ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌, ಕೃಷ್ಣಬೈರೇಗೌಡ, ಹ್ಯಾರಿಸ್‌ಗೆ ಅಧಿಕ ಅಂಕ

ಬಿ.ಪ್ಯಾಕ್‌ನಿಂದ ನಗರದ 27 ಶಾಸಕರ ಮೌಲ್ಯಮಾಪನ
Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್‌) ಬಿಡುಗಡೆ ಮಾಡಿದ ಶಾಸಕರ ಮೌಲ್ಯಮಾಪನ ಪಟ್ಟಿಯಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಕೃಷಿ ಸಚಿವ ಕೃಷ್ಣಬೈರೇಗೌಡ, ಶಾಸಕ ಎನ್‌.ಎ.ಹ್ಯಾರಿಸ್‌ ಹೆಚ್ಚು ಅಂಕ ಗಳಿಸಿದ್ದಾರೆ.

27 ವಿಧಾನಸಭೆ ಕ್ಷೇತ್ರಗಳ ಶಾಸಕರ ಕಾರ್ಯವೈಖರಿಯನ್ನು ಅಧ್ಯಯನ ಮಾಡಿರುವ ಬಿ.ಪ್ಯಾಕ್‌ ಸಂಸ್ಥೆ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡಿತು.

‘ವಿಧಾನಸಭೆಯಲ್ಲಿ ಹಾಜರಾತಿ, ಚುಕ್ಕೆ ಗುರುತಿನ ಪ್ರಶ್ನೆಗಳು, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು, ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಬಳಕೆ, ಗ್ರಹಣಶಕ್ತಿ ಅಧ್ಯಯನ, ವಿದ್ಯಾರ್ಹತೆ, ಅಪರಾಧ ದಾಖಲೆ, ಸಾಮಾಜಿಕ ಜಾಲತಾಣ ಬಳಕೆ... ಇವುಗಳನ್ನು ಆಧರಿಸಿ ಶಾಸಕರ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಲಾಗಿದೆ’ ಎಂದು ಸಂಸ್ಥೆಯ ಸಿಇಒ ರೇವತಿ ಅಶೋಕ್ ಮಾಹಿತಿ ನೀಡಿದರು.

‘ಶಾಸಕರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಜನರ ಅಭಿಪ್ರಾಯವನ್ನೂ ಸಂಗ್ರಹಿಸಿಲ್ಲ. ಮತ ಹಾಕುವ ಮೊದಲು ಜನರು ತಮ್ಮ ಶಾಸಕರು ಹಾಗೂ ಪ್ರತಿನಿಧಿಗಳ ಕುರಿತು ತಿಳಿದುಕೊಂಡಿರಬೇಕು. ಈ ಉದ್ದೇಶದಿಂದ ಮಾತ್ರ ಪಟ್ಟಿ ಮಾಡಲಾಗಿದೆ. ಶಾಸಕರು ಬೆಂಗಳೂರನ್ನು ಕೇಂದ್ರೀಕರಿಸಿ ಸದನದಲ್ಲಿ ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದಕ್ಕೆ ಕೂಡ ಅಂಕ ನೀಡಿದ್ದೇವೆ’ ಎಂದು ಹೇಳಿದರು.

‘ಶಾಸಕರಾದ ಬೈರತಿ ಬಸವರಾಜ್‌ ಹಾಗೂ ಆರ್‌.ಅಶೋಕ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಅವರಿಗೆ ಐದು ಅಂಕಗಳನ್ನು ಕಡಿಮೆ ನೀಡಲಾಗಿದೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗದ ಶಾಸಕರಿಗೆ ಐದು ಹೆಚ್ಚುವರಿ ಅಂಕ ನೀಡಲಾಗಿದೆ’ ಎಂದರು.

‘ವಿಧಾನಸಭೆ ಸಚಿವಾಲಯ, ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಬಳಕೆ ಕುರಿತು ನಡೆಸಿದ ಸಮೀಕ್ಷೆ, ಮತದಾರರ ಆದ್ಯತೆ ಕುರಿತು ಎಡಿಆರ್‌–ದಕ್ಷ್‌ ನಡೆಸಿದ ಸಮೀಕ್ಷೆ, ಶಾಸಕರು 2013ರಲ್ಲಿ ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡವಿಟ್‌ಗಳು, ಫೇಸ್‌ಬುಕ್‌ ಹಾಗೂ ಟ್ವಿಟರ್ ಖಾತೆಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದರು.

‘ಎಲ್ಲಾ ಪಕ್ಷಗಳ ಪಟ್ಟಿ ಬಿಡುಗಡೆಯಾದ ಬಳಿಕ ಇನ್ನೊಮ್ಮೆ ಆಯಾ ಕ್ಷೇತ್ರದ ಅಭ್ಯರ್ಥಿ ಕುರಿತು ಅಧ್ಯಯನ ನಡೆಸಲಿದ್ದೇವೆ’ ಎಂದು ಹೇಳಿದರು.

ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶಗಳು

* 9 ಶಾಸಕರು ಶೇ 75 ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

* 10 ಶಾಸಕರಿಗೆ ಶೇ 50ರಿಂದ 75ರಷ್ಟು ಅಂಕ ಸಿಕ್ಕಿದೆ.

* 8 ಶಾಸಕರು ಶೇ 50 ಅಂಕ ಗಳಿಸಿದ್ದಾರೆ.

* ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಾತ್ರ ವಿಧಾನಸಭಾ ಕಲಾಪಗಳಲ್ಲಿ ಶೇ 96ರಷ್ಟು ಹಾಜರಾತಿ ಹೊಂದಿದ್ದಾರೆ.

* 27 ಶಾಸಕರು ವಿಧಾನಸಭೆ ಕಲಾಪದಲ್ಲಿ ಒಟ್ಟು 262 ಚುಕ್ಕೆ ಗುರುತಿನ ಹಾಗೂ 3,356 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ.

* 19 ಶಾಸಕರು ಯಾವುದೇ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿಲ್ಲ. ಇಬ್ಬರು ಶಾಸಕರ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿವೆ.

* 18 ಶಾಸಕರು ಶೇ 90ಕ್ಕೂ ಹೆಚ್ಚು ಶಾಸಕ ನಿಧಿಯನ್ನು ವೆಚ್ಚ ಮಾಡಿದ್ದಾರೆ.

* ಮೂವರು ಶಾಸಕರು ಸ್ನಾತಕೋತ್ತರ ಪದವೀಧರರು, 17 ಶಾಸಕರು ಪದವೀಧರರು, ಇಬ್ಬರು ಪಿಯುಸಿ ಮಾಡಿದ್ದಾರೆ. 5 ಶಾಸಕರು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.

* ಎಲ್ಲಾ ಶಾಸಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT