ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಎಲ್ಲ ಭಾಷೆಗಳಿಗೆ ‘ಪರ್ವ’ ಅನುವಾದ

ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಗೆ 40 ವರ್ಷಗಳ ಸಂಭ್ರಮ
Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಪಂಚದ ಎಲ್ಲ ಭಾಷೆಗಳಿಗೆ ‘ಪರ್ವ’ ಕಾದಂಬರಿಯನ್ನು ಅನುವಾದ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾಹಿತಿ ನೀಡಿದರು.

‘ಪರ್ವ’ ಕಾದಂಬರಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಪರ್ವ ರಾಷ್ಟ್ರೀಯ ವಿಚಾರಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾಭಾರತದ ಬಗ್ಗೆ ಪಂಪ ಜೈನರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃತಿ ಬರೆದರೇ, ಕುಮಾರವ್ಯಾಸ ಭಕ್ತಿಯನ್ನು ಪ್ರಧಾನವಾಗಿಟ್ಟುಕೊಂಡು ಗ್ರಂಥ ರಚಿಸಿದ. ಭೈರಪ್ಪ ಅವರು ಆಧುನಿಕ ದೃಷ್ಟಿಕೋನದಲ್ಲಿ ಮಹಾಭಾರತವನ್ನು ಓದುಗರಿಗೆ ಕಟ್ಟಿಕೊಟ್ಟರು.ಮಹಾಭಾರತದ ಘಟನೆಗಳನ್ನು ‌‘ಕುಮಾರವ್ಯಾಸ ಭಾರತ’ಕ್ಕಿಂತ ಹೆಚ್ಚು ಆಕರ್ಷಕವಾಗಿ ‘ಪರ್ವ’ದಲ್ಲಿ ವಿವರಿಸಲಾಗಿದೆ.ಸೈನ್ಯದಲ್ಲಿದ್ದವರೂ ಮಹಾಭಾರತ ಯುದ್ಧವನ್ನು ಇಷ್ಟು ಸೊಗಸಾಗಿ ವಿವರಿಸಲು ಸಾಧ್ಯವಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮ ಕಾಲದ ಕಲ್ಪನೆ ಅಖಂಡವಾಗಿತ್ತು. ಮೆಕಾಲೆ ಇಂಗ್ಲಿಷ್ ಶಿಕ್ಷಣವನ್ನು ಪ್ರಾರಂಭಿಸಿದ ಬಳಿಕ ಇತಿಹಾಸದ ಬಗ್ಗೆ ಹೊಸ ಕಲ್ಪನೆ ಪ್ರಾರಂಭವಾಯಿತು. ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್ ಕಾಲ ಎಂದು ವಿಂಗಡಿಸಲಾಯಿತು. ಇದರಿಂದ ನಮ್ಮ ಪರಂಪರೆ ಮರೆಯಾಗಿ, ನವ್ಯ ಕಾವ್ಯ ಸೃಷ್ಟಿಯಾಯಿತು. ಅಂತಹ ಸಂದರ್ಭದಲ್ಲಿ ಕುವೆಂಪು, ಭೈರಪ್ಪ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಗದ್ಯ ಪ್ರಕಾರದಲ್ಲಿ ಅತ್ಯುತ್ತಮವಾದ ಕೃತಿ ರಚಿಸಿದರು. ಇದರಿಂದಾಗಿ ನಾವು ಕಳೆದುಕೊಂಡಿದ್ದ ಭೂತಕಾಲವನ್ನು ಮತ್ತೆ ಪಡೆದಂತಾಯಿತು’ ಎಂದರು.

ಅಂತರಂಗದ ಮಹಾಭಾರತ: ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಡಾ.ಮಾಧವ್ ಕೌಶಿಕ್ ‘ವ್ಯಾಸ ರಚಿತ ಮಹಾಭಾರತವನ್ನು ಆಧರಿಸಿ ದೇಶದಲ್ಲಿ ಸಾಕಷ್ಟು ಕೃತಿಗಳು ಬಂದಿವೆ. ಆದರೆ, ಅವುಗಳಿಗಿಂತ ‘ಪರ್ವ’ ಭಿನ್ನವಾಗಿ ಕಾಣಿಸುವ ಜತೆಗೆ ಆಪ್ತ ಎನಿಸುತ್ತದೆ. ಮಹಾಭಾರತದಲ್ಲಿ ಬರುವ ಪ್ರತಿ ಪಾತ್ರದ ಅಂತರಾಳದ ತಳಮಳ ಅರಿತು, ಬರೆದಿರುವುದೇ ಇದಕ್ಕೆ ಪ್ರಮುಖ ಕಾರಣ’ ಎಂದು ತಿಳಿಸಿದರು.

‘ಕುಂತಿ, ದ್ರೌಪದಿ, ಮಾದ್ರಿ ಸೇರಿದಂತೆ ಮಹಾಭಾರತದಲ್ಲಿ ಬರುವ ವಿವಿಧ ಮಹಿಳಾ ಪಾತ್ರಧಾರಿಗಳು ಎದುರಿಸಿದ ಸಂಕಷ್ಟಗಳು ಹಾಗೂ ನೋವುಗಳನ್ನೂ ಎಳೆ ಎಳೆಯಾಗಿ ವಿವರಿಸಲಾಗಿದೆ. ಭೈರಪ್ಪ ಅವರು ಭಾರತೀಯ ದೃಷ್ಟಿಯಲ್ಲಿ ಮಹಾಭಾರತವನ್ನು ಗ್ರಹಿಸಿದರು’ ಎಂದರು.

‘ಅಂತರಂಗದ ಭಾವನೆ ಅನಾವರಣ’
‘ಮೂಲ ಮಹಾಭಾರತದಲ್ಲಿ ವಿವಿಧ ಘಟನೆಗಳು ಸಂಭವಿಸಿದಾಗ ಅಲ್ಲಿನ ಪಾತ್ರಧಾರಿಗಳ ಮನಸ್ಥಿತಿ ಹಾಗೂ ಅಂತರಾಳದ ಭಾವನೆಗಳನ್ನು ಹೇಳುವ ಕೆಲಸ ಆಗಿರಲಿಲ್ಲ. ‘ಪರ್ವ’ದಲ್ಲಿ ಈ ಪ್ರಯತ್ನವನ್ನು ಮಾಡಿದೆ. ಇದರಿಂದಾಗಿ ರಸಾನುಭವ ಸೃಷ್ಟಿಯಾಯಿತು. ನಾನು ಸಾಹಿತ್ಯ ಬರೆಯುವುದು ರಸಾನುಭವಕ್ಕೆ ಮಾತ್ರ’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಮನದಾಳ ಹಂಚಿಕೊಂಡರು.

‘ಮೂಲ ಕೃತಿಯಲ್ಲಿ ಧರ್ಮರಾಜ ಎಂದೂ ತಪ್ಪು ಮಾಡಿಲ್ಲ ಎಂಬಂತೆ ಬಿಂಬಿಸಲಾಗಿದೆ. ಆದರೆ, ವಾಸ್ತವದಲ್ಲಿ ಆತನ ತಪ್ಪು ನಿರ್ಧಾರಗಳಿಂದಲೇ ಪಾಂಡವರು ಸಂಕಷ್ಟಕ್ಕೆ ಸಿಲುಕಿದರು. ದ್ರೌಪದಿಯ ವಸ್ತ್ರಾಪಹರಣದಂತಹ ಅವಮಾನಕರ ಘಟನೆಗಳೂ ನಡೆದವು. ಇಷ್ಟಾಗಿಯೂ ವ್ಯಾಸರು ಧರ್ಮರಾಯನ ನಡೆಗಳನ್ನು ಎಲ್ಲಿಯೂಖಂಡಿಸಿ ಬರೆದಿಲ್ಲ.ಯಮನ ಅನುಗ್ರಹದಿಂದ ಜನಿಸಿದವನು ಧರ್ಮರಾಯ ಎಂಬುದೇ ಇದಕ್ಕೆ ಕಾರಣವಿರಬಹುದು’ ಎಂದರು.

‘ಕಾದಂಬರಿ ಬರೆಯುವಾಗ ವಾಸ್ತವಿಕತೆಯನ್ನು ಅಳವಡಿಸಿಕೊಳ್ಳಬೇಕು. ಊರುಗಳ ನಡುವಿನ ಅಂತರ, ಅಲ್ಲಿಗೆ ತೆರಳಲು ತಗಲುವ ಸಮಯ ಎಲ್ಲವೂ ನಿಖರವಾಗಿರಬೇಕು. ಆದ್ದರಿಂದ ಸಾಕಷ್ಟು ತಯಾರಿ ಹಾಗೂ ಅಧ್ಯಯನ ಅತ್ಯವಶ್ಯಕ. ಕಾದಂಬರಿಯ ರಚನೆಯಲ್ಲಿ ಶೇ.20ರಷ್ಟುವ್ಯಾಸ ರಚಿತ ಮಹಾಭಾರತದ್ದಾಗಿದೆ. ಉಳಿದವನ್ನು ನಾನೇ ಸೃಷ್ಟಿ ಮಾಡಿದೆ. ಮೂಲ ಮಹಾಭಾರತದ ಘಟನೆ ಪುನರಾವರ್ತನೆ ಆಗಬಾರದು ಎಂಬ ಕಾರಣಕ್ಕೆ ಕೆಲ ಘಟನೆಗಳನ್ನು ಕೈಬಿಟ್ಟಿರುವೆ’ ಎಂದು ತಿಳಿಸಿದರು.

40 ವರ್ಷದ ಹಿಂದಿನ ಘಟನೆ ಮೆಲುಕು
ಎಸ್‌.ಎಲ್.ಭೈರಪ್ಪ ಅವರು ‘ಪರ್ವ’ ಕಾದಂಬರಿಯ ಯಶಸ್ಸಿಗೆ ಕಾರಣವಾದ 40 ವರ್ಷದ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡರು.

‘ಪರ್ವ ಕಾಂದಬರಿ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಆಗ ಮಹಿಳೆಯೊಬ್ಬಳು ಈ ಕಾದಂಬರಿಯನ್ನಿಟ್ಟುಕೊಂಡು ವಿಚಾರಸಂಕಿರಣ ಆಯೋಜಿಸಿ, ದೇಶದ ವಿವಿಧೆಡೆಯಿಂದ ಭಾಷಣಕಾರರನ್ನು ಕರೆಸಿದರು. ಈ ಕಾರ್ಯಕ್ರಮದ ವಿವರ ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾದ ಬಳಿಕ ಕಾದಂಬರಿ ಮಾರಾಟ ಹೆಚ್ಚಾಯಿತು. ಅಮೆರಿಕದಿಂದ ಮರಳಿದ ಬಳಿಕ ಈ ರೀತಿ ಕಾರ್ಯಕ್ರಮ ಏರ್ಪಡಿಸಿರುವ ಬಗ್ಗೆ ತಿಳಿದುಕೊಂಡೆ. ಕೃತಿ ಇಷ್ಟೊಂದು ಜನಪ್ರಿಯವಾಗಲೂ ಅವರು ಕೂಡ ಕಾರಣ’ ಎಂದು ತಿಳಿಸಿ, ಲೇಖಕಿ ಡಾ.ವಿಜಯಮ್ಮ ಅವರನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿದರು. ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದಂತೆವಿಜಯಮ್ಮ ಅವರ ಕಣ್ಣುಗಳಲ್ಲಿ ಆನಂದ ಭಾಷ್ಪ ಹರಿಯಿತು.

ಕಾರ್ಯಕ್ರಮಕ್ಕೂ ಮುನ್ನ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ದೈವಾಧೀನರಾದ ಹಿನ್ನೆಲೆಯಲ್ಲಿ ಎರಡು ನಿಮಿಷಗಳು ಮೌನ ಆಚರಿಸಲಾಯಿತು.ಕಾರ್ಯಕ್ರಮದ ನಡುವೆ ಹಿರಿಯರೊಬ್ಬರು ಕುಸಿದುಬಿದ್ದರು. ಅವರಿಗೆ ಸ್ಥಳದಲ್ಲಿದ್ದ ಕೆಲ ವೈದ್ಯರು ತುರ್ತು ಚಿಕಿತ್ಸೆ ನೀಡಿ, ‌ಆಸ್ಪತ್ರೆಗೆ ಕಳುಹಿಸಿಕೊಟ್ಟರು.

***
‘ಪರ್ವ’ ಕಾದಂಬರಿ ಒಂದು ಹೊಸ ನಾಗರೀಕತೆಯನ್ನು ಪ್ರಸ್ತುತಪಡಿಸುವುದರ ಜತೆಗೆ ಮಹಿಳೆಯರ ಧ್ವನಿಯೂ ಆಗಿದೆ. ಇಂತಹ ಕೃತಿಗಳು ಭಾಷೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ.
–ಡಾ.ಮಕರಂದ ಆರ್.ಪರಾಂಜಪೆ, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್‌ಡ್ ಸ್ಟಡಿ ನಿರ್ದೇಶಕ

ಕಾದಂಬರಿಯಲ್ಲಿರುವ ಸಾಹಿತ್ಯಿಕ ಸೌಂದರ್ಯವನ್ನು ಮರೆಯಬಾರದು. ಭೈರಪ್ಪ ಅವರು ಪಾತ್ರಗಳ ಒಳಹೊಕ್ಕು, ಅಧ್ಯಾತ್ಮದ ದೃಷ್ಟಿಯಲ್ಲಿ ಮನುಷ್ಯನ ಒಳನೋಟಗಳನ್ನು ಅಡಕ ಮಾಡಿದ್ದಾರೆ.
–ಶತಾವಧಾನಿ ಡಾ.ಆರ್.ಗಣೇಶ್, ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT