ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೀಚ್‌ 4–ಬಿ: ವಾಣಿಜ್ಯ ಸಂಚಾರಕ್ಕೆ ದಿನಗಣನೆ

ನಮ್ಮ ಮೆಟ್ರೊ: ಆಯುಕ್ತರಿಂದ 18–19ಕ್ಕೆ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗದ ಪರಿಶೀಲನೆ
Last Updated 13 ನವೆಂಬರ್ 2020, 20:57 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗದಲ್ಲಿ (ರೀಚ್‌ 4ಬಿ) ರೈಲಿನ ವಾಣಿಜ್ಯ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಇದೇ 18 ಮತ್ತು 19ರಂದು ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ. ಅವರಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಈ ಮಾರ್ಗದಲ್ಲಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ.

‘ಆಯುಕ್ತರ ಪರಿಶೀಲನೆ ವೇಳೆ ಯಾವುದೇ ಲೋಪಗಳಿಲ್ಲದಿದ್ದರೆ ಶೀಘ್ರ ಪ್ರಮಾಣಪತ್ರ ದೊರೆಯಲಿದೆ. ಈ ತಿಂಗಳಾಂತ್ಯಕ್ಕೆೆ ಚಾಲನೆ ಕೂಡ ದೊರೆಯಲಿದೆ’ ಎಂದು ನಿಗಮದ ಮೂಲಗಳು ಹೇಳಿವೆ.

ಈ ಮಾರ್ಗದ ನಿಲ್ದಾಣದಲ್ಲಿನ ಮೂಲಸೌಕರ್ಯ, ಸಿವಿಲ್ ಕಾಮಗಾರಿ, ಸಿಗ್ನಲಿಂಗ್, ದೂರಸಂವಹನ ಸಂಪರ್ಕ ವ್ಯವಸ್ಥೆ ಮತ್ತು ಇನ್ನಿತರ ವ್ಯವಸ್ಥೆಯ ಬಗ್ಗೆ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿದೆ.

‘ಈ ತಿಂಗಳ ಮೊದಲ ವಾರದಲ್ಲಿ ಸಿಎಂಆರ್‌ಎಸ್ ತಂಡ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆೆ ಭೇಟಿ ನೀಡಿತ್ತು. 6.29 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿದ ಅಂದಾಜು 300 ಪುಟಗಳುಳ್ಳ ಸುದೀರ್ಘ ಮಾಹಿತಿಯನ್ನು ನಿಗಮದ ಎಂಜಿನಿಯರ್‌ಗಳು ನೀಡಿದ್ದರು. ತದನಂತರ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ, ಸೂಚಿಸುವುದಾಗಿ ಸಿಎಂಆರ್‌ಎಸ್ ತಂಡ ಹೇಳಿತ್ತು’ ಎಂದು ತಿಳಿಸಿವೆ.

ನ. 1ಕ್ಕೆ ಮಾರ್ಗವನ್ನು ವಾಣಿಜ್ಯ ಸೇವೆಗೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಆದರೆ, ತಾಂತ್ರಿಕ ಕಾರಣಗಳು ಹಾಗೂ ಕೆಲವು ಸಣ್ಣಪುಟ್ಟ ಕಾಮಗಾರಿಗಳು ಇನ್ನೂ ಬಾಕಿ ಇದ್ದುದರಿಂದ ಸಿಎಂಆರ್‌ಎಸ್‌ಗೆ ಆಹ್ವಾನ ನೀಡುವುದು ತಡವಾಗಿತ್ತು.

ಭಾಗಶಃ ಸಂಚಾರ ಸ್ಥಗಿತ

ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಿಗದಿಯಾಗಿರುವುದರಿಂದ ಮತ್ತು ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಪೂರ್ವಸಿದ್ಧತೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಹಸಿರು ಮಾರ್ಗದ ಆರ್.ವಿ. ರಸ್ತೆ-ಯಲಚೇನಹಳ್ಳಿ ನಡುವೆ ನ. 17ರಿಂದ 19ರವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

17ರ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ನಾಗಸಂದ್ರ ನಿಲ್ದಾಣದಿಂದ ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ಸೇವೆ ಇರಲಿದೆ. ನ. 20ರಂದು ಎಂದಿನಂತೆ ನಾಗಸಂದ್ರ-ಯಲಚೇನಹಳ್ಳಿ ನಡುವೆ ಸೇವೆ ಪುನರಾರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

ರೀಚ್‌ 4ಬಿ ಮಾರ್ಗದ ನಿಲ್ದಾಣಗಳು

ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಷಿಪ್

ನಮ್ಮ ಮೆಟ್ರೊ ವಿಸ್ತರಿಸಿದ ಮಾರ್ಗ ರೀಚ್-4ಬಿ

ಯಲಚೇನಹಳ್ಳಿ-ಅಂಜನಾಪುರ

ಮಾರ್ಗದ ಉದ್ದ: 6.29 ಕಿ.ಮೀ.

ಸ್ವಾಧೀನಪಡಿಸಿಕೊಂಡಿರುವ ಭೂಮಿ: 71,890 ಚದರ ಮೀಟರ್

ಒಟ್ಟು ನಿಲ್ದಾಣಗಳು 5

ಮಾರ್ಗದ ಯೋಜನಾ ವೆಚ್ಚ: ₹1,765 ಕೋಟಿ

ಸಿವಿಲ್ ಕಾಮಗಾರಿ ಯೋಜನೆ ವೆಚ್ಚ: ₹508.86 ಕೋಟಿ

ಗುತ್ತಿಗೆ ಪಡೆದಿರುವ ಕಂಪನಿ: ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ (ಎನ್‌ಸಿಸಿ) ಲಿಮಿಟೆಡ್‌

ಕಾಮಗಾರಿ ಆರಂಭ: 2016ರ ಮೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT