ಭಾನುವಾರ, ಜನವರಿ 16, 2022
28 °C

ಓಮೈಕ್ರಾನ್: ಸಂಪರ್ಕಿತ ಮತ್ತಿಬ್ಬರಿಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್ ಸೋಂಕಿತ ವ್ಯಕ್ತಿಯ ಪರೋಕ್ಷ ಸಂಪರ್ಕಕ್ಕೆ ಬಂದಿದ್ದ ಇಬ್ಬರಿಗೆ ಕೋವಿಡ್‌ ಇರುವುದು ಶನಿವಾರ ದೃಢಪಟ್ಟಿದೆ. ‌‌ಇದರೊಂದಿಗೆ ಓಮೈಕ್ರಾನ್ ಸೋಂಕಿತರ ಸಂಪರ್ಕದಿಂದ ಕೋವಿಡ್‌ಗೆ ಒಳಗಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಓಮೈಕ್ರಾನ್ ಸೋಂಕಿತರ ನೇರ ಸಂಪರ್ಕಕ್ಕೆ ಬಂದಿದ್ದ ಐವರು ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ನಾಲ್ವರು ಕೋವಿಡ್‌ ಸೋಂಕಿತರಾಗಿದ್ದಾರೆ.

‘ಸೋಂಕು ದೃಢಪಟ್ಟವರ ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಲಾಗಿದೆ. 9 ಮಂದಿಯಲ್ಲಿ ಎಷ್ಟು ಜನ ಓಮೈಕ್ರಾನ್ ಸೋಂಕು ಹೊಂದಿದ್ದಾರೆ ಎಂಬುದು ಇದರ ಫಲಿತಾಂಶ ಕೈ ಸೇರಿದ ಬಳಿಕ ಗೊತ್ತಾಗಲಿದೆ. ಈ ವರದಿ ಬರಲು ಕನಿಷ್ಠ ಒಂದು ವಾರ ಸಮಯ ಬೇಕು. ಮೊದಲ ಮಾದರಿ ಕಳುಹಿಸಿ ಎರಡು ದಿನವಷ್ಟೇ ಆಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ. ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಕ್ಷಿಣ ಆಫ್ರಿಕಾದ ಪ್ರಜೆಗಳೂ ಸೇರಿ ಮತ್ತು ಓಮೈಕ್ರಾನ್ ಸೋಂಕಿತರ ಎಲ್ಲಾ ಸಂಪರ್ಕಿತರು ಪತ್ತೆಯಾಗಿದ್ದಾರೆ. ಎಲ್ಲರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಿ, ಅವರ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕೋವಿಡ್‌ ಪರಿಣಾಮ ವಿಶೇಷ ಉಪನ್ಯಾಸ

ಬೆಂಗಳೂರು: ನಗರದ ರಾಮಯ್ಯ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ ಪುಣೆಯ ‘ರಾಷ್ಟ್ರೀಯ ಬ್ಯಾಂಕ್‌ ನಿರ್ವಹಣೆ ಸಂಸ್ಥೆ’ ನಿರ್ದೇಶಕ ಪಾರ್ಥ ರೈ ಅವರು ಶನಿವಾರ ವಿಶೇಷ ಉಪನ್ಯಾಸ ನೀಡಿದರು.

‘ಸಾಂಕ್ರಾಮಿಕ ಕಾಯಿಲೆ, ಜಾಗತಿಕ ಬೆಳವಣಿಗೆ ಮತ್ತು ಜಾಗತಿ ಷೇರು ಮಾರುಕಟ್ಟೆ: ಸಂಬಂಧ ಕಡಿತವಾಗುವುದೇ’ ಎಂಬ ಕುರಿತು ಅವರು ವಿಶ್ಲೇಷಿಸಿದರು. ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ಸಾಂಕ್ರಾಮಿಕ ಕಾಯಿಲೆ ಬೀರಿದ ಪರಿಣಾಮಗಳ ಕುರಿತು ಬೆಳಕು ಚೆಲ್ಲಿದರು.

ಹೂಡಿಕೆ, ವಿದೇಶಿ ಷೇರುಗಳ ಖರೀದಿಯಿಂದಾಗುವ ಪರಿಣಾಮಗಳು, ಭಾರತದ ಷೇರು ಮಾರುಕಟ್ಟೆ ಮೇಲೆ ಜಾಗತಿಕ ಮಾರುಕಟ್ಟೆಯ ಪ್ರಭಾವ, ಭಾರತದ ಬ್ಯಾಂಕ್‌ಗಳು ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟುಗಳು, ಹಣಕಾಸು ನೀತಿಗಳು ಮತ್ತು ಭಾರತದ ಆರ್ಥಿಕತೆ ಸವಾಲುಗಳು ಕುರಿತು ಅವರು ವಿವರಿಸಿದರು.

‌ಕೋವಿಡ್‌ನಿಂದ ಭಾರತದ ಆರ್ಥಿಕತೆಯ ಯಾವ ರೀತಿ ಪರಿಣಾಮಗಳನ್ನು ಎದುರಿಸುತ್ತದೆ ಎನ್ನುವ ಬಗ್ಗೆಯೂ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು