ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಸ್ಟ್ ನುಂಗಣ್ಣ ಕಂಪನಿ!

Published 17 ಸೆಪ್ಟೆಂಬರ್ 2023, 20:12 IST
Last Updated 17 ಸೆಪ್ಟೆಂಬರ್ 2023, 20:12 IST
ಅಕ್ಷರ ಗಾತ್ರ

ಬೆಕ್ಕಣ್ಣ ಪೇಪರು ಓದುತ್ತ, ಪಕ್ಕೆ ಹಿಡಿದುಕೊಂಡು ಪಕಪಕನೆ ನಗುತ್ತಿತ್ತು.

‘ಏನಾತಲೇ… ನೀ ಇಷ್ಟ್‌ ನಗುವಂಥದ್ದು ಏನ್‌ ನಡೆದೈತಿ?’ ನನಗೆ ಅಚ್ಚರಿ.

‘ಅಲ್ಲಾ… ಒಂದ್‌ ಇಲಿ ಹಿಡಿಯಕ್ಕೆ ಎಷ್ಟ್‌ ಖರ್ಚಾಗತೈತಿ’ ನಗುತ್ತಲೇ ಕೇಳಿತು.

‘ನಿನ್ನಂಥ ಬೆಕ್ಕಣ್ಣ ಇದ್ದರೆ ಒಂದ್‌ ನಯಾಪೈಸೆ ಖರ್ಚಾಗಂಗಿಲ್ಲ…’

‘ನೋಡಿಲ್ಲಿ… ಲಕ್ನೋ ರೈಲ್ವೆದವರು 168 ಇಲಿ ಹಿಡಿಯಕ್ಕೆ 69.5 ಲಕ್ಷ ರೂಪಾಯಿ ಖರ್ಚ್‌ ಮಾಡ್ಯಾರಂತ…’ ಬೆಕ್ಕಣ್ಣ ಸುದ್ದಿ ತೋರಿಸಿತು.

‘ಅವೇನು ಬಂಗಾರದ ಇಲಿನಾ ಅಥವಾ ವಜ್ರದ ಇಲಿನಾ?! ಒಂದ್‌ ಜುಜುಬಿ ಇಲಿ ಹಿಡಿಯಕ್ಕೆ ಇಷ್ಟ್‌ ಖರ್ಚು ಮಾಡೂದರ ಬದಲಿಗೆ ನಿನ್ನಂಥ ಒಂದ್‌ ಬೆಕ್ಕು ತಂದು ಬಿಟ್ಟಿದ್ದರೆ ನಯಾಪೈಸೆ ಖರ್ಚಿಲ್ಲದೇ ಅಷ್ಟೂ ಇಲಿ ಹಿಡೀತಿತ್ತಲ್ಲ…!’

‘ನಾನೂ ಅದೇ ಹೇಳದು. ಅದ್ಯಾವುದೋ ಕಂಪನಿಗೆ ಇಲಿ ಹಿಡಿಯೂ ಗುತ್ತಿಗೆ ಕೊಟ್ಟಾರಂತೆ, ಅದ್ರ ಬದಲಿಗೆ ಬೆಕ್ಕುಗಳಿಗೆ ಕೆಲಸ ವಹಿಸಬಹುದಿತ್ತು’.

‘ಟೈಮ್‌ ಮ್ಯಾಗಜಿನ್‌ನವರು ಜಗತ್ತಿನ ನೂರು ಅತ್ಯುತ್ತಮ ಕಂಪನಿಗಳ ಪಟ್ಟಿ ಮಾಡ್ಯಾರಂತೆ. ಅದ್ರಾಗೆ ನಮ್‌ ಇಂಡಿಯಾದ್ದು, ಅಲ್ಲಲ್ಲ ನಮ್‌ ಭಾರತದ್ದು ಬರೇ ಒಂದ್‌ ಕಂಪನಿ ಐತಂತ. ನಮ್‌ ಕರುನಾಡಿನ ಇನ್ಫೊಸಿಸ್‌ ಬಿಟ್ಟರೆ ಮತ್ತಾರ ಕಂಪನಿಗೂ ಜಾಗ ಸಿಕ್ಕಿಲ್ಲಂತ. ಅವ್ರು ಬ್ಯಾರೆ ಮಾನದಂಡಗಳನ್ನ ಇಟ್ಟುಕೊಂಡರೆ ಈ ಇಲಿ ಹಿಡಿಯೋ ಕಂಪನಿಗೂ ಜಾಗ ಸಿಗಬೌದು ನೋಡು’ ಎಂದೆ.

‘ಟೈಮ್‌ ಮ್ಯಾಗಜಿನ್‌ನವರು ಏನೋ ಗೊಟಾಳೆ ಮಾಡ್ಯಾರೆ. ನಮ್ ಅದಾನಿ, ಅಂಬಾನಿ‌ ಕಂಪನಿಗಳು ಇಡೀ ಗೆಲಾಕ್ಸಿವಳಗೇ ಫಸ್ಟ್‌ ಬರೂವಂತಹ ಕಂಪನಿಗಳು. ಹಂತಾದ್ರಾಗೆ ಅವನ್ನೆಲ್ಲ ಬಿಟ್ಟು ಅವ್ರು ಬರೇ ಇನ್ಫಿ ಒಂದನ್ನೇ ಪಟ್ಟಿ ಮಾಡ್ಯಾರಂದ್ರ ಅದು ನಂಬಲರ್ಹ ಅಲ್ಲವೇ ಅಲ್ಲ. ನಾವೇ ಬ್ಯಾರೇ ಪಟ್ಟಿ ಮಾಡೂಣು, ಅದ್ರಾಗೆ ಈ ಇಲಿ ಹಿಡಿಯೋ ಕಂಪನಿಗೆ ಅಗದಿ ಬೆಸ್ಟ್‌ ನುಂಗಣ್ಣ ಕಂಪನಿ ಅಂತ ಮೊದಲ ಐದರಾಗೆ ಒಂದು ಸ್ಥಾನ ಕೊಡೂಣು’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT