ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಆದೇಶ: ₹ 9.75 ಕೋಟಿ ನಷ್ಟ!

ಓಕಳಿಪುರ ಸಿಗ್ನಲ್‌ಫ್ರೀ ಕಾರಿಡಾರ್‌: ರೈಲ್ವೆಗೆ ಅಗತ್ಯಕ್ಕಿಂತ ಹೆಚ್ಚು ಭೂಮಿ ಹಸ್ತಾಂತರ
Last Updated 8 ಜುಲೈ 2018, 19:24 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಇಲಾಖೆ ಆದೇಶ ಹೊರಡಿಸುವಾಗ ಮಾಡಿದ ಲೋಪದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ ₹ 9.75 ಕೋಟಿ ನಷ್ಟ ಉಂಟಾಗಿದೆ.

ಮಹಾಲೇಖಪಾಲರ (ಸಿಎಜಿ) 2018ನೇ ಸಾಲಿನ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ನಗರದ ಓಕಳಿಪುರ ವೃತ್ತದಿಂದ ಕಾರಂಜಿ ವೃತ್ತದವರೆಗೆ ಎಂಟು ಪಥಗಳ ಸಿಗ್ನಲ್‌ಫ್ರೀ ಕಾರಿಡಾರ್‌ ನಿರ್ಮಿಸಲು ನೈರುತ್ಯ ರೈಲ್ವೆಯ 3.16 ಎಕರೆ ಜಾಗದ ಅವಶ್ಯಕತೆ ಇತ್ತು. ಬಿನ್ನಿಮಿಲ್‌ ಬಳಿ ಅಷ್ಟೇ ವಿಸ್ತೀರ್ಣದ ಭೂಮಿಯನ್ನು ನೀಡಬೇಕೆಂಬ ಷರತ್ತಿನೊಂದಿಗೆ ಭೂಮಿ ಬಿಟ್ಟುಕೊಡಲು ರೈಲ್ವೆ ಇಲಾಖೆ ಒಪ್ಪಿತ್ತು. ತನಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ ರೈಲ್ವೆ ಇಲಾಖೆ 2012ರ ನವೆಂಬರ್‌ನಲ್ಲಿ ಕಂದಾಯ ಇಲಾಖೆಗೆ ತಿಳಿಸಿತು. ಆದರೆ, ಕಂದಾಯ ಇಲಾಖೆ 3.16 ಎಕರೆ ಭೂಮಿಗೆ ಬದಲಾಗಿ 3 ಎಕರೆ 16 ಗುಂಟೆ (3.40 ಎಕರೆ) ಭೂಮಿ ಸ್ವಾಧೀನಕ್ಕೆ 2013ರ ಜನವರಿಯಲ್ಲಿ ಅನುಮೋದನೆ ನೀಡಿತು. ವಿಶೇಷ ಭೂಸ್ವಾಧೀನಾಧಿಕಾರಿಯವರು ಅಷ್ಟೇ ಪ್ರಮಾಣದ ಭೂಮಿಯನ್ನು ಸ್ವಾಧಿನ
ಪಡಿಸಿಕೊಂಡು 2014ರಂದು ಮಾರ್ಚ್‌ 21ರಂದು ನೈರುತ್ಯ ರೈಲ್ವೆಗೆ ಹಸ್ತಾಂತರಿಸಿದರು. ಇದರಿಂದಾಗಿ ರೈಲ್ವೆ ಇಲಾಖೆಗೆ 0.24 ಎಕರೆ ಭೂಮಿ ಹೆಚ್ಚುವರಿಯಾಗಿ ವರ್ಗಾವಣೆಯಾಯಿತು.

ಸ್ವಾಧೀನಪಡಿಸಿಕೊಂಡ ಭೂಮಿಗೆ ಒಟ್ಟು ₹158.24 ಕೋಟಿ ಪರಿಹಾರ ನಿಗದಿಪಡಿಸಲಾಗಿತ್ತು. ಇದನ್ನು ಪಾವತಿಸುವಾಗ ವಿಳಂಬವಾಗಿದ್ದರಿಂದ ಬಡ್ಡಿಯನ್ನು ಸೇರಿಸಿ ಪಾವತಿಸಬೇಕಾಯಿತು. ರೈಲ್ವೆಗೆ ಹೆಚ್ಚುವರಿಯಾಗಿ ನೀಡಿದ ಭೂಮಿ ಸಲುವಾಗಿ ₹ 9.75 ಕೋಟಿ (ಪರಿಹಾರ ಮತ್ತು ಬಡ್ಡಿ ಸೇರಿ) ವೆಚ್ಚವನ್ನು ಸರ್ಕಾರ ಭರಿಸಿದೆ ಎಂದು ಸಿಎಜಿ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT