ಶನಿವಾರ, ಜೂನ್ 25, 2022
26 °C

ಲಾಕ್‌ಡೌನ್‌ ಪರಿಣಾಮ: ಪಿಜಿ ಕಟ್ಟಡಗಳು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ನಗರದ ಪೇಯಿಂಗ್ ಗೆಸ್ಟ್‌ (ಪಿಜಿ) ವಸತಿ ಕಟ್ಟಡಗಳು ಸ್ಥಗಿತಗೊಂಡಿವೆ. ಕೋವಿಡ್‌ ಕಾರಣದಿಂದ ಖಾಸಗಿ ಕಂಪನಿಗಳು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ರಾಜಧಾನಿಯನ್ನು ತೊರೆದು ಸ್ವಂತ ಊರಿಗೆ ಹೋಗಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳು ಕೂಡ ಅವರ ಮನೆಯಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದು, ಅವರೂ ಪಿಜಿಗಳನ್ನು ತೊರೆದಿದ್ದಾರೆ.

‘ನಗರದಲ್ಲಿ ಸುಮಾರು 12 ಸಾವಿರ ಪಿಜಿ ಕಟ್ಟಡಗಳು ಇದ್ದವು. ಲಾಕ್‌ಡೌನ್‌ ಪರಿಣಾಮವನ್ನು ತಡೆದುಕೊಳ್ಳಲು 4 ಸಾವಿರ ಪಿಜಿಗಳಿಂದ ಮಾತ್ರ ಸಾಧ್ಯವಾಗಿದೆ. ಸುಮಾರು ಎಂಟು ಸಾವಿರ ಪಿಜಿ ಕಟ್ಟಡಗಳು ಶಾಶ್ವತವಾಗಿ ಸ್ಥಗಿತಗೊಂಡಿವೆ. ಇನ್ನೂ ಹಲವು ಮುಚ್ಚುವ ಸ್ಥಿತಿಯಲ್ಲಿವೆ’ ಎಂದು ಪಿಜಿ ಕಟ್ಟಡಗಳ ಮಾಲೀಕರ ಸಂಘ ಹೇಳಿದೆ.

‘ಪಿಜಿ ಕಟ್ಟಡಗಳನ್ನು ಮುಚ್ಚಬೇಕಾದ ಅನಿವಾರ್ಯತೆಯಿದ್ದು, ಕನಿಷ್ಠ 30 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಸಂಘದ ಅಧ್ಯಕ್ಷ ಅಶೋಕ್‌ರಾಜ್‌ ಪಣಂಬೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಜಿ ಕಟ್ಟಡಗಳಲ್ಲಿ ಗ್ರಾಹಕರು ಇಲ್ಲದಿದ್ದರೂ ಖರ್ಚು–ವೆಚ್ಚ ಅಷ್ಟೇ ಬರುತ್ತಿತ್ತು. ಕಟ್ಟಡದ ಬಾಡಿಗೆ, ನಿರ್ವಹಣಾ ವೆಚ್ಚ ಭರಿಸಲು ಸಾಧ್ಯವಾಗದೆ ಅನೇಕರು ಕಟ್ಟಡಗಳನ್ನು ಮುಚ್ಚುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಸರ್ಕಾರದ ಆದೇಶದ ಪ್ರಕಾರವೇ ನಾವು ವ್ಯಾಪಾರ ಪರವಾನಗಿ ಪಡೆದು ಕಟ್ಟಡಗಳನ್ನು ನಡೆಸುತ್ತಿದ್ದೆವು. ಪರಿಣಾಮ, ಕೈಗಾರಿಕೆಗಳು ಅಥವಾ ವಾಣಿಜ್ಯ ಉದ್ದೇಶದ ಸಂಸ್ಥೆಗಳು ನೀಡುವಷ್ಟೇ ವಿದ್ಯುತ್‌ ಮತ್ತು ನೀರಿನ ಶುಲ್ಕವನ್ನು ನಾವೂ ನೀಡಬೇಕಾಗಿದೆ. ಆದರೆ, ಜನರಿಲ್ಲದೆ ಈಗ ಪಿಜಿ ನಡೆಸಲು ಆಗುತ್ತಿಲ್ಲ. ಬ್ಯಾಂಕ್‌ಗಳು ಕೂಡ ನಮಗೆ ಸಾಲ ನೀಡಲು ನಿರಾಕರಿಸುತ್ತವೆ’ ಎಂದು ಪಿಜಿ ಕಟ್ಟಡವೊಂದರ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು