ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೋಡಿ: ಸಾಲ ವಾಪಸು ಕೇಳಿದ್ದಕ್ಕೆ ಅರ್ಚಕನ ಕೊಂದು ಹೂತರು !

*ಕಾಡುಗೋಡಿ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ * ಸಾಲ ಪಡೆದಿದ್ದವನೇ ಆರೋಪಿ
Last Updated 24 ಡಿಸೆಂಬರ್ 2020, 15:26 IST
ಅಕ್ಷರ ಗಾತ್ರ

ಬೆಂಗಳೂರು: ಸಾಲ ವಾಪಸು ಕೇಳುತ್ತಿದ್ದಾರೆಂಬ ಕಾರಣಕ್ಕೆ ನೀಲಕಂಠ ದೀಕ್ಷಿತ್ (57) ಎಂಬುವರನ್ನು ಕೊಂದು ನಿರ್ಮಾಣ ಹಂತದ ಕಟ್ಟಡ ಬಳಿ ಪಾಯ ತೆಗೆದು ಮೃತದೇಹ ಹೂತಿಟ್ಟಿದ್ದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನ ತಿರುಮಲಶೆಟ್ಟಿಯ ಎ. ಮಂಜುನಾಥ್ (39) ಹಾಗೂ ಬೆಳತ್ತೂರಿನ ಗೋಪಿ (20) ಬಂಧಿತರು.

‘ಸ್ಥಳೀಯ ದೇವಾಸ್ಥಾನವೊಂದರ ಅರ್ಚಕರಾಗಿದ್ದ ನೀಲಕಂಠ ದೀಕ್ಷಿತ್, ಸೆ.6ರಂದು ಮನೆಯಿಂದ ನಾಪತ್ತೆಯಾಗಿದ್ದರು. ಆ ಬಗ್ಗೆ ಅವರ ಸಹೋದರ ದೂರು ನೀಡಿದ್ದರು. ತನಿಖೆ ಆರಂಭಿಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅರ್ಚಕರಿಂದ ಸಾಲ ಪಡೆದಿದ್ದವರ ಪಟ್ಟಿ ಮಾಡಿ ವಿಚಾರಣೆ ನಡೆಸಿದಾಗ ಮಂಜುನಾಥ್ ಮೇಲೆ ಅನುಮಾನ ಬಂತು. ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ, ನೀಲಕಂಠ ದೀಕ್ಷಿತ್ ಅವರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ಹೇಳಿದರು.

ಜಮೀನು ಮಾರಿದ್ದ ಹಣ ಕೊಟ್ಟಿದ್ದರು: ‘ಚಿಕ್ಕತಿರುಪತಿ ಬಳಿ ನೀಲಕಂಠ ಅವರ ಜಮೀನು ಇತ್ತು. ಅದನ್ನು ಮಾರಿದ್ದ ಅವರು, ಬಂದ ಹಣವನ್ನು ಬಡ್ಡಿಗಾಗಿ ಹಲವರಿಗೆ ಸಾಲ ನೀಡಿದ್ದರು. ಯಲ್ಲಾರೆಡ್ಡಿ ವೃತ್ತದಲ್ಲಿ ಹಾರ್ಡ್‌ವೇರ್ ಮಳಿಗೆ ಇಟ್ಟುಕೊಂಡಿದ್ದ ಮಂಜುನಾಥ್, ಅರ್ಚಕರ ಬಳಿ ಶೇ 3ರಷ್ಟು ಬಡ್ಡಿಗೆ ₹ 10 ಲಕ್ಷ ಸಾಲ ಪಡೆದಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆರಂಭದಲ್ಲಿ ಬಡ್ಡಿ ಕಟ್ಟುತ್ತಿದ್ದ ಆರೋಪಿ, ಕೆಲ ತಿಂಗಳಿನಿಂದ ಬಡ್ಡಿ ಕಟ್ಟುವುದನ್ನೇ ನಿಲ್ಲಿಸಿದ್ದ. ಅದರಿಂದ ಸಿಟ್ಟಾಗಿದ್ದ ನೀಲಕಂಠ, ಬಡ್ಡಿ ಸಮೇತ ಅಸಲು ನೀಡುವಂತೆ ತಾಕೀತು ಮಾಡಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವೂ ನಡೆದಿತ್ತು.’

‘ಹಣ ನೀಡುವುದಾಗಿ ಹೇಳಿ ನೀಲಕಂಠ ದೀಕ್ಷಿತ್‌ ಅವರನ್ನು ಸೆಪ್ಟೆಂಬರ್ 5ರಂದು ರಾತ್ರಿ ಮಳಿಗೆಗೆ ಕರೆಸಿಕೊಂಡಿದ್ದ ಆರೋಪಿ, ದಾಸ್ತಾನು ಕೊಠಡಿಗೆ ಕರೆದೊಯ್ದು ಮಾತುಕತೆ ನಡೆಸಿದ್ದ. ಅದೇ ವೇಳೆಯೇ ವಿಕೆಟ್‌ನಿಂದ ತಲೆಗೆ ಹೊಡೆದಿದ್ದ. ಕುಸಿದು ಬಿದ್ದ ನೀಲಕಂಠ ಅವರ ಕುತ್ತಿಗೆಗೆ ಚಾಕುವಿನಿಂದ 7 ಬಾರಿ ಇರಿದು ಕೊಂದಿದ್ದ. ಗಲಾಟೆ ಶಬ್ದ ಕೇಳಿ, ಅಂಗಡಿಯಲ್ಲೇ ಕೆಲಸ ಮಾಡುವ ಗೋಪಿ ಹಾಗೂ ಭರತ್‌ ಎಂಬುವರು ದಾಸ್ತಾನು ಕೊಠಡಿಗೆ ಬಂದಿದ್ದರು. ಕೊಲೆ ಸಂಗತಿ ಯಾರಿಗೂ ಹೇಳದಂತೆ ಆರೋಪಿ ತಿಳಿಸಿದ್ದ’ ಎಂದೂ ಪೊಲೀಸರು ಹೇಳಿದರು.

ತಗಡಿನ ಡಬ್ಬದಲ್ಲಿ ಮೃತದೇಹ: ‘ಕೊಠಡಿಯಲ್ಲಿ ಬಿದ್ದಿದ್ದ ರಕ್ತವನ್ನು ಸ್ವಚ್ಛಗೊಳಿಸಿದ್ದ ಆರೋಪಿಗಳು, ಮೃತದೇಹದ ಕಾಲು ಹಾಗೂ ಕೈಗಳನ್ನು ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿದ್ದರು. ನಂತರ, ಪ್ಲ್ಯಾಸ್ಟಿಕ್‌ನಿಂದ ಮೃತದೇಹವನ್ನು ಪೂರ್ತಿಯಾಗಿ ಮುಚ್ಚಿ ತಗಡಿನ ಡಬ್ಬದಲ್ಲಿ ತಲೆ ಕೆಳಗೆ ಮಾಡಿ ಇಟ್ಟು ಮನೆಗೆ ಹೋಗಿದ್ದರು. ನೀಲಕಂಠ ಅವರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮರುದಿನ ಅಂಗಡಿಗೆ ಬಂದಿದ್ದ ಆರೋಪಿ, ಮೃತದೇಹವನ್ನು ಕಾರಿನಲ್ಲಿ ಇಟ್ಟುಕೊಂಡು ಲಕ್ಷ್ಮಿ ಪ್ಯಾಲೇಸ್ ಚೌಲ್ಟ್ರಿ ಬಳಿ ಹೋಗಿದ್ದರು. ಸಮೀಪದಲ್ಲಿದ್ದ ನಿರ್ಮಾಣ ಹಂತದ ಕಟ್ಟಡದ ಪಕ್ಕವೇ ಪಾಯ ತೆಗೆದು ಮೃತದೇಹವನ್ನು ಹೂತಿದ್ದರು. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT