ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌನವಾಗಿರುವ ಕಾಲ ಇದಲ್ಲ; ಪ್ರಶ್ನಿಸಿ’

ಬಾಲಿವುಡ್ ನಟ ನಸೀರುದ್ದೀನ್ ಶಾ ಅಭಿಮತ
Last Updated 30 ಅಕ್ಟೋಬರ್ 2020, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಆಯ್ಕೆ ಮಾಡಿದ ಸರ್ಕಾರವನ್ನು ನಾವೇ ಪ್ರಶ್ನಿಸಲು ಆಗುತ್ತಿಲ್ಲ. ಆದರೆ, ಇದು ಮೌನವಾಗಿರುವ ಕಾಲವಲ್ಲ. ಎಲ್ಲರೂ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಪ್ರಶ್ನಿಸಬೇಕು’ ಎಂದು ಬಾಲಿವುಡ್ ನಟ, ಹಿರಿಯ ರಂಗಕರ್ಮಿ ನಸೀರುದ್ದೀನ್ ಶಾ ಸಲಹೆ ನೀಡಿದರು.

‘ಹಲ್ಲಾ ಬೋಲ್‌’ ಸಫ್ದರ್‌ ಹಶ್ಮಿ ಸಾವು ಮತ್ತು ಬದುಕು ಕುರಿತ ಕನ್ನಡ ಪುಸ್ತಕವನ್ನು ಆನ್‌ಲೈನ್‌ನಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಪ್ರಭುತ್ವವೇ ಭಯಪಡುತ್ತಿದೆ ಎನ್ನುವುದು ಎಲ್ಲರ ಅರಿವಿಗೂ ಬರುತ್ತಿದೆ. ಅದೇ ಕಾರಣಕ್ಕೆ ಭಯ ಹರಡುವ ಕೆಲಸ ನಡೆಯುತ್ತಿದೆ’ ಎಂದು ಅವರು ಹೇಳಿದರು.

‘ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ನಾಟಕ ರಚಿಸುತ್ತಿದ್ದ, ಪ್ರದರ್ಶಿಸುತ್ತಿದ್ದ ಸಫ್ದರ್‌ ಹಶ್ಮಿ ಶ್ರಮಿಕ ವರ್ಗದಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಿದ್ದರು. ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳು ಅದರಲ್ಲಿ ಇರುತ್ತಿದ್ದವು. ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. 1989ರಲ್ಲಿ ‘ಹಲ್ಲಾ ಬೋಲ್‌’ ನಾಟಕ ಪ್ರದರ್ಶಿಸುತ್ತಿದ್ದಾಗಲೇ ಸಾರ್ವಜನಿಕವಾಗಿ ಅವರನ್ನು ಹತ್ಯೆ ಮಾಡಲಾಯಿತು. ಯಾವುದೇ ಗುಂಪು ಅವರನ್ನು ಸಾಯಿಸಲಿಲ್ಲ. ಆಡಳಿತ ಪಕ್ಷದ ಗೂಂಡಾಗಳು ಈ ಕೃತ್ಯ ಎಸಗಿದ್ದರು. ಇಂತಹ ವಾತಾವರಣ ಈಗಲೂ ಇದೆ’ ಎಂದರು.

‘ಪ್ರಶ್ನಿಸಿದರೆ, ತಪ್ಪಿರುವುದನ್ನು ತಪ್ಪು ಎಂದು ಹೇಳಿದರೆ ನಾವು ದೇಶದ್ರೋಹಿಗಳಾಗುತ್ತೇವೆ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲಾಗುತ್ತಿದೆ. ಆದರೆ, ಇಂತಹ ಬೆಳವಣಿಗೆಗಳು ಮುಂದಿನ ತಲೆಮಾರಿನ ಮೇಲೆ ಪರಿಣಾಮ ಬೀರಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ನನಗೆ ಕನ್ನಡದಲ್ಲಿ ಎರಡೇ ಪದಗಳು ಗೊತ್ತಿವೆ. ‘ಮಾತನಾಡಬೇಡ, ಬನ್ನಿ ಕುಳಿತುಕೊಳ್ಳಿ’ ಇವೆರಡೇ ನನಗೆ ಗೊತ್ತು. ಗೊತ್ತಿದೆ. ಪುಸ್ತಕ ನಾನು ಓದಲು ಆಗುವುದಿಲ್ಲ. ಆದರೆ, ಸಫ್ದರ್‌ ಹಶ್ಮಿ ಅವರ ಹಲ್ಲಾ ಬೋಲ್‌ನ ಇಂಗ್ಲಿಷ್‌ ಮತ್ತು ಹಿಂದಿ ಆವೃತ್ತಿಯನ್ನು ಓದಿದ್ದೇನೆ. ಕನ್ನಡಕ್ಕೆ ಈ ಕೃತಿ ಉತ್ತಮ ಕೊಡುಗೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ನಟ ಅಚ್ಯುತ್‌ಕುಮಾರ್, ‘ಸರ್ಕಾರವನ್ನು ಪ್ರಶ್ನಿಸುವವರನ್ನು ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ಹತ್ಯೆ ಮಾಡಲಾಗಿತ್ತು, ಬಿಜೆಪಿ ಸರ್ಕಾರವಿದ್ದಾಗಲೂ ಮಾಡಲಾಗುತ್ತಿದೆ. ಯಾವ ಜನಪ್ರತಿನಿಧಿಯೂ ಜನರ ಸೇವಕರಂತೆ ನಡೆದುಕೊಳ್ಳುತ್ತಿಲ್ಲ’ ಎಂದರು.

‘ಹಲ್ಲಾ ಬೋಲ್‌’ ಕೃತಿಯ ಮೂಲ ಲೇಖಕ ಹಾಗೂ ನವದೆಹಲಿಯ ಜನ ನಾಟ್ಯ ಮಂಚ್‌ನ ಸುಧನ್ವ ದೇಶಪಾಂಡೆ, ಪುಸ್ತಕದ ಕನ್ನಡ ಅನುವಾದ ಎಂ.ಜಿ. ವೆಂಕಟೇಶ್, ಜನಶಕ್ತಿ ಮೀಡಿಯಾದ ವಿಮಲಾ ಇದ್ದರು. ಸಮುದಾಯ ಕರ್ನಾಟಕ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT