ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ, ಉಬರ್: ಪ್ರಯಾಣ ದರ ಶೇ 10ರಷ್ಟು ಹೆಚ್ಚಳ

ಶೇ 5ರಷ್ಟು ಸೇವಾ ಶುಲ್ಕ, ಶೇ 5ರಷ್ಟು ಜಿಎಸ್‌ಟಿ: ಸಾರಿಗೆ ಇಲಾಖೆಯಿಂದ ಅಧಿಸೂಚನೆ
Last Updated 25 ನವೆಂಬರ್ 2022, 20:43 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪ್ ಆಧಾರಿತ ಸೇವೆ ಒದಗಿಸುವ ಆಟೊರಿಕ್ಷಾ ದರ ನಿಗದಿಪಡಿಸಿರುವ ರಾಜ್ಯ ಸರ್ಕಾರ, ಪ್ರಯಾಣ ದರಗಳ ಮೇಲೆ ಸೇವಾ ಶುಲ್ಕ ಮತ್ತು ಜಿಎಸ್‌ಟಿ ಸೇರಿ ಶೇ 10ರಷ್ಟು ಹೆಚ್ಚಳ ಮಾಡಿಕೊಳ್ಳಲು ಅವಕಾಶ ನೀಡಿ ಅಧಿಸೂಚನೆ ಹೊರಡಿಸಿದೆ.

ಸಾಮಾನ್ಯ ಆಟೊರಿಕ್ಷಾಗಳಲ್ಲಿ ಕನಿಷ್ಠ ಪ್ರಯಾಣ ದರ(2 ಕಿಲೋ ಮೀಟರ್‌ಗೆ) ₹30 ಇದೆ. ಅದಕ್ಕೆ ಸೇವಾ ಶುಲ್ಕ ಶೇ 5ರಷ್ಟು ಮತ್ತು ಜಿಎಸ್‌ಟಿ ಶೇ 5ರಷ್ಟು ಸೇರಿಕೊಳ್ಳಲಿದೆ. ಅದರಂತೆ ಕನಿಷ್ಠ ದರ ₹33 ಆಗಲಿದೆ. ನಂತರದ ಪ್ರತಿ ಕಿ.ಮೀ.ಗೆ ₹15 ಜತೆಗೆ ಶೇ 10ರಷ್ಟು ಹೆಚ್ಚುವರಿ ದರ ಸೇರುತ್ತದೆ. ಉದಾಹರಣೆಗೆ ಸಾಮಾನ್ಯ ಆಟೊಗಳಲ್ಲಿ ₹45 ಪ್ರಯಾಣ ದರವಾದರೆ, ಆ್ಯಪ್ ಆಧಾರಿತ ಆಟೊಗಳಲ್ಲಿ ₹49.50 ಆಗಲಿದೆ.

ಕಾಲಕಾಲಕ್ಕೆ ನಿಗದಿಯಾಗುವ ಆಟೊರಿಕ್ಷಾ ಪ್ರಯಾಣದ ದರ ಮೇಲೆ ಶೇ 10ರಷ್ಟನ್ನು ಮಾತ್ರ ಹೆಚ್ಚಳ ಮಾಡಿಕೊಳ್ಳಲು ಅವಕಾಶ ಇದೆ. ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 67ರಡಿ ಹೊರಡಿಸಿರುವ ಆದೇಶದ ಪ್ರಕಾರ ಈ ಅವಕಾಶ ಮಾಡಲಾಗಿದೆ. ಅಗ್ರಿಗೇಟರ್ ಸೇವೆ ಒದಗಿಸಲು ಪರವಾನಗಿ ಪಡೆದಿರುವ ಸಂಸ್ಥೆಗಳು ಮಾತ್ರ ಈ ದರ ವಿಧಿಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.

ಕನಿಷ್ಠ ದರವನ್ನು ₹100 ನಿಗದಿ ಮಾಡಿ ಬೇಕಾಬಿಟ್ಟಿಯಾಗಿ ದರ ಏರಿಳಿತ ಮಾಡುತ್ತಿರುವ ದೂರುಗಳ ಬಂದ ಬಳಿಕ ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿತ್ತು. ಆಗ ಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್ ಮೊರೆಹೋಗಿದ್ದವು. ಕಂಪನಿಗಳ ಜತೆ ಚರ್ಚಿಸಿ ದರ ನಿಗದಿ ಮಾಡುವಂತೆ ಹೈಕೋರ್ಟ್‌ ಸೂಚನೆ ನೀಡಿತ್ತು.

ಅಗ್ರಿಗೇಟರ್ ಕಂಪನಿಗಳ ಜತೆ ಎರಡು ಬಾರಿ ನಡೆಸಿದ್ದ ಸಭೆಯಲ್ಲಿ ಒಮ್ಮತ ಮೂಡಿರಲಿಲ್ಲ. ಬೇಡಿಕೆಗೆ ತಕ್ಕಂತೆ ದರ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕಂಪನಿಗಳು ಪಟ್ಟುಹಿಡಿದಿದ್ದವು. ಈ ಬೇಡಿಕೆ ತಿರಸ್ಕರಿಸಿ ಶೇ 10ರಷ್ಟು ಮಾತ್ರ ದರ ಹೆಚ್ಚಿಸಿಕೊಳ್ಳಲು ಸಾರಿಗೆ ಇಲಾಖೆ ಅವಕಾಶ ನೀಡಿದೆ. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಲಿದೆ.

‘ಈ ದರ ಒಪ್ಪಿಗೆಯಾಗದಿದ್ದರೆ ಕಂಪನಿಗಳು ತಮ್ಮ ವಾದ ಮಂಡಿಸಲು ಸಾಧ್ಯತೆ ಇದೆ. ಹೈಕೋರ್ಟ್‌ ತೆಗೆದುಕೊಳ್ಳುವ ತೀರ್ಮಾನವನ್ನು ಈ ಆದೇಶ ಅವಲಂಭಿಸಿದೆ’ ಎಂದು ಆಟೊರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.

ಪರವಾನಗಿಯೇ ಇಲ್ಲ

‘ಆಟೊರಿಕ್ಷಾ ಅಗ್ರಿಗೇಟರ್‌ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ‌ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸದ್ಯ ಈ ಸೇವೆ ಒದಗಿಸುತ್ತಿರುವ ಯಾವುದೇ ಕಂಪನಿಯೂ ಆಟೊರಿಕ್ಷಾ ಅಗ್ರಿಗೇಟರ್ ಪರನವಾಗಿ ಪಡೆದಿಲ್ಲ. ಈ ಅಧಿಸೂಚನೆ ಯಾರಿಗೆ ಅನ್ವಯವಾಗಲಿದೆ’ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಪ್ರಶ್ನಿಸಿದ್ದಾರೆ.

‌‘ಆಟೊರಿಕ್ಷಾ ಸೇವೆಯನ್ನು ಸದ್ಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ(ಆರ್‌ಟಿಎ) ನಿರ್ವಹಿಸುತ್ತಿದೆ. ಇ–ಕಾಮರ್ಸ್‌ ನಿಯಮದ ಅಡಿಯಲ್ಲಿ ನೋಂದಣಿ ಮಾಡಿಕೊಂಡರೆ ಆರ್‌ಟಿಎ ವ್ಯಾಪ್ತಿಯಿಂದ ಹೊರ ಹೋಗಬೇಕಾಗುತ್ತದೆ. ಇದೆಲ್ಲವೂ ಸಾಧ್ಯವೇ ಎಂಬುದೇ ಪ್ರಶ್ನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT