ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ: ಶಂಕಿತ ಉಗ್ರನ ಕರೆತಂದು ಸನ್ನಿವೇಶ ಮರುಸೃಷ್ಟಿ

ಎನ್‌ಐಎ ತನಿಖೆ ಚುರುಕು
Published : 5 ಆಗಸ್ಟ್ 2024, 15:35 IST
Last Updated : 5 ಆಗಸ್ಟ್ 2024, 15:35 IST
ಫಾಲೋ ಮಾಡಿ
Comments

ಬೆಂಗಳೂರು: ಕೆಫೆ ಬಾಂಬ್‌ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು, ಸೋಮವಾರ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಸ್ಥಳ ಮಹಜರು ನಡೆಸಿದರು. ಬಂಧಿತ ಶಂಕಿತ ಉಗ್ರ ಮುಸಾವೀರ್‌ ಹುಸೇನ್ ಶಾಜೀದ್‌ನನ್ನು ಕರೆತಂದು ಸನ್ನಿವೇಶ ಮರುಸೃಷ್ಟಿಸಿ ಸ್ಥಳದಲ್ಲೇ ಹೇಳಿಕೆ ದಾಖಲು ಮಾಡಿಕೊಳ್ಳಲಾಯಿತು.

ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟಿಸಲಾಗಿತ್ತು. ಬಾಂಬ್ ಇರಿಸಿದ್ದ ತೀರ್ಥಹಳ್ಳಿಯ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಲೆಮರೆಸಿಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 12ರಂದು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಲಾಗಿತ್ತು. ಬಂಧನವಾದ ಐದು ತಿಂಗಳ ನಂತರ ಕೆಫೆಗೆ ಮುಸಾವೀರ್‌ನನ್ನು ಕರೆತಂದು ಮಹಜರು ನಡೆಸಲಾಯಿತು. ತನಿಖಾ ತಂಡವು ಇಡೀ ದಿನ ವಿವಿಧ ಮಾಹಿತಿ ಕಲೆ ಹಾಕಿತು. 

‘ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಅಬ್ದುಲ್ ಮಥೀನ್‌ ಸಂಚು ರೂಪಿಸಿದ್ದ. ಯಾವ ಬಾಂಬ್ ಇರಿಸಬೇಕು? ಯಾವ ಸಮಯದಲ್ಲಿ ಇರಿಸಬೇಕು ಎಂಬುದರ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದ. ಮುಸಾವೀರ್‌ಗೆ ವಿಷಯ ತಿಳಿಸಿ, ಬಾಂಬ್ ಇಟ್ಟು ಬರುವಂತೆ ಸೂಚಿಸಿದ್ದ. ನಂತರ, ಇಬ್ಬರೂ ಸೇರಿ ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದರು. ಅದನ್ನು ಮುಸಾವೀರ್, ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಇರಿಸಿ ಪರಾರಿಯಾಗಿದ್ದ. ಬಾಂಬ್‌ ಸ್ಫೋಟಗೊಂಡು ಕೆಫೆಯಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಸೇರಿ 9 ಮಂದಿ ಗಾಯಗೊಂಡಿದ್ದರು’ ಎಂದು ಎನ್‌ಐಎ ಮೂಲಗಳು ಹೇಳಿವೆ.

ಶಂಕಿತ ಉಗ್ರನ ಕರೆತಂದು ಸನ್ನಿವೇಶ ಮರು ಸೃಷ್ಟಿಸಲಾಯಿತು
ಶಂಕಿತ ಉಗ್ರನ ಕರೆತಂದು ಸನ್ನಿವೇಶ ಮರು ಸೃಷ್ಟಿಸಲಾಯಿತು

‘ಶಂಕಿತ ಉಗ್ರ ಅಂದು ತಲೆಗೆ ಕಪ್ಪು ಬಣ್ಣದ ಕ್ಯಾಪ್, ಕನ್ನಡಕ ಧರಿಸಿ ಬಂದಿದ್ದ. ಬ್ಯಾಗ್‌ ಹಾಕಿಕೊಂಡಿದ್ದ. ಬಿಎಂಟಿಸಿ ಬಸ್‌ನಲ್ಲಿ ಬಂದು ಬಾಂಬ್‌ ಇರಿಸಿ ಪರಾರಿಯಾಗಿದ್ದ. ಮಹಜರು ವೇಳೆ ಅದೇ ರೀತಿ ನಡೆದುಕೊಂಡು ಬಂದು ತನಿಖಾಧಿಕಾರಿಗಳಿಗೆ ತೋರಿಸಿದ್ದಾನೆ. ಬಾಂಬ್‌ ಇರಿಸಿದ್ದ ಸ್ಥಳ, ಟೇಬಲ್ ಮೇಲೆ ಕುಳಿತಿದ್ದ ಜಾಗವನ್ನು ತೋರಿಸಿದ್ದಾನೆ. ಮೂರು ಬಾರಿ ಸನ್ನಿವೇಶವನ್ನು ಮರುಸೃಷ್ಟಿಸಲಾಗಿತ್ತು. ಎಲ್ಲವನ್ನೂ ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಥಳದಲ್ಲಿ ಬಂದೋಬಸ್ತ್‌

ಮಹಜರು ವೇಳೆ ಕೆಫೆಗೆ ಗ್ರಾಹಕರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿತ್ತು. ಭದ್ರತೆಗಾಗಿ ವೈಟ್‌ಫೀಲ್ಡ್ ವಿಭಾಗದ 50ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ಹಲವು ಕಡೆ ಸ್ಥಳ ಮಹಜರು

ಕೆಫೆಯಲ್ಲಿ ಬಾಂಬ್‌ ಇಟ್ಟ ಬಳಿಕ ಪಶ್ಚಿಮ ಬಂಗಾಳಕ್ಕೆ ಶಂಕಿತರು ಪರಾರಿಯಾಗಿದ್ದರು. ಅಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಎರಡು ದಿನ ಬಿಟ್ಟು ಹೋಟೆಲ್ ಕೊಠಡಿ ಖಾಲಿ ಮಾಡಿ ಗಡಿ ಮೂಲಕ ಬಾಂಗ್ಲಾದೇಶಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರು. ಅಲ್ಲೂ ಎಲ್ಲ ಮಾಹಿತಿ ಕಲೆ ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

ಶಂಕಿತ ಉಗ್ರನ ಕರೆತಂದು ಸನ್ನಿವೇಶ ಮರು ಸೃಷ್ಟಿಸಲಾಯಿತು
ಶಂಕಿತ ಉಗ್ರನ ಕರೆತಂದು ಸನ್ನಿವೇಶ ಮರು ಸೃಷ್ಟಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT