ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಗತಿಪರಿಶೀಲನಾ ಸಭೆ: ಜಲ ಜೀವನ್ ಮಿಷನ್ ಯೋಜನೆ ವಿರುದ್ಧ ಆಕ್ಷೇಪ

Published 20 ಜೂನ್ 2024, 0:30 IST
Last Updated 20 ಜೂನ್ 2024, 0:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ಜಲಜೀವನ ಮಿಷನ್ ಯೋಜನೆ ಹೆಸರಿನಲ್ಲಿ ಮನೆಮನೆಗೆ ನಲ್ಲಿ ನೀರು ಸರಬರಾಜು ಮಾಡುವ ಯೋಜನೆಯ ಅಗತ್ಯ ಇರಲಿಲ್ಲ. ಇದು ದುಡ್ಡು ಮಾಡುವ ಕಾರ್ಯಕ್ರಮ’ ಎಂದು ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಆರೋಪಿಸಿದರು.

ಮಾಗಡಿ ರಸ್ತೆಯ ಬಿಇಎಲ್ ಬಡಾವಣೆಯ ಶಾಸಕರ ಕಚೇರಿಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಕ್ಷ ಭೇದ ಮರೆತು ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಈಗಾಗಲೇ ಮನೆಮನೆಗಳಿಗೆ ಕೊಳಾಯಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ಮತ್ತೊಂದು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಜಾರಿಗೆ ತರಲಾಗಿದೆ‘ ಎಂದು ದೂರಿದರು. ಕಳಪೆ ಕಾಮಗಾರಿಗಳು, ರಸ್ತೆ ಅಗೆದ ಬಳಿಕ ಮುಚ್ಚದೇ ಹಾಗೇ ಬಿಟ್ಟು ಹೋಗಿರುವುದು, ಒಳಚರಂಡಿ ಒಡೆದು ಸರಿಪಡಿಸದಿವುದರ ಬಗ್ಗೆಯೂ ಸದಸ್ಯರು ಆಕ್ರೋಶ ವ್ಯಕ್ತ‍ಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ನೀರು ಸರಬರಾಜು ಎಂಜಿನಿಯರಿಂಗ್ ವಿಭಾಗದ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದರೂ,  ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ದೂರಿದರು.

ಕಾಮಗಾರಿಗಳ ನೆಪದಲ್ಲಿ ರಸ್ತೆ ಅಗೆದು, ನೀರಿನ ಪೈಪು, ಒಳ ಚರಂಡಿ ಪೈಪು ಒಡೆದು ಹಾಕಿ ಗುತ್ತಿಗೆದಾರರು ಕಾಣೆಯಾಗುತ್ತಾರೆ. ಎಂಜಿನಿಯರ್‌ಗಳಿಗೆ ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ಸ್ಥಳೀಯವಾಗಿ ಸಿಗುವ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರಿಗೆ ಜನರು ಶಾಪ ಹಾಕುತ್ತಿದ್ದಾರೆ ಎಂದು ಕಗ್ಗಲೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಪರ್ವೀಜ್, ರಾಮೋಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೇಣುಗೋಪಲ್, ಚೋಳನಾಯಕನಹಳ್ಳಿ ಪಂಚಾಯಿತಿಯ ಡಿ.ಆನಂದಸ್ವಾಮಿ ದೂರಿದರು.

‘ಕಾಮಗಾರಿಗೆ ಸಂಬಂಧ ಇಲ್ಲದೇ ಇದ್ದರೂ ನಾವು ಜನರಿಂದ ಬೈಸಿಕೊಳ್ಳಬೇಕು’ ಎಂದು ತಾವರೆಕೆರೆ ಪಂಚಾಯಿತಿ ಟಿ.ಎಲ್.ಕೆಂಪೇಗೌಡ ಬೇಸರ ವ್ಯಕ್ತಪಡಿಸಿದರು.

ಸೋಮನಹಳ್ಳಿ ಪಂಚಾಯಿತಿ ಉಪಾಧ್ಯಕ್ಷ ಎ.ಕೇಶವ, ಸೂಲಿಕೆರೆ ಪಂಚಾಯಿತಿ ಸದಸ್ಯರಾದ ಎಸ್.ಆರ್. ಮೋಹನ್, ಕೆಂಚನಪುರ ಶೋಭಾ ತಿಮ್ಮೇಗೌಡ, ಎಚ್.ಗೊಲ್ಲಹಳ್ಳಿ, ಪಂಚಾಯಿತಿ ಅಧ್ಯಕ್ಷ ಪಿ.ನಾಗೇಶ್ ಜಲಜೀವನ್‌ ಮಿಷನ್‌ ಯೋಜನೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

‘ನಾಳೆಯಿಂದಲೇ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಇಂದ್ರಕುಮಾರ್‌ ಭರವಸೆ ನೀಡಿದರು.

‘ಮುಂದೆ ಯಾವುದೇ ಸಮಸ್ಯೆ ಬಂದರೂ ನೀವೇ ಜವಾಬ್ದಾರರಾಗುತ್ತೀರಿ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಎಚ್ಚರಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರಿಪ್ರಸಾದ್, ಸಹಾಯಕ ಎಂಜಿನಿಯರ್‌ಗಳಾದ ರವಿ, ಅನುಷ್ಕಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT