ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಭಾಷೆಯ ಅಗತ್ಯವಿಲ್ಲ: ಬಂಜಗೆರೆ ಜಯಪ್ರಕಾಶ್

Last Updated 1 ಫೆಬ್ರುವರಿ 2023, 16:33 IST
ಅಕ್ಷರ ಗಾತ್ರ

ಬೆಂಗಳೂರು: ‘ನಮಗೆ ರಾಷ್ಟ್ರ ಭಾಷೆ ಅಗತ್ಯವಿಲ್ಲ. ಹಿಂದಿಗೆ ಆ ಪಟ್ಟ ಕೊಡುವುದನ್ನು ಬಹುಪಾಲು ಭಾಷಿಕರು ಒಪ್ಪುವುದಿಲ್ಲ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಜಯ ಕರ್ನಾಟಕ ಜನಪರ ವೇದಿಕೆ ಆಯೋಜಿಸಿದ್ದ ‘ಪ್ರಸಕ್ತ ರಾಜಕೀಯದಲ್ಲಿ ಕನ್ನಡದ ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದಿಯನ್ನು ಸಹೋದರ ಭಾಷೆಯಾಗಿ ಒಪ್ಪಲು ವಿರೋಧ ಇಲ್ಲ. ಆದರೆ, ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿ ಹೇರುವ ಪ್ರಯತ್ನವನ್ನು ವಿರೋಧಿಸಬೇಕಾಗುತ್ತದೆ ಮತ್ತು ಅದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ’ ಎಂದರು.

ನಮಗೆ ಸಂಪರ್ಕ ಭಾಷೆ ಅಗತ್ಯವಿದೆಯೇ ಹೊರತು ರಾಷ್ಟ್ರಭಾಷೆಯಲ್ಲ. ಕನ್ನಡ ಭಾಷಿಕರು ದಿಟ್ಟ ನಿರ್ಧಾರ ತೆಗೆದುಕೊಂಡರೆ ಕನ್ನಡ ಉಳಿಸಿ ಎಂದು ಹೇಳುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕನ್ನಡದ ಹಿತಾಸಕ್ತಿ ಕಾಪಾಡಲು ಬೇಕಿರುವ ಪ್ರದೇಶಿಕ ಪಕ್ಷವನ್ನು ಕನ್ನಡಿಗರು ಮುಂದಾದರೂ ರೂಪಿಸಬೇಕಿದೆ. ಶಿಕ್ಷಣದಲ್ಲಿ ಕನ್ನಡ ಬಳಕೆ ಹೆಚ್ಚಿಸುವುದು, ಉದ್ಯಮ, ಆಡಳಿತ, ನ್ಯಾಯಾಂಗದಲ್ಲಿ ಕನ್ನಡವೇ ಬಳಕೆಯಾಗುವಂತೆ ಮಾಡುವ ಬದ್ಧತೆಯನ್ನು ರಾಜಕೀಯ ಪಕ್ಷಗಳು ತೋರಿಸಬೇಕು ಎಂದರು.

ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ರಾಜಕೀಯ ಪಕ್ಷಗಳು ಸ್ಥಳೀಯ ಭಾಷೆಗೆ ಒತ್ತು ನೀಡುತ್ತಿವೆ. ರಾಜ್ಯದಲ್ಲೂ ಕನ್ನಡಕ್ಕೆ ಒತ್ತು ನೀಡುವ ಪರಿಸ್ಥಿತಿ ನಿರ್ಮಾಣವಾಗಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯಗಳು ಪ್ರಸ್ತಾಪ ಆಗುವಂತಾಗಬೇಕು. ಅದಕ್ಕೆ ಬೇಕಿರುವ ಒತ್ತಡವನ್ನು ರೂಪಿಸಬೇಕಾಗುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ‘ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಆತಂಕದ ಸಂಗತಿ. ಕನ್ನಡ ಶಾಲೆಗಳು ಉಳಿದರೆ ಭಾಷೆಯೂ ಉಳಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT