ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರ ಮರೆಗುಳಿತನಕ್ಕೆ ಸೂರು ಸಹಿತ ಆರೈಕೆ

ನಿಮ್ಹಾನ್ಸ್‌ನಿಂದ ಡಿಮೆನ್ಶಿಯಾ ಆರೈಕೆ ಕೇಂದ್ರ ನಿರ್ಮಾಣ
Last Updated 30 ಅಕ್ಟೋಬರ್ 2020, 19:21 IST
ಅಕ್ಷರ ಗಾತ್ರ

ಬೆಂಗಳೂರು: ಬುದ್ಧಿಮಾಂದ್ಯತೆ ಹಾಗೂ ಮರೆಗುಳಿತನ ಸಮಸ್ಯೆ ಎದುರಿಸುತ್ತಿರುವವರನ್ನು ಗುರುತಿಸಿ, ವಸತಿ ಸಹಿತ ಆರೈಕೆ ಹಾಗೂ ಚಿಕಿತ್ಸೆ ಒದಗಿಸಲು ನಗರದಲ್ಲಿ ಡಿಮೆನ್ಶಿಯಾ ಆರೈಕೆ ಕೇಂದ್ರ ತಲೆಯೆತ್ತಲಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ತನ್ನ ಸಕಲವಾರ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದ 12 ಎಕರೆ ಆವರಣದಲ್ಲಿ ಈ ಕೇಂದ್ರ ನಿರ್ಮಿಸುತ್ತಿದೆ. ಇದರ ನಿರ್ಮಾಣಕ್ಕೆ ₹ 10 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಆರ್‌ಇಸಿ ಫೌಂಡೇಷನ್ ತನ್ನ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಕಟ್ಟಡ ನಿರ್ಮಾಣಕ್ಕೆ ನೆರವಾಗುತ್ತಿದೆ. ಮನೋವೈದ್ಯ ಹಾಗೂ ಸಮಾಧಾನ ಸಮಾಲೋಚನಾ ಕೇಂದ್ರದ ಸಂಸ್ಥಾಪಕ ಡಾ.ಸಿ.ಆರ್. ಚಂದ್ರಶೇಖರ್ ಅವರು ತಮ್ಮ ಪತ್ನಿ ಡಿ.ಎಸ್. ರಾಜೇಶ್ವರಿ ಸ್ಮರಣಾರ್ಥ ₹ 1 ಕೋಟಿ ಕೊಡುಗೆ ನೀಡಿದ್ದಾರೆ.

40 ಹಾಸಿಗೆಗಳ ಕೇಂದ್ರದಲ್ಲಿ ಬುದ್ಧಿಮಾಂದ್ಯರು, ಮರೆಗುಳಿತನ ಸಮಸ್ಯೆ ಎದುರಿಸುತ್ತಿರುವವರು, ನೆನಪಿನ ಶಕ್ತಿ ಕಳೆದುಕೊಂಡವರು, ಆಲೋಚನಾ ಶಕ್ತಿ ಕುಂದಿದವರು ಸೇರಿದಂತೆ ಈ ಮಾದರಿಯ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಆರೈಕೆಯ ಜತೆಗೆ ಚಿಕಿತ್ಸೆ ಒದಗಿಸಲಾಗುತ್ತದೆ. ಅಂತಹವರಿಗೆ ಆರೈಕೆ ವಿಧಾನದ ಬಗ್ಗೆ ಕುಟುಂಬದ ಸದಸ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.

ಒಂದೂವರೆ ವರ್ಷದಲ್ಲಿ ಸಿದ್ಧ: ‘ಡಿಮೆನ್ಶಿಯಾ ಕಾಯಿಲೆಯು ವ್ಯಕ್ತಿಯನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತದೆ. ವಯಸ್ಸಾದವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ನೆನಪಿನ ಶಕ್ತಿ ಕಳೆದುಕೊಳ್ಳುವುದು ಸೇರಿದಂತೆ ವಿವಿಧ ಸಮಸ್ಯೆಗಳು ಕಾಡಲಿವೆ. ಅಂತಹವರಿಗೆ ಸರಿಯಾದ ಆರೈಕೆ ಸಿಗದಿದ್ದಲ್ಲಿ ಸಮಸ್ಯೆಗಳು ಇನ್ನಷ್ಟು ಸಂಕೀರ್ಣ ಸ್ವರೂಪ ಪಡೆದುಕೊಳ್ಳಲಿವೆ. ಸೂಕ್ತ ಆರೈಕೆ ಹಾಗೂ ಚಿಕಿತ್ಸೆ ನೀಡಿದಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಒಂದೂವರೆ ವರ್ಷದಲ್ಲಿ ಕೇಂದ್ರ ಕಾರ್ಯಾರಂಭಿಸಲಿದೆ’ ಎಂದು ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಟಿ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸ್ಥೆಯ ತಜ್ಞ ಮನೋವೈದ್ಯರು, ಸಿಬ್ಬಂದಿಯೇ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರದ ನಿರ್ವಹಣೆಗೆ ಬೇಕಾದ ಹಣವನ್ನು ಸಿಎಸ್‌ಆರ್ ನಿಧಿಯಡಿ ಭರಿಸಲಾಗುತ್ತದೆ. ಬಿಪಿಎಲ್ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚ ಬಹುತೇಕ ಉಚಿತವಾಗಿರಲಿದೆ. ಎಪಿಎಲ್ ಕುಟಂಬದ ಸದಸ್ಯರು ಆರಂಭಿಕ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ವ್ಯಕ್ತಿಯ ಸ್ಥಿತಿಗತಿಯನ್ನು ಆಧರಿಸಿ ಒಂದು ತಿಂಗಳವರೆಗೂ ಕೇಂದ್ರದಲ್ಲಿ ಇರಿಸಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಯೇ ಅವರಿಗೆ ಅಗತ್ಯ ಆರೈಕೆ ಮಾಡಲಿದ್ದಾರೆ. ಕುಟುಂಬದ ಸದಸ್ಯರು ಇರಬೇಕಾದ ಅಗತ್ಯವಿಲ್ಲ’ ಎಂದರು.

ಅಗ್ಗದ ದರದಲ್ಲಿ ಆರೈಕೆ: ‘ಕೋವಿಡ್‌ ಕಾಯಿಲೆ ಕಾಣಿಸಿಕೊಂಡ ಬಳಿಕ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ವೃದ್ಧರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬದ ಸದಸ್ಯರು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದಿದ್ದಲ್ಲಿ ಒಂಟಿತನ ಕಾಡಲಿದೆ. ಕೆಲವರು ಅವರನ್ನು ನೋಡಿಕೊಳ್ಳದೆ ವೃದ್ಧಾಶ್ರಮಗಳಿಗೆ ಕಳಿಸುತ್ತಾರೆ. ಅಲ್ಲಿ ವಸತಿ ಮತ್ತು ಊಟ ಮಾತ್ರ ಇರಲಿದೆ. ನಿಮ್ಹಾನ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಡಿಮೆನ್ಶಿಯಾ ಆರೈಕೆ ಕೇಂದ್ರವು ದೇಶದ ಮೊದಲ ಸರ್ಕಾರಿ ಕೇಂದ್ರ ಆಗಲಿದೆ’ ಎಂದು ಡಾ.ಸಿ.ಆರ್. ಚಂದ್ರಶೇಖರ್ ತಿಳಿಸಿದರು.

‘ಈ ಕೇಂದ್ರವು ವೃದ್ಧರಿಗೆ ಸಹಕಾರಿಯಾಗಲಿದೆ. ಹಾಗಾಗಿಯೇ ₹ 1 ಕೋಟಿಯ ಕೊಡುಗೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೈಲಾದ ಸೇವೆಯನ್ನು ಮಾಡಲು ನಿರ್ಧರಿಸಿದ್ದೇನೆ. ಖಾಸಗಿ ಸಂಸ್ಥೆಗಳು ನಡೆಸುವ ಕೇಂದ್ರಗಳಲ್ಲಿ ವ್ಯಕ್ತಿಯೊಬ್ಬರಿಗೆ ₹ 25 ಸಾವಿರದಿಂದ ₹ 35 ಸಾವಿರ ಪಾವತಿಸಬೇಕಾಗುತ್ತದೆ. ಇದರಿಂದ ಬಡ ಕುಟುಂಬಗಳ ವೃದ್ಧರಿಗೆ ಸರಿಯಾದ ಆರೈಕೆ ಸಿಗುತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ಈ ಕೊರಗು ದೂರವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT