ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.18ರಿಂದ 20ರವರೆಗೆ ಸಾವಯವ–ಸಿರಿಧಾನ್ಯ ಸುಗ್ಗಿ

ಧಾನ್ಯಗಳ ಮೌಲ್ಯವರ್ಧನೆಯ ಕಾರ್ಯಾಗಾರ, ನೀರುರಿಸುವ ‘ಸಿರಿ’ ಖಾದ್ಯಗಳು, ಮೇಳಕ್ಕೆ ಉಚಿತ ಪ್ರವೇಶ
Last Updated 17 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸಿರಿಧಾನ್ಯಗಳ ಬಳಕೆ ಹೆಚ್ಚಿಸಲು ಮತ್ತು ಸಾವಯವ ಕೃಷಿ ಉತ್ತೇಜಿಸಲು ನಗರದ ಅರಮನೆ ಮೈದಾನದಲ್ಲಿ ಜ.18ರಿಂದ 20ರವರೆಗೆ ‘ಸಾವಯವ ಮತ್ತು ಸಿರಿಧಾನ್ಯಗಳು: ಅಂತರರಾಷ್ಟ್ರೀಯ ವಾಣಿಜ್ಯ ಮೇಳ’ ಆಯೋಜಿಸಲಾಗಿದೆ.

ಜನಾರೋಗ್ಯ ಕಾಪಾಡುವುದರಲ್ಲಿ, ರೈತರಿಗೆ ವರಮಾನ ತಂದುಕೊಡುವುದರಲ್ಲಿ ಮತ್ತು ಭೂಮಿಯ ಫಲವತ್ತತೆ ಉಳಿಸುವಿಕೆಯಲ್ಲಿ ಸಿರಿಧಾನ್ಯಗಳ ಕೊಡುಗೆ ಏನು ಎಂಬುದನ್ನು ಈ ಮೇಳದಲ್ಲಿ ಸಾರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೇಳದಲ್ಲಿನ ನೂರಾರು ಮಳಿಗೆಗಳಲ್ಲಿ ಹತ್ತಾರು ಸಿರಿಧಾನ್ಯಗಳ ಬೇಸಾಯದ ಮಾಹಿತಿ ಇರಲಿದೆ. ಆ ಧಾನ್ಯಗಳಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಏರ್ಪಾಟು ಮಾಡಲಾಗಿದೆ.

ಈ ಧಾನ್ಯಮೇಳದಲ್ಲಿ ಸುಧಾರಿತ ಕೃಷಿ ಯಂತ್ರೋಪಕರಣಗಳ ಕಾರ್ಯನಿರ್ವಹಣೆಯನ್ನು ಕಣ್ಣಾರೆ ಕಾಣಬಹುದು. ಸಾವಯವ ಮತ್ತು ಸಿರಿಧಾನ್ಯಗಳ ಮಹತ್ವದ ಕುರಿತ ಹತ್ತಾರು ಉಪನ್ಯಾಸಗಳನ್ನು ಕೇಳಬಹುದು. ಆಹಾರ ಉತ್ಪನ್ನಗಳನ್ನು ತಯಾರಿಸುವ ಉದ್ಯಮದವರು ರೈತರಿಂದ ನೇರವಾಗಿ ಧಾನ್ಯಗಳನ್ನು ಖರೀದಿಸುವ ಒಪ್ಪಂದಗಳನ್ನು ಮಾಡಿಕೊಳ್ಳಬಹುದು.

ಸಾವಯವ ಸಿರಿಧಾನ್ಯ ಉತ್ಪಾದನೆಯ ರೈತರ 15 ಪ್ರಾದೇಶಿಕ ಒಕ್ಕೂಟಗಳು, ರೈತ ಉತ್ಪಾದಕ ಸಂಸ್ಥೆಯ ಪ್ರತಿನಿಧಿಗಳು ಮತ್ತು ರೈತರ ಸಮೂಹಗಳಿಗೆ ಸಿರಿಧಾನ್ಯಗಳ ಸುಧಾರಿತ ಕೃಷಿ ಬಗ್ಗೆ ತಿಳಿಸಲು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ತಜ್ಞ ವೈದ್ಯರು, ಪ್ರಗತಿಪರ ರೈತರು ಹಾಗೂ ವಿದೇಶಿ ಪ್ರತಿನಿಧಿಗಳು ಸಿರಿಧಾನ್ಯಗಳ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ. ಉತ್ಪಾದನಾ ತಾಂತ್ರಿಕತೆಯಿಂದ ಫಸಲಿನ ಮೌಲ್ಯವರ್ಧನೆ ಮಾಡಿ ಉದ್ಯಮಶೀಲರಾದವರು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಛತ್ತೀಸಗಡ, ಒಡಿಶಾ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್‌, ಮಣಿಪುರ, ಕೇರಳ ಮತ್ತು ತೆಲಂಗಾಣ ರಾಜ್ಯಗಳು ಹಾಗೂ ಚಿಲಿ, ಪೋಲೆಂಡ್‌, ಶ್ರೀಲಂಕಾ, ಯುಎಇ, ಜರ್ಮನಿ, ಸ್ವಿಟ್ಜರ್‌ಲೆಂಡ್‌ ದೇಶಗಳ ಪ್ರತಿನಿಧಿಗಳು ಬರುತ್ತಿದ್ದಾರೆ.

ಹಾಪ್‌ಕಾಮ್ಸ್‌–ಕೆಎಂಎಫ್‌ನಲ್ಲಿ ಸಿರಿಧಾನ್ಯ

‘ತೋಟಗಾರಿಕಾ ಇಲಾಖೆಯ ಹಾಪ್‌ಕಾಮ್ಸ್‌ ಮತ್ತು ಕೆಎಂಎಫ್‌ನ ಹಾಲಿನ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಸಿರಿಧಾನ್ಯಗಳ ಮಾರಾಟಕ್ಕೂ ರೂಪರೇಷೆ ರೂಪಿಸುತ್ತಿದ್ದೇವೆ’ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ್‌ ರೆಡ್ಡಿ ತಿಳಿಸಿದರು.

‘ಈ ಮಳಿಗೆಗಳಲ್ಲಿಏಪ್ರಿಲ್‌ನಿಂದ ಧಾನ್ಯಗಳು ಜನರಿಗೆ ಲಭ್ಯವಾಗುವಂತೆ ಮಾಡಲು ಯೋಜಿಸುತ್ತಿದ್ದೇವೆ. ಹಾಗೆಯೇ, ಸಿರಿಧಾನ್ಯಗಳಿಂದ ತಯಾರಾದ ಆಹಾರ ಪದಾರ್ಥವನ್ನುಪಾಲಿಕೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ವಾರಕ್ಕೊಮ್ಮೆ ಉಣಬಡಿಸಲು ಲೆಕ್ಕಾಚಾರ ಹಾಕುತ್ತಿದ್ದೇವೆ. ಶಾಲಾ ಬಿಸಿಯೂಟದಲ್ಲೂ ವಾರಕೊಮ್ಮೆ ಸಿರಿಧಾನ್ಯ ಪದಾರ್ಥವನ್ನು ಮಕ್ಕಳಿಗೆ ನೀಡಲು ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಸಚಿವರುಸಿರಿಧಾನ್ಯ ಮೇಳದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಧಾನ್ಯ ಬಳಕೆ ಉತ್ತೇಜನೆಗೆ ‘ಸಿರಿ’

‘ಸಿರಿಧಾನ್ಯಗಳ ಮಾರಾಟವನ್ನು ಉತ್ತೇಜಿಸಲು ‘ಸಿರಿ’ ಎಂಬ ಬ್ರ್ಯಾಂಡನ್ನು ಸರ್ಕಾರವೇ ರೂಪಿಸಲಿದೆ. ರಾಜ್ಯದಲ್ಲಿನ ನೋಂದಾಯಿತ ರೈತ ಒಕ್ಕೂಟಗಳು ಬ್ರ್ಯಾಂಡ್‌ ಹೆಸರಿನಲ್ಲಿ ಧಾನ್ಯಗಳ ಮೌಲ್ಯವರ್ಧನೆ ಮಾಡಿ, ಮಾರಾಟ ಮಾಡಲು ಸಹಕಾರ ನೀಡುತ್ತೇವೆ. ಧಾನ್ಯಗಳ ಉತ್ಪಾದನಾ ವೆಚ್ಚದಿಂದ ರೈತರಿಗೆ ನಷ್ಟ ಉಂಟಾದರೆ, ಸರ್ಕಾರವೇ ಕನಿಷ್ಠ ಬೆಂಬಲ ನೀಡಿ ಧಾನ್ಯಗಳನ್ನು ಖರೀದಿಸಲು ಅನುದಾನ ಮೀಸಲಿಡುತ್ತೇವೆ. ಪಡಿತರದಲ್ಲಿ 5 ಕೆ.ಜಿ. ಅಕ್ಕಿಯೊಂದಿಗೆ ಪ್ರಾದೇಶಿಕ ಬಳಕೆ ಆಧರಿಸಿ 2 ಕೆ.ಜಿ. ಸಿರಿಧಾನ್ಯ(ರಾಗಿ, ಜೋಳ, ನವಣೆ) ವಿತರಣೆ ಮಾಡಲು ಚಿಂತನೆ ನಡೆದಿದೆ’ ಎಂದು ಸಚಿವರು ಹೇಳಿದರು.

ಆಹಾರ ಉತ್ಪನ್ನಗಳ ತಯಾರಿಕಾ ಸ್ಪರ್ಧೆ

ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳ ತಯಾರಿಕೆಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈಗಾಗಲೇ ಸ್ಪರ್ಧಿಗಳನ್ನು ಅಂತಿಮಗೊಳಿಸಲಾಗಿದೆ. ಭಾಗವಹಿಸುವ ಏಳು ತಂಡಗಳಲ್ಲಿ ಮೊದಲ ಸ್ಥಾನ ಪಡೆದವರಿಗೆ ₹10,000, ಎರಡನೇ ಸ್ಥಾನಕ್ಕೆ ₹ 8,000 ಮತ್ತು ಮೂರನೇ ಸ್ಥಾನಕ್ಕೆ ₹ 6,000 ಬಹುಮಾನ ನಿಗದಿ ಪಡಿಸಲಾಗಿದೆ.

ಸಿರಿಧಾನ್ಯಗಳ ಲಾಭಗಳನ್ನು ತಿಳಿಸುವ ಅಂಶಗಳನ್ನು ಆಧರಿಸಿ ಆಕರ್ಷಕಚಿತ್ರಗಳನ್ನು ಬಿಡಿಸುವ ಮಕ್ಕಳಿಗೂ ನಗದು ಬಹುಮಾನಗಳನ್ನು ನಿಗದಿಪಡಿಸಲಾಗಿದೆ.

23 ಖಾನಾವಳಿಗಳು

ಮೇಳದಲ್ಲಿ ಸಿರಿಧಾನ್ಯದ ತರಹೇವಾರಿ ತಿನಿಸುಗಳ ಮಾರಾಟಕ್ಕೆ 23 ‘ಖಾನಾವಳಿ’ಗಳು ಇರಲಿವೆ. ಜೋಳ, ಸಜ್ಜೆ, ರಾಗಿ, ಹಾರಕ, ಊದಲು, ಬರಗು, ಸಾಮೆ, ಸಾವಕ್ಕಿಗಳಿಂದ ಸಿದ್ಧವಾದ ಖಾದ್ಯಗಳನ್ನು ಆಸ್ವಾದಿಸಬಹುದು.

ಅಂಕಿ–ಅಂಶ

* 400 ಮೇಳದಲ್ಲಿನ ಮಳಿಗೆಗಳು

* 100 ಭಾಗವಹಿಸುವ ರೈತ ಒಕ್ಕೂಟ ಮತ್ತು ಸಮೂಹಗಳು

* 29 ವಿಶೇಷ ಉಪನ್ಯಾಸಗಳು

ಮೇಳ ಆಯೋಜನೆ: ಕೃಷಿ ಇಲಾಖೆ

ಸ್ಥಳ: ತ್ರಿಪುರ ವಾಸಿನಿ, ಗೇಟ್‌ ನಂ.5 ಅರಮನೆ ಮೈದಾನ

ಸಮಯ: ಬೆಳಿಗ್ಗೆ 10ರಿಂದ ರಾತ್ರಿ 9

ಹೆಚ್ಚಿನ ಮಾಹಿತಿಗೆ: https://organics-millets.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT