ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣಗಳಲ್ಲಿ ಉಪಯುಕ್ತ ಮಾಹಿತಿ

ಶೀಘ್ರದಲ್ಲಿಯೇ ದೊರೆಯಲಿದೆ ಸಂಪರ್ಕ ಬಸ್‌ಗಳ ಮಾಹಿತಿ
Last Updated 26 ಸೆಪ್ಟೆಂಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು:ಸಾವಯವ ಕೃಷಿಯನ್ನು ಅನುಸರಿಸಿ, ಮಕ್ಕಳಿಗೆ ಜಂತುಹುಳು ಮಾತ್ರೆ ಕೊಡಿಸಿ, ಮತದಾನ ಮಾಡಿ...

ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜೊತೆಗೆ, ಜಾಗೃತಿ ಮೂಡಿಸುವಂತಹ ಸಾಲುಗಳು ಮೆಟ್ರೊ ನಿಲ್ದಾಣಗಳಲ್ಲಿ ಎಲ್‌ಇಡಿ ಫಲಕಗಳಲ್ಲಿ ರಾರಾಜಿಸುತ್ತಿವೆ. ರೈಲಿನ ಒಳಗೂ ಇಂತಹ ಮಾಹಿತಿಯುಳ್ಳ ಸಾಲುಗಳನ್ನು ಪ್ರದರ್ಶಿಸಲಾಗುತ್ತಿದೆ.

‘1ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಸೆಪ್ಟೆಂಬರ್‌ 30ರಂದು ಜಂತುಹುಳು ನಿವಾರಣಾ ಮಾತ್ರೆಗಳನ್ನು ಕೊಡಿಸಿ, ಜಂತುಹುಳು ಮುಕ್ತರನ್ನಾಗಿಸಿ’ ಎಂದು ನಟ ಪುನೀತ್‌ರಾಜ್‌ಕುಮಾರ್‌ ಹೇಳುತ್ತಿರುವ ವಿಡಿಯೊ ಪ್ರಸಾರ ಮಾಡಲಾಗುತ್ತಿದೆ.

ಸಿಗಲಿದೆ ಬಸ್‌ಗಳ ಮಾಹಿತಿ: ಮೆಟ್ರೊ ನಿಲ್ದಾಣದಿಂದ ಸಂಪರ್ಕ ಸೇವೆ (ಫೀಡರ್‌) ಒದಗಿಸುವ ಬಿಎಂಟಿಸಿ ಬಸ್‌ಗಳ ಮಾಹಿತಿಯೂ ನಿಲ್ದಾಣದೊಳಗೆ ಲಭ್ಯವಾಗಲಿದೆ.

ಜಿಪಿಎಸ್‌ ಆಧಾರಿತ ಎಲ್ಲ 40 ಮೆಟ್ರೊ ನಿಲ್ದಾಣಗಳಲ್ಲಿ ಬಸ್‌ ಆಗಮನದ ನಿಖರ ಮಾಹಿತಿ ನೀಡುವ ಎಲ್‌ಇಡಿ ಫ‌ಲಕಗಳನ್ನು ಅಳವಡಿಸಲು ಬಿಎಂಟಿಸಿ ಮುಂದಾಗಿದೆ. ಈ ಸಂಬಂಧ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಜೊತೆ ಬಿಎಂಟಿಸಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ಪ್ರತಿ ನಿಲ್ದಾಣದಲ್ಲಿ ತಲಾ ಕನಿಷ್ಠ ಎರಡು 40 ಇಂಚು ಗಾತ್ರದ ಎಲ್‌ಇಡಿ ಮಾಹಿತಿ ಫ‌ಲಕಗಳ ಅಳವಡಿಕೆಗೆ ಚಿಂತನೆ ನಡೆದಿದೆ.

ಮೆಟ್ರೊ ನಿಲ್ದಾಣಗಳ ಬಳಿ ಸದ್ಯ, 155 ಸಂಪರ್ಕ ಬಸ್‌ ಸೇವೆ ಕಲ್ಪಿಸಲಾಗಿದ್ದು, ನಿತ್ಯ 1,900 ಟ್ರಿಪ್‌ಗಳಲ್ಲಿ ಇವು ಸಂಚರಿಸುತ್ತಿವೆ. ಆದರೆ, ಈ ಬಗ್ಗೆ ನಿಖರ ಮಾಹಿತಿ ದೊರೆಯದ ಕಾರಣ ಹೆಚ್ಚು ಪ್ರಯಾಣಿಕರು ಇವುಗಳನ್ನು ಬಳಸುತ್ತಿಲ್ಲ.

‘ಸಾಮಾನ್ಯವಾಗಿ ಬಸ್‌ಗಳು ಇರುವ ಸ್ಥಳದ ಮಾಹಿತಿಯನ್ನು ವೆಹಿಕಲ್‌ ಟ್ರ್ಯಾಕಿಂಗ್‌ ಯುನಿಟ್‌ನಲ್ಲಿ (ವಿಟಿಯು) ದಾಖಲಾಗುವ ದತ್ತಾಂಶ ಆಧರಿಸಿ ತಿಳಿಯಲಾಗುತ್ತದೆ. ಈ ವಿಟಿಯು ನಿರ್ವಹಣೆ ಮಾಡುತ್ತಿದ್ದ ಕಂಪನಿ (ಟ್ರೈಮ್ಯಾಕ್ಸ್‌) ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರಿಂದ ಈ ದತ್ತಾಂಶ ಕಳೆದ ಡಿಸೆಂಬರ್‌ನಿಂದ ಲಭ್ಯವಾಗಿರಲಿಲ್ಲ. ಬಾಕಿಯನ್ನು ಪಾವತಿಸಲಾಗಿದ್ದು, ಈ ಕಾರ್ಯವನ್ನು ಮುಂದುವರಿಸುವಂತೆ ಕಂಪನಿಗೆ ಸೂಚಿಸಲಾಗಿದೆ. ಈಗಾಗಲೇ ಶೇ 85ರಷ್ಟು ದತ್ತಾಂಶ ಅಪ್‌ಲೋಡ್‌ ಮಾಡಲಾಗಿದೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಮೆಟ್ರೊ ನಿಲ್ದಾಣಗಳಲ್ಲಿ ಬಸ್‌ಗಳ ಮಾಹಿತಿ ಪ್ರಕಟಿಸುವ ಕುರಿತು ಕ್ರಮ ವಹಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT