ಸೋಮವಾರ, ಅಕ್ಟೋಬರ್ 25, 2021
26 °C

ಕೊರೊನಾ ಸೋಂಕು: ವೈದ್ಯರಿಗೆ ಜೋಡಿ ಶ್ವಾಸಕೋಶ ಕಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿನಿಂದ ಶ್ವಾಸಕೋಶಕ್ಕೆ ಗಂಭೀರ ಹಾನಿಯಾಗಿ, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದ ನಗರದ ವೈದ್ಯರೊಬ್ಬರಿಗೆ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ಜೋಡಿ ಶ್ವಾಸಕೋಶ ಕಸಿ ನಡೆಸಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಟರ್‌ ಸಿಎಂಐ ಆಸ್ಪತ್ರೆಯ ಡಾ.ವಿ. ಅರುಣ್‌ ಮಾತನಾಡಿ, ‘ಖಾಸಗಿ ಆಸ್ಪತ್ರೆಯೊಂದಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ವರ್ಷದ ಅರಿವಳಿಕೆ ತಜ್ಞ ಡಾ. ಸನತ್ ಕುಮಾರ್‌ ಎಸ್‌.ಜಿ ಅವರು ಕೋವಿಡ್ ಪೀಡಿತರಿಗೆ ಸೇವೆ ನೀಡಿದ್ದರು. ಎರಡನೇ ಅಲೆಯಲ್ಲಿ ಕೂಡ ಐಸಿಯುಗೆ ದಾಖಲಾದ ಸೋಂಕಿತರಿಗೆ ಅವರು ಚಿಕಿತ್ಸೆ ನೀಡಿದ್ದಾರೆ. ರೋಗಿಗಳ ಸಂಪರ್ಕದಿಂದ ಕೋವಿಡ್ ಪೀಡಿತರಾದ ಅವರು, ಗಂಭೀರವಾಗಿ ಅಸ್ವಸ್ಥರಾದರು. ರಕ್ತದಲ್ಲಿನ ಆಮ್ಲಜನಕ ಪ್ರಮಾಣವು ಶೇ 60ಕ್ಕೆ ಇಳಿಕೆಯಾದ್ದರಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು’ ಎಂದು ತಿಳಿಸಿದರು.

‘ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದಾಗ ಶ್ವಾಸಕೋಶಕ್ಕೆ ಹಾನಿಯಾಗಿರುವುದು ದೃಢಪಟ್ಟಿತು. ಅವರು ಚೇತರಿಕೆ ಹೊಂದಲು ಶ್ವಾಸಕೋಶ ಕಸಿಯಿಂದ ಮಾತ್ರ ಸಾಧ್ಯ ಎಂದು ನಿರ್ಧರಿಸಿ, ಮೂರೂವರೆ ತಿಂಗಳು ಚಿಕಿತ್ಸೆ ನೀಡಿದ ಬಳಿಕ ಎರಡೂ ಶ್ವಾಸಕೋಶಗಳ ಕಸಿ ನಡೆಸಲಾಯಿತು’ ಎಂದು ಹೇಳಿದರು. 

ಕಿಮ್ಸ್ ಹಾರ್ಟ್‌ ಆ್ಯಂಡ್ ಲಂಗ್‌ ಇನ್‌ಸ್ಟಿಟ್ಯೂಟ್‌ನ ಡಾ. ಸಂದೀಪ್ ಅತ್ತಾವರ್, ‘ಕೋವಿಡ್ ಪೀಡಿತರಾದವರಲ್ಲಿ ಶೇ 40ರಷ್ಟು ಮಂದಿಯ ಶ್ವಾಸಕೋಶಕ್ಕೆ ಹಾನಿಯಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಿದರೂ ಕೆಲವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೋಡಿ ಶ್ವಾಸಕೋಶ ಕಸಿ ಸಂಕೀರ್ಣ ಪ್ರಕ್ರಿಯೆಯಾಗಿದೆ. 4 ವಾರಗಳ ಬಳಿಕ ಹೊಂದಾಣಿಕೆಯಾಗುವ ಶ್ವಾಸಕೋಶ ದೊರೆತಿದ್ದರಿಂದ ಸನತ್ ಕುಮಾರ್ ಅವರಿಗೆ ಕಸಿ ನಡೆಸಿ, ಉಳಿಸಿಕೊಳ್ಳಲು ಸಾಧ್ಯವಾಯಿತು. ಈಗ ಅವರು ಮನೆಗೆ ತೆರಳಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ’ ಎಂದು ತಿಳಿಸಿದರು. 

ಡಾ. ಸನತ್ ಕುಮಾರ್‌, ‘ಔಷಧದಿಂದಲೇ ಕೋವಿಡ್ ವಾಸಿಯಾಗುತ್ತದೆ ಅಂದುಕೊಂಡಿದ್ದೆ. ಆದರೆ, ಶ್ವಾಸಕೋಶದ ಕಸಿಗೆ ಒಳಪಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಐಸಿಯು ದಾಖಲಾದ ಬಳಿಕ ಏನಾಯಿತು ಎನ್ನುವುದು ತಿಳಿಯಲಿಲ್ಲ’ ಎಂದು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು