ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯದ ಹೊರಗೆ ವ್ಯಾಜ್ಯ ಇತ್ಯರ್ಥಕ್ಕೆ ಭೂಮಾಲೀಕರ ಸಮ್ಮತಿ?

ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಕಾರ್ಯಕ್ಕೆ ಭೂವಿವಾದ ಅಡ್ಡಿ
Last Updated 7 ಜನವರಿ 2021, 19:40 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ಬಿಟ್ಟುಕೊಡಲು ಅಸಮ್ಮತಿ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿರುವ ಭೂಮಾಲೀಕರು ಈ ವ್ಯಾಜ್ಯವನ್ನು ನ್ಯಾಯಾಲಯದಿಂದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಮ್ಮತಿ ಸೂಚಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.

ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಈ ಬಡಾವಣೆಯಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗೆ ಅಡ್ಡಿ ಉಂಟಾಗಿದೆ. ಭೂ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದರು. ಹಾಗಾಗಿ ವಿಶ್ವನಾಥ್ ಅವರು ಈ ಬಡಾವಣೆಯ ಕನ್ನಹಳ್ಳಿ, ಅರ್ಚಕರಹಳ್ಳಿ ಬಡಾವಣೆ, ಸೂಳೆಕೆರೆ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು. ವ್ಯಾಜ್ಯವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಬಗ್ಗೆ ಭೂಮಾಲೀಕರ ಮನವೊಲಿಸುವ ಪ್ರಯತ್ನ ಮಾಡಿದರು.

‘ಈಗಿನ ನಿಯಮಗಳ ಪ್ರಕಾರ ಜಮೀನು ನೀಡಿರುವ ಭೂಮಾಲೀಕ ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನವನ್ನು40:60 ಅನುಪಾತದಲ್ಲಿ ನೀಡಲು ಅಡ್ಡಿ ಇಲ್ಲ. ನಮ್ಮ ಪಕ್ಷ ರೈತರ ಹಿತವನ್ನು ಯಾವತ್ತೂ ಕೈಬಿಡುವುದಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸಲು ಬಿಡಿಎ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ವಿಶ್ವನಾಥ್‌ ಭರವಸೆ ನೀಡಿದರು.

ಡಿಸೆಂಬರ್‌ನಲ್ಲಿ ನಿವೇಶನ ಹಂಚಿಕೆ: ಬಡಾವಣೆಯಲ್ಲಿ ನಿವೇಶನ ಹಂಚಿಕೆಯಮೂರನೇ ಹಂತದ ಪ್ರಕ್ರಿಯೆಯನ್ನು ಈ ವರ್ಷದ ಡಿಸೆಂಬರ್ ಅಂತ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನಾಗರಿಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸುವ ಮುನ್ನ, ಭೂಮಿ ಬಿಟ್ಟುಕೊಟ್ಟವರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡಲಿದ್ದೇವೆ’ ಎಂದರು.

ಪರಿಹಾರ ವಿಳಂಬ: ರೈತರ ಆಕ್ರೋಶ

‘ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಾ ಸತಾಯಿಸುತ್ತಿದ್ದಾರೆ’ ಎಂದು ರೈತ ಮುಖಂಡರಾದ ಕೃಷ್ಣಪ್ಪ ಮತ್ತು ಚನ್ನಪ್ಪ ದೂರಿದರು.

‘ನ್ಯಾಯಸಮ್ಮತವಾಗಿ ಪರಿಹಾರ ನೀಡಿದರೆ ಮೊಕದ್ದಮೆಗಳನ್ನು ಹಿಂಪಡೆದು ಬಡಾವಣೆ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ’ ಎಂದರು. ಸ್ಥಳದಲ್ಲಿದ್ದ ಅನೇಕ ರೈತರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

'ಸ್ಮಶಾನಕ್ಕೆ ತಲಾ 2 ಎಕರೆ’

‘ಬಡಾವಣೆಗೆ ಭೂಮಿ ನೀಡಿರುವ ಕೆಲವು ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಇಂತಹ ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣಕ್ಕಾಗಿ ತಲಾ ಎರಡು ಎಕರೆ ಜಮೀನನ್ನು ಮೀಸಲಿಡಬೇಕು’ ಎಂದು ಅಧಿಕಾರಿಗಳಿಗೆ ವಿಶ್ವನಾಥ್‌ ಸೂಚನೆ ನೀಡಿದರು.

‘ಬಡಾವಣೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಪ್ರತಿ ಬ್ಲಾಕ್‌ನಲ್ಲಿಯೂ ಮಕ್ಕಳಿಗಾಗಿ ಆಟದ ಮೈದಾನವೂ ಸೇರಿದಂತೆ ಸಕಲ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT