ಬುಧವಾರ, ನವೆಂಬರ್ 20, 2019
24 °C
ಮಳೆಯ ಬೆನ್ನಲ್ಲೇ ಬಾಯ್ದೆರೆಯುವ ಗುಂಡಿಗಳು l ಪ್ರತಿ ವರ್ಷ ಮರುಕಳಿಸುವ ಸಮಸ್ಯೆ l ಆಮೆಗತಿಯಲ್ಲಿ ದುರಸ್ತಿ ಕಾರ್ಯ

ರಸ್ತೆ ಗುಂಡಿಮಯ – ಸಂಚಾರ ಅಯೋಮಯ | ಚುರುಕಾಗದ ಪಾಲಿಕೆ

Published:
Updated:
Prajavani

ಬೆಂಗಳೂರು: ಇತ್ತೀಚೆಗೆ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಗಗನಯಾತ್ರಿಯ ವೇಷಧಾರಿ ನಡೆದಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿತು. ಕಲಾವಿದ ಬಾದಲ್‌ ನಂಜುಂಡಸ್ವಾಮಿ ಪರಿಕಲ್ಪನೆಯ ಈ ವಿಡಿಯೊ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಸೆ. 2ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಈ ವಿಡಿಯೊವನ್ನು ವೀಕ್ಷಿಸಿದವರ ವ್ಯಂಗ್ಯಭರಿತ ಚಾಟಿ ಏಟುಗಳಿಗೆ ಕಂಗಾಲಾದ ಬಿಬಿಎಂಪಿ, ಈ ದೃಶ್ಯವನ್ನು ಚಿತ್ರೀಕರಿಸಿದ್ದ ಹೇರೋಹಳ್ಳಿ ಮುಖ್ಯ ರಸ್ತೆಯ ಗುಂಡಿಗಳನ್ನು ಮರುದಿನವೇ ದುರಸ್ತಿ ಮಾಡಿತ್ತು. ಇದಾಗಿ ಎರಡು ತಿಂಗಳುಗಳು ಕಳೆದಿವೆ. ಆದರೆ, ನಗರದ ರಸ್ತೆಗಳ ಪರಿಸ್ಥಿತಿ ಮಾತ್ರ ಅಂದಿಗಿಂತಲೂ ಕೆಟ್ಟದಾಗಿದೆ. ಹೇರೋಹಳ್ಳಿಯ ಮುಖ್ಯರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಿದ ಪಾಲಿಕೆಗೆ ಉಳಿದ ಪ್ರದೇಶಗಳ ಗುಂಡಿಗಳು ಕಾಣಿಸಲೇ ಇಲ್ಲ.

ಸಮತಟ್ಟಾದ ರಸ್ತೆಗಳಲ್ಲೆ ಮಿತಿ ಮೀರಿದ ವಾಹನ ದಟ್ಟಣೆಯಿಂದಾಗಿ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆರಡು ಮಳೆಯಾದರೂ ಸಾಕು ರಸ್ತೆಗಳಲ್ಲಿ ಸಾಲು ಸಾಲಾಗಿ ಇಣುಕುವ ಗುಂಡಿಗಳು ಜನರ ಬದುಕನ್ನು ಹೈರಾಣಾಗಿಸುತ್ತವೆ. ಮಳೆಗಾಲದ ಬಳಿಕವಂತೂ ಹೊಂಡಗಳಿಂದಾಗಿ ವಾಹನ ದಟ್ಟಣೆ ಮತ್ತಷ್ಟು ಉಲ್ಬಣಿಸುವುದರಿಂದ ನಗರದ ನಿವಾಸಿಗಳ ಬಹುಪಾಲು ಸಮಯ ರಸ್ತೆಗಳಲ್ಲೇ ಕಳೆದು ಹೋಗುತ್ತದೆ.

ಬೇಕಿದ್ದರೆ ದ್ವಿಚಕ್ರ ವಾಹನ ಸವಾರರ ಬೆನ್ನುಮೂಳೆ ಮುರಿಯಲಿ, ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳಲಿ, ಆದರೆ, ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತದೆ ನಗರದ ರಸ್ತೆಗಳ ನಿರ್ವಹಣೆಯ ಹೊಣೆ ಹೊತ್ತ ಬಿಬಿಎಂಪಿ. 

ವಾರ್ಡ್‌ ರಸ್ತೆಗಳು, ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಳ್ಳುವುದು ಇದುವರೆಗಿನ ವಿದ್ಯಮಾನ. ಈಗ ಈ ವಿಚಾರದಲ್ಲಿ ಪಾಲಿಕೆ ಇನ್ನೊಂದು ಹಂತ ಮೇಲಕ್ಕೇರಿದೆ. ಇಲ್ಲಿ ನೆಲಮಟ್ಟದ ರಸ್ತೆಗಳಲ್ಲಿ ಮಾತ್ರವಲ್ಲ ಮೇಲ್ಸೇತುವೆಗಳಲ್ಲೂ ಹೊಂಡ ಕಾಣಿಸಿಕೊಳ್ಳುತ್ತವೆ. ಮೇಲ್ಸೇತುವೆಯೊಂದು ನಿರ್ಮಾಣವಾದ 10 ವರ್ಷಕ್ಕೇ ಅದರಲ್ಲಿ ನೆಲ ಕಾಣಿಸುವಂತೆ ಗುಂಡಿಗಳು ಕಾಣಿಸಿಕೊಳ್ಳುತ್ತವೆ ಎಂದರೆ, ನಗರದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟ ಹಾಗೂ ನಿರ್ವಹಣೆ ಎಷ್ಟು ಕಳಪೆಯಾಗಿರಬಹುದು?

ಶಿಸ್ತು ಕ್ರಮವೆಂಬ ನಾಟಕ: ಯಾವುದೇ ವಾರ್ಡ್‌ನಲ್ಲಿ ರಸ್ತೆಗಳಲ್ಲಿ ಗುಂಡಿಕಾಣಿಸಿಕೊಂಡರೆ ಅದನ್ನು ತಕ್ಷಣ ಮುಚ್ಚುವುದು ಸಂಬಂಧಪಟ್ಟ ವಾರ್ಡ್‌ನ ಸಹಾಯಕ ಎಂಜಿನಿಯರ್‌ (ಎಇ) ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಅವರ ಜವಾಬ್ದಾರಿ. ಅವರು ಈ ಹೊಣೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಹೇಳಿತ್ತು. ಆದರೆ, ಕ್ರಮ ಕೈಗೊಂಡಿದ್ದು ಬೆರಳೆಣಿಕೆಯಷ್ಟು ಅಧಿಕಾರಿಗಳ ವಿರುದ್ಧ ಮಾತ್ರ.

‘ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದ 12 ಎಂಜಿನಿಯರ್‌ಗಳಿಗೆ ದಂಡ ವಿಧಿಸಿದ್ದೇವೆ. ದಂಡ ವಿಧಿಸುತ್ತಾರೆ ಎಂಬ ಭಯದಿಂದ ಹೆಚ್ಚಿನ ಎಇ ಹಾಗೂ ಎಇಇಗಳು ಹೊಂಡ ಮುಚ್ಚಲು ಕ್ರಮಕೈಗೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಎಸ್‌.ಸೋಮಶೇಖರ್‌.

ಆದರೆ, ರಸ್ತೆಗಳ ದುಃಸ್ಥಿತಿ ಬೇರೆಯೇ ಕತೆ ಹೇಳುತ್ತಿವೆ.ಹೊಂಡಗಳು ಅಧಿಕಾರಿಗಳ ಅಸಡ್ಡೆಗೆ ಕನ್ನಡಿ ಹಿಡಿಯುತ್ತಿವೆ. ಶಿಸ್ತು ಕ್ರಮದಿಂದ ಅಧಿಕಾರಿಗಳು ಚುರುಕಾಗಿರುವ ಲವಲೇಶವೂ ಕಾಣಿಸುತ್ತಿಲ್ಲ. ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಓಡಾಡುವ ಡಾಲರ್ಸ್‌ ಕಾಲೊನಿಯ ರಸ್ತೆಗಳು, ಆಸುಪಾಸಿನಲ್ಲಿ ಸಚಿವರ ನಿವಾಸಗಳಿರುವ ಜಯಮಹಲ್‌ ರಸ್ತೆ ಗಳಲ್ಲಿ ಬಾಯ್ದೆರೆದ ಗುಂಡಿಗಳ ಬಗ್ಗೆಯೇ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಇತರ ರಸ್ತೆಗಳಲ್ಲಿನ ಹೊಂಡ ಮುಚ್ಚಲು ಕ್ರಮಕೈಗೊಳ್ಳುತ್ತಾರೆಯೇ ಎಂಬುದು ಪ್ರಶ್ನೆ.

ಇಷ್ಟು ಪ್ರಮಾಣದಲ್ಲಿ ಗುಂಡಿಗಳು ಕಾಣಿಸಿಕೊಳ್ಳುವುದೇಕೆ?
ವರ್ಷಕ್ಕೆ ಸರಾಸರಿ ಸಾವಿರಾರು ಮಿಲಿಮೀಟರ್‌ ಮಳೆಯಾಗುವ ಕಡೆಯೂ ರಸ್ತೆಗಳು ಚೆನ್ನಾಗಿರುತ್ತವೆ. ಆದರೆ, ಒಂದೆರಡು ದಿನ ಸುರಿಯುವ ಮಳೆಗೇ ನಗರದ ರಸ್ತೆಗಳು ಚಂದ್ರನ ಮೇಲಿನ ಕುಳಿಗಳಂತೆ ಗುಂಡಿಗಳಿಂದ ತುಂಬಿಹೋಗುವುದೇಕೆ? ಚಂದ್ರನಂಗಳಕ್ಕೆ ವ್ಯೋಮನೌಕೆ ಕಳುಹಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ತಂತ್ರಜ್ಞಾನ ಲಭ್ಯ ಇಲ್ಲವೇ ಎಂಬುದು ಸೋಜಿಗದ ಪ್ರಶ್ನೆ.

ಕಳಪೆ ಕಾಮಗಾರಿ, ಮಳೆ ನೀರು ಚರಂಡಿಗಳ ಹೂಳು ತೆಗೆಯದ ಕಾರಣ ರಸ್ತೆಗಳಲ್ಲೇ ನೀರು ನಿಲ್ಲುವುದು, ಡಾಂಬರು ರಸ್ತೆಯಲ್ಲಿ ಜಲ್ಲಿ ಕಿತ್ತುಹೋಗಿ ಅಲ್ಲಿ ಗುಂಡಿ ರೂಪುಗೊಳ್ಳುವ ಲಕ್ಷಣ ಕಾಣಿಸಿಕೊಂಡಾಗಲೇ ದುರಸ್ತಿಗೆ ಕ್ರಮ ಕೈಗೊಳ್ಳದೇ ಇರುವುದು, ಗುಂಡಿಯನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚದಿರುವುದು... ರಸ್ತೆಗಳೆಲ್ಲ ಗುಂಡಿಮಯವಾಗುವುದರ ಹಿಂದೆ ಅಡಗಿರುವ ಕಾರಣಗಳಿವು. ಇವೆಲ್ಲ ಮೇಲ್ನೋಟಕ್ಕೆ ಕಾಣಿಸಿಕೊಳ್ಳುವ ಕಾರಣಗಳು ಆದರೆ, ತೆರೆ ಮರೆಯ ಕಾರಣಗಳು ಬೇರೆಯೇ ಇವೆ.

ಮಳೆಗಾಲದಲ್ಲಿ ಉಂಟಾಗುವ ರಸ್ತೆ ಗುಂಡಿಗಳನ್ನು ತುರ್ತಾಗಿ ಮುಚ್ಚುವ ನೆಪದಲ್ಲಿ ಈ ಕಾಮಗಾರಿಗಳನ್ನು ಟೆಂಡರ್‌ ಕರೆಯದೆಯೇ ತರಾತುರಿಯಲ್ಲಿ ನಡೆಸಲಾಗುತ್ತದೆ. ತುರ್ತು ಕಾಮಗಾರಿಯ ಬಿಲ್‌ ತಯಾರಿಸುವಾಗ ಅದನ್ನು ನಡೆಸಿದ ಅವಧಿಯ ದರ ಪಟ್ಟಿಯನ್ನು ಪರಿಗಣಿಸಬೇಕು. ಆದರೆ, ಪಾಲಿಕೆ ಎಂಜಿನಿಯರ್‌ಗಳು ರಸ್ತೆ ಹೊಂಡ ಮುಚ್ಚಿ ಎರಡು ವರ್ಷ ನಂತರ ಬಿಲ್‌ ತಯಾರಿಸಬಲ್ಲರು. ಕಾಮಗಾರಿ ನಡೆದ ಅವಧಿಯ ದರ ಪಟ್ಟಿ ಬದಲು ಬಿಲ್‌ ತಯಾರಿಸಿದ ಅವಧಿಯ ದರ ಪಟ್ಟಿ ನಮೂದಿಸಿ ಯಾರ ಗಮನಕ್ಕೂ ಬಾರದಂತೆ ಗೋಲ್‌ಮಾಲ್‌ ನಡೆಸುವಷ್ಟು ನಿಪುಣರು.

ಮಲ್ಲೇಶ್ವರ, ಗಾಂಧಿನಗರ, ರಾಜರಾಜೇಶ್ವರಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ನಡೆದ ಕಾಮಗಾರಿಗಳಲ್ಲಿ ನಡೆದಿದ್ದ ಅಕ್ರಮಗಳ ತನಿಖೆ ನಡೆಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಸಮಿತಿ ಪದೇ ಪದೇ ರಸ್ತೆಗುಂಡಿಗಳು ಕಾಣಿಸಿಕೊಳ್ಳುವುದರ ಹಿಂದಿನ ಈ ಮರ್ಮವನ್ನು ಬಯಲು ಮಾಡಿತ್ತು.  

ಮಲ್ಲೇಶ್ವರ ವಿಭಾಗದಲ್ಲಿ 2006ರ ನ.18ರಂದು ರಸ್ತೆ ಹೊಂಡಗಳನ್ನು ಮುಚ್ಚಲಾಗಿತ್ತು. ಇದಕ್ಕೆ ಒಟ್ಟು ₹ 9.95 ಲಕ್ಷದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಈ ಅಂದಾಜು ಪಟ್ಟಿಗೆ ಮಂಜೂರಾತಿ ನೀಡಿದ್ದು 2008ರ ಡಿ.3ರಂದು. ಟೆಂಡರ್‌ ಕರೆದಿದ್ದು 2008ರ ನ.17ರಂದು ಹಾಗೂ ಗುತ್ತಿಗೆದಾರರ ಜೊತೆ ಒಪ್ಪಂದ ಮಾಡಿಕೊಂಡಿದ್ದು 2009ರ ಮಾ. 2ರಂದು. ಮೂಲ ಅಂದಾಜುಪಟ್ಟಿಯ ಬದಲು ಬಿಬಿಎಂಪಿಯು ಗುತ್ತಿಗೆದಾರರಿಗೆ ₹ 27.04 ಲಕ್ಷ, ಅಂದರೆ, ಶೇ 171.96ರಷ್ಟು ಹೆಚ್ಚುವರಿ ಪಾವತಿ ಮಾಡಿತ್ತು. ಒಂದು ವಿಭಾಗದಲ್ಲಿ ನಡೆದ ಇಂತಹ ಮೂರು ಅಕ್ರಮಗಳನ್ನು ಸಮಿತಿ ಪತ್ತೆ ಹಚ್ಚಿತ್ತು. 

‘198 ವಾರ್ಡ್‌ಗಳಲ್ಲಿ ಕಾಣಿಸಿಕೊಳ್ಳುವ ರಸ್ತೆಗುಂಡಿಗಳು ಇಂತಹ ಅದೆಷ್ಟು ತೆರಿಗೆದಾರರ ಹಣವನ್ನು ನುಂಗಿ ಹಾಕಿರಲಿಕ್ಕಿಲ್ಲ. ರಸ್ತೆಯಲ್ಲಿ ಸಣ್ಣ ಗುಂಡಿ ಕಾಣಿಸಿಕೊಂಡಾಗಲೇ ಅದನ್ನು ಮುಚ್ಚಲು ಕ್ರಮ ಕೈಗೊಂಡರೆ ಈ ರೀತಿ ಬಿಲ್‌ ಮಾಡುವುದಕ್ಕೆ ಅವಕಾಶ ಸಿಗುತ್ತದೆಯೇ’ ಎಂದು ಪ್ರಶ್ನೆ ಮಾಡುತ್ತಾರೆ ರಾಜಾಜಿನಗರದ ನಿವಾಸಿ ರಾಘವೇಂದ್ರ.

ವಿವರ ನಾಪತ್ತೆ!
ರಸ್ತೆಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಕ್ರಮಕೈಗೊಳ್ಳದ ಪಾಲಿಕೆ ವಿರುದ್ಧ ಹೈಕೋರ್ಟ್‌ ಕಳೆದ ವರ್ಷ ಚಾಟಿ ಬೀಸಿತ್ತು. ರಸ್ತೆಗುಂಡಿ ಮುಚ್ಚುವುದಕ್ಕೆ ಗಡುವು ವಿಧಿಸಿದ್ದ ಕೋರ್ಟ್‌ ನಿತ್ಯ ಎಷ್ಟು ಗುಂಡಿ ಮುಚ್ಚಲಾಯಿತು ಎಂಬ ವಿವರವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿತ್ತು. ಬಳಿಕ ನಗರದಲ್ಲಿ ಎಷ್ಟು ರಸ್ತೆಗುಂಡಿಗಳಿವೆ. ಎಷ್ಟನ್ನು ಮುಚ್ಚಲಾಗಿದೆ ಎಂಬ ವಿವರವನ್ನು ಬಿಬಿಎಂಪಿ ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಶುರುಮಾಡಿತ್ತು. ಈ ಪರಿಪಾಠಕ್ಕೆ ಪಾಲಿಕೆ ಈಗ ತಿಲಾಂಜಲಿ ಇಟ್ಟಿದೆ.

‘ರಸ್ತೆ ಗುಂಡಿಗಳನ್ನು ಎಣಿಸುತ್ತಾ ಕೂರಲು ನಮಗೆ ಪುರುಸೊತ್ತಿಲ್ಲ. ಅಷ್ಟು ಎಂಜಿನಿಯರ್‌ಗಳೂ ನಮ್ಮಲ್ಲಿಲ್ಲ. ನಮ್ಮ ಆದ್ಯತೆ ಗುಂಡಿ ಮುಚ್ಚುವುದಕ್ಕೆ’ ಎನ್ನುತ್ತಾರೆ ಮುಖ್ಯ ಎಂಜಿನಿಯರ್‌ ಸೋಮಶೇಖರ್‌.

ನ.10ರ ಗಡುವು
‘ನವೆಂಬರ್‌ 10ರೊಳಗೆ ನಗರದ ಎಲ್ಲ ರಸ್ತೆಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನ.2ರಿಂದ ದಿಢೀರ್‌ ತಪಾಸಣೆ ಕೈಗೊಳ್ಳುತ್ತೇನೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಮೇಯರ್‌ ಅವರು ನ.2ರಂದು ಕಾಂಕ್ರೀಟ್‌ ಕುಸಿತ ಕಂಡ ಸುಮನಹಳ್ಳಿ ಮೇಲ್ಸೇತುವೆಯನ್ನು ತಪಾಸಣೆ ನಡೆಸಿದ್ದು ಬಿಟ್ಟರೆ ಬೇರೆ ಕಡೆ ತಪಾಸಣೆ ನಡೆಸಿದ್ದು ಕಾಣಿಸಲಿಲ್ಲ. ಭಾನುವಾರವೂ ಗುಂಡಿಗಳ ತಪಾಸಣೆ ನಡೆಸಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. 

ವಾರದಿಂದ ಈಚೆಗೆ ರಸ್ತೆಗುಂಡಿ ಮುಚ್ಚುವ ಕಾರ್ಯವನ್ನು ಪಾಲಿಕೆ ಆರಂಭಿಸಿದೆ.

ತೆವಳುವ ಪೈಥಾನ್
ಬಿಬಿಎಂಪಿಯು ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿಯೇ ಎರಡು ಪೈಥಾನ್‌ ಯಂತ್ರಗಳನ್ನು ಖರೀದಿಸಿದೆ. ಈ ಯಂತ್ರಗಳು ಗುಂಡಿ ಮುಚ್ಚಿದ್ದಕ್ಕೆ ಪ್ರತಿ ಕಿ.ಮೀಗೆ ₹ 1.12 ಲಕ್ಷ ಮೊತ್ತವನ್ನು ಪಾಲಿಕೆ ನೀಡುತ್ತದೆ.

‘ಈ ಯಂತ್ರವು ದಿನವೊಂದಕ್ಕೆ ಸರಾಸರಿ 150 ಗುಂಡಿಗಳನ್ನು ಮುಚ್ಚುವ ಸಾಮರ್ಥ್ಯ ಹೊಂದಿದೆ. ಇವು ದಿನವೊಂದಕ್ಕೆ 200 ಗುಂಡಿಗಳನ್ನು ಮುಚ್ಚಿದ ಉದಾಹರಣೆಯೂ ಇದೆ’ ಎನ್ನುತ್ತಾರೆ ಎಸ್‌.ಸೋಮಶೇಖರ್‌.

ಈ ಯಂತ್ರಗಳು ಇಷ್ಟೊಂದು ಪ್ರಮಾಣದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ನಿಜವೇ ಆಗಿದ್ದರೆ, ನಗರದ ರಸ್ತೆಗಳ ಪರಿಸ್ಥಿತಿ ಈ ರೀತಿ ಇರಲು ಸಾಧ್ಯವೇ ಇರುತ್ತಿರಲಿಲ್ಲ.

‘ಕೆಲವೊಮ್ಮೆ ಗುಂಡಿ ಮುಚ್ಚಬೇಕಾದ ಸ್ಥಳಕ್ಕೆ ತಲುಪಲು ಸಮಯ ತಗಲುತ್ತದೆ. ಅಂತಹ ಸಂದರ್ಭದಲ್ಲಿ ಈ ಯಂತ್ರವು ಮುಚ್ಚುವ ಗುಂಡಿಗಳ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಸಮಜಾಯಿಷಿಯನ್ನೂ ನೀಡುತ್ತಾರೆ ಸೋಮಶೇಖರ್‌.

 

ಪ್ರತಿಕ್ರಿಯಿಸಿ (+)