ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಸಂದ್ರ–ಮಾದಾವರ: ಸಿವಿಲ್‌ ಕಾಮಗಾರಿ ಶೇ 99 ಪೂರ್ಣ

ಹಳಿ ಅಳವಡಿಕೆ ಜುಲೈಯಲ್ಲಿ ಆರಂಭಗೊಳ್ಳಲಿರುವ ಮೆಟ್ರೊ ರೈಲು ಸಂಚಾರ
Published 25 ಜನವರಿ 2024, 22:10 IST
Last Updated 25 ಜನವರಿ 2024, 22:10 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ನಾಗಸಂದ್ರ–ಮಾದಾವರ ವಿಸ್ತರಿತ ಮಾರ್ಗದಲ್ಲಿ ಸಿವಿಲ್‌ ಮತ್ತು ಡಿಪೊ ಕಾಮಗಾರಿ ಶೇ 99ರಷ್ಟು ಪೂರ್ಣಗೊಂಡಿದೆ. ಜುಲೈನಲ್ಲಿ ರೈಲು ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿದೆ.

ಹಸಿರು ಮಾರ್ಗದ ರೀಚ್‌–3 ಕಾಮಗಾರಿ ಇದಾಗಿದ್ದು, ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್‌), ಮಾದಾವರ ಮೆಟ್ರೊ ನಿಲ್ದಾಣಗಳ ಕಾಮಗಾರಿ ಮುಕ್ತಾಯಗೊಂಡಿವೆ. 3.7 ಕಿಲೋಮೀಟರ್‌ ದೂರದ ಈ ಮಾರ್ಗದಲ್ಲಿ ಗರ್ಡರ್‌ ಅಳವಡಿಕೆ ಸಹಿತ ಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿವೆ.

ಈ ಕಾಮಗಾರಿಗೆ 2017ರ ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡುಕು ಉಂಟಾಗಿತ್ತು. ಕೆಲವರು ಹೈಕೊರ್ಟ್‌ ಮೆಟ್ಟಿಲೇರಿದ್ದರು. ಇದೆಲ್ಲ ಇತ್ಯರ್ಥವಾಗಲು ನಾಲ್ಕು ವರ್ಷ ಹಿಡಿದಿತ್ತು. ಆನಂತರ ಕಾಮಗಾರಿ ಆರಂಭವಾಗಿತ್ತು. 

‘ಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿದ್ದು, ತಾಂತ್ರಿಕ ಕೆಲಸಗಳು ಆರಂಭವಾಗಿವೆ. ಹಳಿ ಅಳವಡಿಕೆ ಶೇ 44ರಷ್ಟು ಆಗಿದೆ. ಸಿಗ್ನಲಿಂಗ್‌ ಸಹಿತ ಎಲೆಕ್ಟ್ರಿಕಲ್‌ ಕೆಲಸಗಳು ನಡೆಯುತ್ತಿವೆ. ಮೇ ಒಳಗೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಬಳಿಕ ಸಿಗ್ನಲ್‌ ಪರೀಕ್ಷೆ, ಹಳಿಗಳ ಸಾಮರ್ಥ್ಯ ಪರೀಕ್ಷೆ, ಓಪನ್ ವೆಬ್‌ ಗರ್ಡರ್‌ ಪರೀಕ್ಷೆ ಸಹಿತ ವಿವಿಧ ತಾಂತ್ರಿಕ ಪರೀಕ್ಷೆಗಳು ನಡೆಯಲಿವೆ. ಜುಲೈ ತಿಂಗಳಲ್ಲಿ ರೈಲು ಸಂಚರಿಸಲಿವೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಸಿರು ಮಾರ್ಗ ಯೋಜನೆಯ ಕಾಮಗಾರಿಗಳು ಹಂತಹಂತವಾಗಿ ನಡೆದಿದ್ದವು. ಇದರ ಕೊನೆಯ ಹಂತವಾದ ನಾಗಸಂದ್ರ–ಮಾದಾವರ ಮಾರ್ಗ ಮಾತ್ರ ವಿಪರೀತ ವಿಳಂಬವಾಗಿದೆ. ಈ ಕಾಮಗಾರಿ ಮುಕ್ತಾಯಗೊಂಡರೆ ಹಸಿರು ಮಾರ್ಗ ಶೇ 100ರಷ್ಟು ಪೂರ್ಣಗೊಂಡಂತಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು–ತುಮಕೂರು ರಸ್ತೆಯಲ್ಲಿ ಪ್ರತಿದಿನ ವಿಪರೀತ ವಾಹನದಟ್ಟಣೆ ಉಂಟಾಗುತ್ತಿದೆ. ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುತ್ತಿರುವ ಕಾರ್ಮಿಕರು, ಉದ್ಯೋಗಿಗಳು ನಾಗಸಂದ್ರದವರೆಗೆ ಬೇರೆ ಬೇರೆ ವಾಹನಗಳಲ್ಲಿ ಬಂದು. ಅಲ್ಲಿ ವಾಹನಗಳನ್ನು ನಿಲ್ಲಿಸಿ ಮೆಟ್ರೊ ರೈಲು ಹಿಡಿಯುತ್ತಿದ್ದಾರೆ. ಮಾದಾವರವರೆಗೆ ಮೆಟ್ರೊ ಮಾರ್ಗ ಪೂರ್ಣಗೊಂಡ ನಂತರ, ಅಲ್ಲಿಂದಲೇ ಮೆಟ್ರೊ ಹತ್ತಬಹುದು. ಆಗ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಪೀಣ್ಯ ಇಂಡಸ್ಟ್ರಿ–ನಾಗಸಂದ್ರ ನಡುವೆ ಇಂದಿನಿಂದ ಮೆಟ್ರೊ ಸ್ಥಗಿತ

ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಣೆ ಮಾರ್ಗದ ಪೂರ್ವ ನಿಯೋಜಿತ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಜ.26ರಿಂದ ಜ.28ರವರೆಗೆ ಮೂರು ದಿನ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ  ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೊ ರೈಲು ಸಂಚಾರ ಇರಲಿದೆ. ಇದರಿಂದ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚುವ ನಿರೀಕ್ಷೆ ಇದೆ. ಪ್ರಯಾಣಿಕರು ಟಿಕೆಟ್‌ ಖರೀದಿಸುವ ಬದಲು ವಾಟ್ಸ್‌ಆ್ಯಪ್‌ ಅಥವಾ ನಮ್ಮ ಮೆಟ್ರೊ ಮತ್ತು ಇತರ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆರ್‌ ಟಿಕೆಟ್‌ಗಳನ್ನು ಖರೀದಿಸಲು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT