ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನಕ್ಕೆ ಕಾಯ್ದೆ: ಶಿವರಾಮ ಹೆಬ್ಬಾರ್

Last Updated 4 ಮಾರ್ಚ್ 2021, 21:19 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡುವ ಸಂಬಂಧ ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಮತ್ತು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್‌(ಬಿಇಎಲ್) ಆಯೋಜಿಸಿದ್ದ ‌50ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಕೆಲಸದ ಅವಧಿ ನಿಗದಿ ಮಾಡುವ ಅಗತ್ಯ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಗುತ್ತಿಗೆ ಕಾರ್ಮಿಕರನ್ನು ಸರಬರಾಜು ಮಾಡುವ 18 ಸಾವಿರಕ್ಕೂ ಹೆಚ್ಚು ಸಂಸ್ಥೆಗಳಿವೆ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ವಲಯಗಳಲ್ಲಿ 22 ಲಕ್ಷಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದಾರೆ. ಕಡಿಮೆ ವೇತನಕ್ಕೆ ಹೆಚ್ಚಿನ ಅವಧಿ ದುಡಿಸಿಕೊಳ್ಳುತ್ತಿರುವ ಸಮಸ್ಯೆ ಹೆಚ್ಚಾಗಿದೆ ಎಂದರು.

ಕೋವಿಡ್ ಕಾರಣಕ್ಕೆ ಶೇ 70ರಷ್ಟು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಕಾರ್ಮಿಕ ಇಲಾಖೆ ಅವರ ಬೆನ್ನಿಗೆ ನಿಂತು 5 ತಿಂಗಳಲ್ಲಿ 85 ಲಕ್ಷ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿತ್ತು. ಕಾರ್ಖಾನೆಗಳ ಪುನರ್ ಆರಂಭಕ್ಕೂ ಸಮಸ್ಯೆಗಳು ಎದುರಾಗಿವೆ. ಕಾರ್ಮಿಕರು ಮತ್ತು ಕಾರ್ಖಾನೆಗಳ ಮಾಲೀಕರ ನಡುವಿನ ಸಮಸ್ಯೆ ಪರಿಹರಿಸುವುದು ಇಲಾಖೆಗೆ ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

‘ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ 50 ವರ್ಷಗಳಿಂದ ರಾಷ್ಟ್ರೀಯ ಸುರಕ್ಷತಾ ದಿನಾಚಣೆ ಮಾಡುತ್ತಿದೆ. ಕಾರ್ಖಾನೆಗಳು, ಬಾಯ್ಲರುಗಳಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಬೇಕು. ಎಲ್ಲ ಮಕ್ಕಳಿಗೂ ಶಾಲೆ ಮತ್ತು ಕಾಲೇಜು ಶಿಕ್ಷಣದಲ್ಲೇ ಸುರಕ್ಷ ಜೀವನದ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಕಾರ್ಯದರ್ಶಿ ಕೆ. ಶ್ರೀನಿವಾಸ್ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಕಾರ್ಖಾನೆ, ಕೈಗಾರಿಕೆ ಮತ್ತು ಕಾರ್ಮಿಕ ವಲಯಗಳು ತೀವ್ರ ಸಂಕಷ್ಟ ಅನುಭವಿಸಿದ್ದವು. ಲಾಕ್‌ಡೌನ್ ತೆರವಾದ ಬಳಿಕ ಉದ್ಯಮ ಕ್ಷೇತ್ರಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮಾರ್ಗಸೂಚಿಗಳನ್ನು ತಯಾರಿಸಿದ್ದು, ಎಲ್ಲರೂ ಪಾಲಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT