ಮಂಗಳವಾರ, ನವೆಂಬರ್ 12, 2019
28 °C
ಸಿಪಿಐ ಪ್ರಧಾನ ಕಾರ್ಯದರ್ಶಿ ಅಭಿಮತ

ಒಂದು ದೇಶ-, ಒಂದೇ ಚುನಾವಣೆ ಪ್ರಜಾಪ್ರಭುತ್ವದಲ್ಲಿ ಅಸಾಧ್ಯ: ಡಿ. ರಾಜಾ

Published:
Updated:
Prajavani

ಬೆಂಗಳೂರು: ‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಹಾಗೂ ಒಂದು ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಾಧ್ಯ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ತಿಳಿಸಿದರು. 

ಇಂದ್ರಜಿತ್‌ ಗುಪ್ತ ಅವರ ಶತಮಾನೋತ್ಸವದ ಅಂಗವಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಹಾಗೂ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಚುನಾವಣಾ ಸುಧಾರಣೆ’ ವಿಚಾರಸಂಕಿರಣದಲ್ಲಿ ಮಾತನಾಡಿದರು. 

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತ್ವಕ್ಕೆ ಆದ್ಯತೆ ನೀಡಬೇಕು. ಒಂದು ದೇಶ– ಒಂದು ಚುನಾವಣೆ ಜಾರಿ ಮಾಡಿದಲ್ಲಿ ಆಡಳಿತ ಪಕ್ಷಕ್ಕೆ ವರದಾನವಾಗಲಿದೆ. ಹಾಗಾಗಿ, ಈ ಪ್ರಸ್ತಾವವನ್ನು ಕೈಬಿಡಬೇಕು. ಅದೇ ರೀತಿ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ತಿದ್ದುಪಡಿ ಮಸೂದೆಯನ್ನು (ಎನ್‌ಆರ್‌ಸಿ) ದೇಶದ ಎಲ್ಲೆಡೆ ಜಾರಿಗೆ ತರುವ ಹಿಂದೆ ರಾಜಕೀಯ ಕುತಂತ್ರ ಅಡಗಿದೆ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸಂಚು ಇದಾಗಿದೆ’ ಎಂದು ಅವರು ತಿಳಿಸಿದರು. 

‘ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಶೇಕಡ 33 ರಷ್ಟು ಮತಗಳನ್ನು ಪಡೆದ ಪಕ್ಷವೊಂದು 303 ಸ್ಥಾನಗಳನ್ನು ಜಯಿಸುತ್ತದೆ. ಇದು ಚುನಾವಣಾ ವ್ಯವಸ್ಥೆಯಲ್ಲಿನ ದೋಷವನ್ನು ಎತ್ತಿ ಹಿಡಿಯಲಿದೆ. ಚುನಾವಣಾ ಆಯುಕ್ತರು ನಿವೃತ್ತಿಯಾದ ಬಳಿಕ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕವಾಗುತ್ತಾರೆ. ಇದು ಕೂಡಾ ಆಡಳಿತ ಪಕ್ಷದ ಪರ ಒಲವು ತೋರಿಸಲು ಕಾರಣವಾಗಿದೆ’ ಎಂದು ತಿಳಿಸಿದರು.

‘ಧಮ್ಕಿ ಧರ್ಮಗುರುಗಳು ಅಪಾಯ’

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ರಾಜಕೀಯ ನಾಯಕರನ್ನು ರಕ್ಷಿಸುತ್ತಿರುವ ಧಮ್ಕಿ ಧರ್ಮಗುರುಗಳಿಂದ ಪ್ರಜಾ‍ಪ್ರಭುತ್ವ ವ್ಯವಸ್ಥೆಗೆ ಅಪಾಯ ಬಂದೊದಗಿದೆ’ ಎಂದು  ಕಳವಳ ವ್ಯಕ್ತಪಡಿಸಿದರು. 

‘ಧರ್ಮ ಆಧಾರಿತ ರಾಜಕೀಯ ನಿಯಂತ್ರಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ನಮ್ಮ ಜಾತಿಯ ನಾಯಕರನ್ನು ಮುಟ್ಟಿದರೆ ನಿಮಗೆ ಪಾಠ ಕಲಿಸುತ್ತೇವೆ ಎಂದು ಧಮ್ಕಿ ಹಾಕುವ ಧರ್ಮಗುರುಗಳ ಸಂಖ್ಯೆ ಹೆಚ್ಚಾಗಿದೆ. ಅಂತವರನ್ನು ಧರ್ಮಗುರುಗಳು ಎಂದು ಕರೆಯುವ ಬದಲು ಜಾತಿಗುರುಗಳು ಎಂದು ಕರೆಯುವುದು ಸೂಕ್ತ. ರಾಜಕೀಯ ಮಾಡುವ ಧರ್ಮಗುರುಗಳು ಪ್ರಬಲರಾಗುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ. ‌ಅಂತವರನ್ನು ನಿಯಂತ್ರಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

***

ಒಂದು ದೇಶ ಒಂದು ಚುನಾವಣೆ 1967ರ ವರೆಗೆ ಸಾಧ್ಯವಾಗಿತ್ತು. ಬಳಿಕ ಪ್ರಾದೇಶಿಕ ಪಕ್ಷಗಳ ಸಂಖ್ಯೆ ಹೆಚ್ಚಾದ ಪರಿಣಾಮ ಚುನಾವಣೆಗಳ ಅವಧಿ ಬದಲಾಯಿತು.

– ಬಿ.ಎಲ್. ಶಂಕರ್, ಕಾಂಗ್ರೆಸ್ ಮುಖಂಡ

ಪ್ರತಿಕ್ರಿಯಿಸಿ (+)