ಮಂಗಳವಾರ, ಮಾರ್ಚ್ 9, 2021
31 °C
ಮೊದಲ ದಿನ ಬೆರಳೆಣಿಕೆಯಷ್ಟು ಪ್ರಯಾಣಿಕರು * ವಾಹನ ನಿಲುಗಡೆಗೆ ಖಾಸಗಿ ವ್ಯವಸ್ಥೆ

ಕನಕಪುರ ರಸ್ತೆಯಲ್ಲಿ ಮೆಟ್ರೊ ಸದ್ದಿನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮೊದಲ ವಿಸ್ತರಿತ ಮಾರ್ಗ ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆಯವರೆಗೆ ಶುಕ್ರವಾರದಿಂದ ಮೆಟ್ರೊ ರೈಲು ಸಂಚಾರ ಆರಂಭವಾಯಿತು. ವಾಹನ ದಟ್ಟಣೆ ಮತ್ತು ಮಾಲಿನ್ಯದಿಂದ ಬೇಸತ್ತಿದ್ದ ಕನಕಪುರ ರಸ್ತೆ ನಿವಾಸಿಗಳು ಮನೆಯ ಸಮೀಪದಲ್ಲಿಯೇ ಮೆಟ್ರೊ ರೈಲು ಸಂಚಾರ ಆರಂಭವಾಗಿರುವುದನ್ನು ಸಂಭ್ರಮದಿಂದ ಸ್ವಾಗತಿಸಿದರು.

ಮೆಟ್ರೊ ರೈಲಿನ ಜತೆಗೆ, ಸಹ ಪ್ರಯಾಣಿಕ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು, ರೈಲಿನ ಒಳಗಡೆಯಿಂದ ಹೊರಗಿನ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವುದು ಕಂಡುಬಂತು.

ರೇಷ್ಮೆ ಸಂಸ್ಥೆಯಿಂದ‌ ನಾಗಸಂದ್ರದ ಕಡೆಗೆ‌ ಮೊದಲ ರೈಲು ಬೆಳಿಗ್ಗೆ 7ಕ್ಕೆ ಹೊರಟಿತು.‌ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು 8.55ಕ್ಕೆ, ನಾಗಸಂದ್ರದಿಂದ ಕೊನೆಯ ರೈಲು ರಾತ್ರಿ 9 ಕ್ಕೆ ಹೊರಟಿತು. ಈ ಮಾರ್ಗದಲ್ಲಿ ದಟ್ಟಣೆಯ ಅವಧಿಯಲ್ಲಿ 10 ನಿಮಿಷಕ್ಕೊಂದು, ದಟ್ಟಣೆ ಇಲ್ಲದ ಸಮಯದಲ್ಲಿ 15 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ.

ಖಾಸಗಿ ಪಾರ್ಕಿಂಗ್‌ ವ್ಯವಸ್ಥೆ:
ಹೊಸದಾಗಿ ಕಾರ್ಯಾರಂಭಿಸಿರುವ ಐದು ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್ ವತಿಯಿಂದ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಿಲ್ಲ. ಆದರೆ, ಕೋಣನಕುಂಟೆ ಕ್ರಾಸ್ ನಲ್ಲಿ ಖಾಸಗಿ‌ ಕಂಪನಿಯು ಹಣ ಪಾವತಿಸಿ, ವಾಹನ ನಿಲುಗಡೆ ಮಾಡುವ ಸೌಲಭ್ಯ ಕಲ್ಪಿಸಿದೆ.
ಫ್ರಂಟಿಯರ್ ಪಾರ್ಕಿಂಗ್ ಕಂಪನಿ ಈ ಗುತ್ತಿಗೆ ಪಡೆದುಕೊಂಡಿದೆ. ಕಾರುಗಳಿಗೆ ದಿನಕ್ಕೆ ₹60, ದ್ವಿಚಕ್ರ ವಾಹನಗಳಿಗೆ ದಿನಕ್ಕೆ ₹30 ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿದೆ. ಗಂಟೆಗಳ ಲೆಕ್ಕದಲ್ಲಿಯೂ ವಾಹನ ನಿಲ್ಲಿಸಬಹುದಾಗಿದ್ದು, ಬೈಕ್ ಗೆ ಪ್ರತಿ ತಾಸಿಗೆ ₹5, ಕಾರುಗಳಿಗೆ ₹10 ಶುಲ್ಕ‌ ನಿಗದಿ ಮಾಡಲಾಗಿದೆ.

‘ವಾಹನ ನಿಲುಗಡೆ ಸೌಲಭ್ಯವಿಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂಬುದು ಗಮನಕ್ಕೆ ಬಂದಿದೆ. ಖಾಸಗಿ ಕಂಪನಿಯ ಜಾಗವನ್ನು ಬಾಡಿಗೆ ಪಡೆದು ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾರು, ಬೈಕ್‌ಗಳು ಅಷ್ಟೇ ಅಲ್ಲದೆ, ಲಾರಿಯಂತಹ ವಾಹನಗಳನ್ನು ನಿಲ್ಲಿಸಲೂ ಅವಕಾಶವಿದೆ. ತೀರಾ ಕಡಿಮೆ ಶುಲ್ಕವನ್ನು ನಿಗದಿ ಮಾಡಲಾಗಿದೆ’ ಎಂದು ಫ್ರಂಟಿಯರ್ ಪಾರ್ಕಿಂಗ್ ಕಂಪನಿಯ ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಯ ಉಳಿತಾಯ:

‘ರೇಷ್ಮೆ ಸಂಸ್ಥೆ ಬಳಿ ನನ್ನ ಮನೆ ಇದೆ. ಇಷ್ಟು ದಿನ ಯಲಚೇನಹಳ್ಳಿಯವರೆಗೆ ಆಟೊ ಅಥವಾ ಬಸ್‌ನಲ್ಲಿ ಹೋಗಿ ಅಲ್ಲಿಂದ ಮೆಟ್ರೊ ಮೂಲಕ ಕಚೇರಿ ತಲುಪಬಹುದಿತ್ತು. ಈಗ ಮನೆಯ ಹತ್ತಿರವೇ ನಿಲ್ದಾಣ ಇರುವುದರಿಂದ ಸಾಕಷ್ಟು ಸಮಯ ಮತ್ತು ಹಣ ಉಳಿಯುತ್ತಿದೆ’ ಎಂದು ಪೂರ್ಣಿಮಾ ಸಂತಸ ವ್ಯಕ್ತಪಡಿಸಿದರು. 

ಪ್ರಯಾಣಿಕರ ಸಂಖ್ಯೆ ಕಡಿಮೆ:

ಯಲಚೇನಹಳ್ಳಿ- ರೇಷ್ಮೆ ಸಂಸ್ಥೆ ನಡುವೆ ಮೊದಲ ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿರಲಿಲ್ಲ. ಸಂಕ್ರಾಂತಿ ಜೊತೆಗೆ ವಾರಾಂತ್ಯವೂ ಇದ್ದುದರಿಂದ ಹೆಚ್ಚು ಜನ ಕಂಡು ಬರಲಿಲ್ಲ. ಟೋಕನ್‌ ವ್ಯವಸ್ಥೆ ಇಲ್ಲದಿರುವ ಕಾರಣ, ಕುತೂಹಲಕ್ಕಾಗಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕಡಿಮೆ ಇತ್ತು.

ವಾರದ ನಂತರ ಸ್ಪಷ್ಟ ಚಿತ್ರಣ:

‘ಎಷ್ಟು ಪ್ರಯಾಣಿಕರು ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ವಾರದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ವಿಸ್ತರಿತ ಮಾರ್ಗದಲ್ಲಿ ಶುಕ್ರವಾರದಿಂದ ಸೇವೆ ಆರಂಭವಾಗಿದ್ದು ಪ್ರಯಾಣಿಕರ ಸಂಖ್ಯೆ ಕ್ರಮೇಣವಾಗಿ ಹೆಚ್ಚುವ ನಿರೀಕ್ಷೆ ಇದೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್ ಹೇಳಿದರು.

‘ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬಹುದು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು