಗಲ ಸುತ್ತಮುತ್ತಲ ಪ್ರದೇಶದಿಂದ ನಗರಕ್ಕೆ ಬರುವ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಸದ್ಯ ನಾಗಸಂದ್ರ ತನಕ ಬಂದು ಮೆಟ್ರೊ ರೈಲು ಹತ್ತಬೇಕಿದ್ದು, ಮೂರೂವರೆ ಕಿಲೋ ಮೀಟರ್ ಹಿಂದೆಯೇ ಮೆಟ್ರೊ ರೈಲು ಸಂಪರ್ಕ ದೊರೆತಂತಾಗಲಿದೆ. ತುಮಕೂರು ರಸ್ತೆಯಲ್ಲಿ ಈಗಿರುವ ದಟ್ಟಣೆಯೂ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ.

ಅಂಕಿ–ಅಂಶ

3.77 ಕಿ.ಮೀ
ನಾಗಸಂದ್ರ–ಬಿಐಇಸಿ ನಡುವಿನ ಮಾರ್ಗದ ಉದ್ದ

₹964.68 ಕೋಟಿ
ಕಾಮಗಾರಿಯ ಅಂದಾಜು ವೆಚ್ಚ

ನಿಲ್ದಾಣಗಳು

ಮಂಜುನಾಥನಗರ

ಜಿಂದಾಲ್

ಬಿಐಇಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT