ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಕಾಯತಿ ಪ್ರಕರಣ: ನಾಲ್ವರಿಗೆ ಏಳು ವರ್ಷ ಕಠಿಣ ಶಿಕ್ಷೆ, ಎನ್‌ಐಎ ಕೋರ್ಟ್‌ ಆದೇಶ

Last Updated 14 ಜನವರಿ 2023, 20:10 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಹಣ ಕ್ರೋಡೀಕರಿಸುವ ಸಲುವಾಗಿ ನಗರ ವ್ಯಾಪ್ತಿಯಲ್ಲಿ ಡಕಾಯತಿ ಮಾಡಿ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ನಾಲ್ವರು ಅಪರಾಧಿಗಳಿಗೆ ನಗರದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಈ ಕುರಿತಂತೆ ಎನ್‌ಐಎ ದಾಖಲಿಸಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಗಂಗಾಧರ ಅವರು ನಾಲ್ವರು ಅಪರಾಧಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ತಲಾ ₹ 40 ಸಾವಿರದವರೆಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯ ಕದೋರ್ ಖಾಜಿ ಅಲಿಯಾಸ್ ಮೋಟಾ ಅನಾಸ್‌ (33), ಮುಸ್ತಾಫಿಝುರ್‌ ರಹಮಾನ್‌ ಅಲಿಯಾಸ್‌ ತುಹಿನ್‌ (39), ಶಂಷೇರ್‌ ಗಂಜ್‌ ಜಿಲ್ಲೆಯ ಅದಿಲ್‌ ಶೇಖ್‌ (27) ಮತ್ತು ಮುರ್ಷಿದಾಬಾದ್‌ ಜಿಲ್ಲೆಯ ಅಬ್ದುಲ್‌ ಕರೀಮ್‌ ಅಲಿಯಾಸ್‌ ಚೋಟಾ (21) ಶಿಕ್ಷೆಗೊಳಗಾದವರು.

ಪ್ರಾಸಿಕ್ಯೂಷನ್‌ ವಾದವನ್ನು ಪುರಸ್ಕರಿಸಿರುವ ನ್ಯಾಯಾಧೀಶರು, ‘ಆರೋಪಿಗಳು ಭಾರತೀಯ ದಂಡ ಸಂಹಿತೆ–1860 ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967 ಹಾಗೂ ಶಸ್ತ್ರಾಸ್ತ್ರ ಕಾಯ್ದೆ–1959ರ ವಿವಿಧ ಕಲಂಗಳ ಅನುಸಾರ ಅಪರಾಧ ಎಸಗಿರುವುದು ಸಾಬೀತಾಗಿದೆ. ಇವರು ಬೆಂಗಳೂರಿನಲ್ಲಿ ವಾಸವಿದ್ದ ಮನೆಗಳಲ್ಲಿ ಸ್ಫೋಟಕಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಮತ್ತು ಮುಸ್ತಾಫಿಝುರ್ ರೆಹಮಾನ್ ಸಹಚರರೊಂದಿಗೆ ಸೇರಿ ಸ್ಫೋಟಕಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ದೃಢಪಟ್ಟಿದೆ’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

ಬೋಧಗಯಾ ಸ್ಫೋಟದ ನಂಟು: ಎನ್‌ಐಎ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಎಲ್ಲಾ ಅಪರಾಧಿಗಳು ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದ್ದೀನ್ (ಜೆಎಂಬಿ) ಭಯೋ ತ್ಪಾದನಾ ಸಂಘಟನೆಗೆ ಸೇರಿದವರಾಗಿದ್ದು, ಅಪರಾಧಿಗಳು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾದ 12 ಸದಸ್ಯರ ಗುಂಪಿನ ಭಾಗವಾಗಿದ್ದಾರೆ. ಇವರಲ್ಲಿ ಅಬ್ದುಲ್ ಕರೀಂ 2013 ಜುಲೈ 7ರಂದು ವಿಶ್ವ ಪರಂಪರೆಯ ತಾಣವಾದ ಮಹಾಬೋಧಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗವಹಿಸಿದ್ದ. ಈ ಸ್ಫೋಟದಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಸೇರಿ ಐವರು ಗಾಯಗೊಂಡಿದ್ದರು’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಕರಣವೇನು?
ಆರೋಪಿಗಳು 2018ರಲ್ಲಿ ನಗರದ ಕೆ.ಆರ್‌.ಪುರ, ಕೊತ್ತನೂರು ಮತ್ತು ಅತ್ತಿಬೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡಕಾಯತಿ ನಡೆಸಿ ಹಣ, ಬೆಲೆಬಾಳುವ ಎಲೆಕ್ಟ್ರಾನಿಕ್‌ ವಸ್ತುಗಳನ್ನು ದೋಚಿದ್ದರು. ಚಿಕ್ಕಬಾಣಾವರ ವ್ಯಾಪ್ತಿಯ ಮನೆಯೊಂದರಲ್ಲಿ ಆಶ್ರಯ ಹೊಂದಿದ್ದರು. ಭಯೋತ್ಪಾದನಾ ಸಂಘಟನೆಯ ನಂಟು ಹೊಂದಿದ ಆಧಾರದಲ್ಲಿ ತನಿಖೆ ಕೈಗೊಂಡಿದ್ದ ಎನ್‌ಐಎ ತನಿಖಾಧಿಕಾರಿಗಳು ಆರೋಪಿಗಳಿಂದ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ವಸ್ತುಗಳು, ರಾಸಾಯನಿಕ ಉಪಕರಣಗಳು, ಬಾಂಬ್‌ಗಳನ್ನು ತಯಾರಿಸಲು ಬಳಸುವ ಕಂಟೈನರ್‌, ಸುಧಾರಿತ ಸ್ಫೋಟಕ ಸಾಧನ, ಡಿಜಿಟಲ್ ಕ್ಯಾಮೆರಾ ಮತ್ತು ಕೈಬರಹದ ದಾಖಲೆಗಳನ್ನು ವಶಪಡಿಸಿಕೊಂಡು 2019 ಮತ್ತು 2020ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT