ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆಯ ಪುಟ ತಿರುವಿದ ‘ಪದ್ಮ’ ಪುರಸ್ಕೃತರು

ಸಮಂಜಸ ತಂಡದಿಂದ ಗೌರವ ಸಮರ್ಪಣೆ- ಕಷ್ಟ ಜಯಿಸಿ ಯಶಸ್ಸು ಸಾಧಿಸಿದ ಬಗೆಗೆ ಮೆಚ್ಚುಗೆ
Published 17 ಫೆಬ್ರುವರಿ 2024, 14:47 IST
Last Updated 17 ಫೆಬ್ರುವರಿ 2024, 14:47 IST
ಅಕ್ಷರ ಗಾತ್ರ

ಬೆಂಗಳೂರು: ಬದುಕಿನುದ್ದಕ್ಕೂ ಎದುರಾದ ಸವಾಲುಗಳನ್ನು ಹಿಮ್ಮೆಟ್ಟಿ, ಕಷ್ಟಗಳನ್ನು ಜಯಿಸಿ ಯಶಸ್ಸು ಸಾಧಿಸಿದ ಪರಿಯನ್ನು ‘ಪದ್ಮ’ ಸಾಧಕರು ಎಳೆಎಳೆಯಾಗಿ ವಿವರಿಸುತ್ತಿದ್ದರೆ, ನೆರೆದಿದ್ದ ಪ್ರೇಕ್ಷಕರ ಮನಸ್ಸು ಮರುಗಿ ಕಣ್ಣಾಲಿಗಳು ತೇವವಾಗಿದ್ದವು. 

ಈ ದೃಶ್ಯ ಕಂಡುಬಂದಿದ್ದು ಸಮಂಜಸ ತಂಡ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತರ ಸಮ್ಮಿಲನ ಕಾರ್ಯಕ್ರಮದಲ್ಲಿ. 2024ನೇ ಸಾಲಿನ ‘ಪದ್ಮಶ್ರೀ ಪ್ರಶಸ್ತಿ’ಗೆ ಭಾಜನರಾದವರಲ್ಲಿ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ಕೃಷಿ ತಜ್ಞ ಸತ್ಯನಾರಾಯಣ ಬೆಳೇರಿ, ಪ್ಲಾಸ್ಟಿಕ್ ಸರ್ಜನ್ ಡಾ. ಪ್ರೇಮಾ ಧನರಾಜ್, ಅಂಗವಿಕಲತೆ ಮೆಟ್ಟಿ ಸಾಧನೆ ಮಾಡಿದ ಸಮಾಜ ಸೇವಕ ಕೆ.ಎಸ್. ರಾಜಣ್ಣ ಹಾಗೂ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸೋಮಣ್ಣ ಅವರು ಗೌರವ ಸ್ವೀಕರಿಸಿ, ಮನದಾಳದ ಮಾತನ್ನು ಹಂಚಿಕೊಂಡರು. 

‘ನನಗೆ ದೊಡ್ಡ ಗಾಯಕಿ ಆಗಬೇಕೆಂಬ ಕನಸಿತ್ತು. ಆದರೆ, ದೇವರ ಇಚ್ಛೆಯೇ ಬೇರೆಯಿತ್ತು. ಎಂಟನೇ ವಯಸ್ಸಿನಲ್ಲಿ ಸೀಮೆಎಣ್ಣೆ ಸ್ಟೌ ಸ್ಫೋಟದಿಂದ ದೇಹದ ಶೇ 50ರಷ್ಟು ಭಾಗ ಸುಟ್ಟು, ತುಟಿ ಎದೆಗೆ ಅಂಟಿ, ಕತ್ತು ಕೂಡ ಬಾಗಿತ್ತು. ಆ ವೇಳೆ 28 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ತಾಯಿಯ ಪ್ರೋತ್ಸಾಹದಿಂದ ನೋವನ್ನು ಮರೆತು, ವೈದ್ಯೆಯಾಗಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಯಿತು. ಪರಿಶ್ರಮ ಮತ್ತು ನಿರಂತರ ಪ್ರಯತ್ನ ಇದ್ದಲ್ಲಿ ಗುರಿ ತಲುಪಬಹುದು. ಆದರೆ, ವೈದ್ಯರಾಗಬೇಕೆಂಬ ಕನಸು ಹೊಂದುವ ಯುವಜನರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ ಎಂಬ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಡಾ. ಪ್ರೇಮಾ ಧನರಾಜ್ ಬೇಸರ ವ್ಯಕ್ತಪಡಿಸಿದರು. 

ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ನಾಲ್ಕು ದಶಕಗಳು ಶ್ರಮಿಸಿದ ಬಗೆ ಹಾಗೂ ಜೀತದಾಳಾಗಿದ್ದ ಅವಧಿಯಲ್ಲಿ ಎದುರಿಸಿದ ಕಷ್ಟಗಳನ್ನು ಸೋಮಣ್ಣ ಮೆಲುಕು ಹಾಕಿದರು. ‘ಬುಡಕಟ್ಟು ಜನರಿಗೆ ಅಗತ್ಯ ಸೌಲಭ್ಯ ಸಿಗಬೇಕು. ಅವರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ಒದಗಿಸಲು ಹೋರಾಟ ಮುಂದುವರಿಸುತ್ತೇನೆ. ಉದ್ಯೋಗ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಪ್ರತ್ಯೇಕ ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು. 

ಸತ್ಯನಾರಾಯಣ ಬೆಳೇರಿ ಅವರು 650 ಭತ್ತದ ತಳಿಗಳನ್ನು ಸಂಗ್ರಹಿಸಿ, ಅದನ್ನು ಬೆಳೆಯುತ್ತಿರುವ ಬಗೆಯನ್ನು ವಿವರಿಸಿದರು. 

ಕಾಡುತ್ತಿರುವ ಖಿನ್ನತೆ: ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ‘ವಿಜ್ಞಾನ ಬೆಳೆಯುತ್ತಿದ್ದರೂ ನಮ್ಮಲ್ಲಿನ ಅಜ್ಞಾನ ತೊಲಗುತ್ತಿಲ್ಲ. ಈಗಲೂ ಮಾನಸಿಕ ಕಾಯಿಲೆಗಳನ್ನು ಒಪ್ಪುವ ಮನಸ್ಥಿತಿಯಿಲ್ಲ. ಕೋವಿಡ್ ಬಳಿಕ ದೇಶದ ಒಟ್ಟು ಜನರಲ್ಲಿ ಶೇ 25 ರಷ್ಟು ಮಂದಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಖಿನ್ನತೆ ಹೆಚ್ಚಿನವರನ್ನು ಕಾಡುತ್ತಿದೆ. ದೈಹಿಕ ಸುಖ, ಹಣಕ್ಕಾಗಿ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸುವ ಬದಲು, ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗುವವರು ಇದ್ದಾರೆ. ಶೇ 70 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ನ ಗೀಳಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಶೇ 75 ರಷ್ಟು ಜನರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ದುಃಖದಿಂದ ಹೊರಬರಲು ಮದ್ಯಸೇವನೆಯಂತಹ ವ್ಯಸನಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದರು. 

ಸಮಂಜಸ ತಂಡದ ಕೆ.ಈ.ರಾಧಾಕೃಷ್ಣ, ‘ಸರ್ಕಾರಗಳು ಸೂಕ್ಷ್ಮತೆಗಳನ್ನು ಕಳೆದುಕೊಳ್ಳುತ್ತಿವೆ. ‘ಪದ್ಮ’ ಪ್ರಶಸ್ತಿಗಳು ಘೋಷಣೆಯಾದ ಬಳಿಕ ತೆಲಂಗಾಣ ಸರ್ಕಾರ ಅಲ್ಲಿನ ಪ್ರಶಸ್ತಿ ಪುರಸ್ಕೃತರಿಗೆ ₹ 25 ಲಕ್ಷ ನೀಡಿ, ಗೌರವಿಸಿತು. ಆ ಕೆಲಸವನ್ನು ಈವರೆಗೂ ಇಲ್ಲಿನ ಸರ್ಕಾರ ಮಾಡದಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

‘ವೈದ್ಯ ರೂಪದ ರಾಕ್ಷಸರು ಬೇಡ’
‘ಹಣದ ಹಿಂದೆ ಬಿದ್ದಿರುವ ಆಸ್ಪತ್ರೆಗಳು ಸಾಮಾನ್ಯ ಜ್ವರಕ್ಕೂ ಹತ್ತಾರು ಪರೀಕ್ಷೆಗಳನ್ನು ನಡೆಸಿ ₹ 10 ಸಾವಿರದಿಂದ ₹ 20 ಸಾವಿರ ದುಡ್ಡನ್ನು ಜನಸಾಮಾನ್ಯರಿಂದ ಕಿತ್ತುಕೊಳ್ಳುತ್ತಿವೆ. ₹ 10 ಪಡೆಯುವಲ್ಲಿ ₹ 100 ಸುಲಿಗೆ ನಡೆಯುತ್ತಿದೆ. ವೈದ್ಯರೂಪದ ರಾಕ್ಷಸರು ನಮಗೆ ಬೇಡ. ರಾಜ್ಯ ಕಾನೂನು ಆಯೋಗದ ಅಧ್ಯಕ್ಷನಾಗಿದ್ದಾಗ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ಹಣ ಮಾಡುವ ಸ್ಪರ್ಧೆಯಲ್ಲಿ ವೈದ್ಯರು ಶಿಕ್ಷಕರು ವಕೀಲರು ಸೇರಿ ವಿವಿಧ ವೃತ್ತಿಯಲ್ಲಿರುವವರು ನಿರತರಾಗಿದ್ದು ನೈತಿಕತೆ ಮರೆಯುತ್ತಿದ್ದಾರೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಬೇಸರ ವ್ಯಕ್ತಪಡಿಸಿದರು.  ಸಾಹಿತಿ ಹಂ.ಪ. ನಾಗರಾಜಯ್ಯ ‘ವಾಯುಮಾಲಿನ್ಯ ಜಲಮಾಲಿನ್ಯಕ್ಕಿಂತ ಭಾಷಾ ಮಾಲಿನ್ಯ ಇತ್ತೀಚೆಗೆ ಹೆಚ್ಚಾಗಿದೆ. ಭಾಷಾ ಪ್ರಯೋಗಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿರುವುದು ಶ್ಲಾಘನೀಯ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT