ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾರಂಭವಾಗದ ಪುನರ್ವಸತಿ ಕೇಂದ್ರ

Last Updated 30 ಅಕ್ಟೋಬರ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಪುನರ್ವಸತಿ ಕೇಂದ್ರವು ಎರಡು ತಿಂಗಳು ಕಳೆದರೂ ಕಾರ್ಯವನ್ನಾರಂಭಿಸಿಲ್ಲ. ಇದರಿಂದಾಗಿ ಚೇತರಿಸಿಕೊಂಡವರು ಕೋವಿಡ್‌ ಉಂಟುಮಾಡುತ್ತಿರುವ ಪರಿಣಾಮಗಳ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವ ಸಂಬಂಧ ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸುವುದಾಗಿ ಕಳೆದ ಆಗಸ್ಟ್‌ನಲ್ಲಿ ಘೋಷಿಸಲಾಗಿತ್ತು. ನಗರದಲ್ಲಿ 3.34 ಲಕ್ಷ ಮಂದಿ ಸೋಂಕಿತರಲ್ಲಿ 2.93 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಪೀಡಿತರಲ್ಲಿ ಬಹುತೇಕರು ಮಧ್ಯಮ ವಯಸ್ಕರಾಗಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿರುವ ವೈರಲ್ ರಿಸರ್ಚ್ ಆ್ಯಂಡ್ ಡಯಾಗ್ನೋಸ್ಟಿಕ್ ಪ್ರಯೋಗಾಲಯದ (ವಿಆರ್‌ಡಿಎಲ್) ಪಕ್ಕದಲ್ಲಿ ಕೇಂದ್ರಕ್ಕೆ ಕೊಠಡಿಯನ್ನು ನಿಗದಿಪಡಿಸಿದ್ದರೂ ಉದ್ಘಾಟನೆಯಾಗಲಿಲ್ಲ. ಹೀಗಾಗಿ ಕೇಂದ್ರದಲ್ಲಿ ಚಿಕಿತ್ಸೆ ಒದಗಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

‘ತಪಾಸಣೆ ಕೊಠಡಿಯೊಂದನ್ನು ಪುನರ್ವಸತಿ ಕೇಂದ್ರ ಪ್ರಾರಂಭಿಸಲು ಗುರುತಿಸಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕಾದ ಕಾರಣ ಖಾಲಿ ಇರುವ ಕೊಠಡಿಯನ್ನು ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಕೊಠಡಿಯನ್ನು ಬಳಸಲು ಸಾಧ್ಯವಾಗದಿದ್ದಲ್ಲಿ ಪುನರ್ವಸತಿ ಕೇಂದ್ರಕ್ಕೆ ಬೇರೆ ಕೊಠಡಿಯನ್ನು ಗುರುತಿಸಬೇಕಾಗುತ್ತದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

72 ಮಂದಿಗೆ ಚಿಕಿತ್ಸೆ: ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಅಲ್ಲಿ ಸೆ.1ರಿಂದ ಈವರೆಗೆ 72 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಪ್ರತಿ ವ್ಯಕ್ತಿಗೆ ಚಿಕಿತ್ಸೆಗೆ ಸರಾಸರಿ ₹ 5,500 ವೆಚ್ಚಮಾಡಲಾಗಿದೆ.

ಶೇ 33ರಷ್ಟು ಮಂದಿ ಉಸಿರಾಟದ ಸಮಸ್ಯೆ, ಶೇ 28ರಷ್ಟು ಜನರು ಕೆಮ್ಮು, ಶೇ 24 ರಷ್ಟು ಮಂದಿ ಶ್ವಾಸಕೋಶದ ಸಮಸ್ಯೆ ಹಾಗೂ ಶೇ 15ರಷ್ಟು ಮಂದಿ ಆಮ್ಲಜನಕದ ಕೊರತೆಯ ಜತೆಗೆ ಖಿನ್ನತೆ ಸೇರಿದಂತೆ ವಿವಿಧ ಮಾನಸಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT