ಶುಕ್ರವಾರ, ಮಾರ್ಚ್ 5, 2021
30 °C
ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ದೂರು

ಪೈಪ್‌ಲೈನ್ ಜಾಗ ಒತ್ತುವರಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಹುರುಳಿಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಲಮಂಡಳಿ ಪೈಪ್‌ಲೈನ್ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

1896ರಲ್ಲಿ ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಇಟ್ಟಿಗೆಯಿಂದ ನಿರ್ಮಿಸಿದ ಕೊಳವೆ ಪೈಪ್‍ಗಳನ್ನು ಅಳವಡಿಸಲಾಗಿತ್ತು. ಆಗ ನಿರ್ಮಿಸಿದ ಪೈಪ್ ಲೈನ್ ಈಗಲೂ ಸುಸ್ಥಿತಿಯಲ್ಲಿದೆ. ದಾಸರಹಳ್ಳಿ ಗ್ರಾಮಕ್ಕೆ ಕಳೆದ ಐದಾರು ವರ್ಷಗಳಿಂದ ಇದೇ ಪೈಪ್ ಲೈನ್‍ನ ಮೂಲಕ ನೀರು ಪೂರೈಸಲಾಗುತ್ತಿತ್ತು.

ಈ ಪೈಪ್ ಲೈನ್ ನೀರಿನ ಕೊಳವೆ ಹಾದು ಹೋದ ಮಧ್ಯ ಭಾಗದಿಂದ 6 ಅಡಿ ಬಲ ಮತ್ತು ಎಡಭಾಗದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸಬಾರದು ಎನ್ನುವ ನಿಯಮ ಇದೆ. ಆದರೆ, ಭೂಮಾಲೀಕರು ಪೈಪ್ ಇರುವ ಜಾಗದ ಮೇಲೆಯೇ ಗೋಡೆ ನಿರ್ಮಿಸುತ್ತಿದ್ದಾರೆ. ಇದರಿಂದ ಪೈಪ್‌ಲೈನ್‌ಗೆ ಹಾನಿಯಾಗುವ ಸಂಭವ ಇದೆ. ಆದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಚಿಕ್ಕಬಾಣಾವರದ ನಿವಾಸಿ ಸಂತೋಷ್ ದೂರಿದರು.

ಜಲಮಂಡಳಿಯ ಹೆಸರಘಟ್ಟ ವಿಭಾಗದ ಸಹಾಯಕ ಎಂಜಿನಿಯರ್ ಕೃಷ್ಣಗೌಡ ಪ್ರತಿಕ್ರಿಯಿಸಿ, ‘ಜಾಗ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು