ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷೆ ಸ್ವಯಂ ದೃಢೀಕರಣ ವ್ಯವಸ್ಥೆ ಶೀಘ್ರ ಜಾರಿ: ಡಿ.ಕೆ. ಶಿವಕುಮಾರ್

Published 19 ಜನವರಿ 2024, 15:32 IST
Last Updated 19 ಜನವರಿ 2024, 15:32 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ‘ನಕ್ಷೆ ಸ್ವಯಂ ದೃಢೀಕರಣ’ ವ್ಯವಸ್ಥೆಯನ್ನು ಶೀಘ್ರ ಜಾರಿಗೆ ತರಲಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಪ್ರಮಾಣೀಕೃತ ವಾಸ್ತುಶಿಲ್ಪಿಗಳಿಂದ ಕಟ್ಟಡ ನಿರ್ಮಾಣ ನಕ್ಷೆಯ ಸ್ವಯಂ ದೃಢೀಕರಣ ವ್ಯವಸ್ಥೆ ಕಲ್ಪಿಸಲು ಯೋಜನೆ ಸಿದ್ಧವಾಗಿದೆ’ ಎಂದು ಹೇಳಿದರು.

ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಕೇಂದ್ರದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಟೀರಿಯರ್ ಡಿಸೈನ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಡಿಸೈನೂರು’ ಹಬ್ಬದಲ್ಲಿ ಅವರು ಮಾತನಾಡಿದರು.

‘ಪ್ರಮಾಣೀಕೃತ ಲೆಕ್ಕಪರಿಶೋಧಕರು ಇರುವಂತೆ, ಪ್ರಮಾಣೀಕೃತ ಕಟ್ಟಡ ವಾಸ್ತುಶಿಲ್ಪಿಗಳನ್ನು ಗುರುತಿಸಲಾಗುವುದು. ಅವರಿಗೆ ಕಟ್ಟಡಗಳ ನಕ್ಷೆಯನ್ನು ಸ್ವಯಂ ದೃಢೀಕರಿಸುವ ಅವಕಾಶ ನೀಡಲಾಗುವುದು. ಇದರಿಂದ ನಕ್ಷೆ ಮಂಜೂರಿಗೆ ಬಿಬಿಎಂಪಿಗೆ ಹೋಗುವ ಅಗತ್ಯ ಇರುವುದಿಲ್ಲ. ಅಧಿಕಾರಿಗಳ ಕಿರುಕುಳ ಸೇರಿದಂತೆ ಕೆಲಸ ವಿಳಂಬವಾಗುವುದೂ ತಪ್ಪುತ್ತದೆ’ ಎಂದರು.

‘ಎಷ್ಟು ಅಳತೆಯ ನಿವೇಶನಗಳ ಕಟ್ಟಡಗಳಿಗೆ ನಕ್ಷೆ ಸ್ವಯಂ ದೃಢೀಕರಣ ವ್ಯವಸ್ಥೆ ಅನ್ವಯವಾಗಲಿದೆ ಎಂಬುದನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಕಾನೂನಿನ ಅರಿವಿರುವ ಕಟ್ಟಡ ವಾಸ್ತುಶಿಲ್ಪಿಗಳು ಸರ್ಕಾರದ ನಿರ್ಣಯಕ್ಕೆ ಪೂರಕವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ನಿರ್ಮಾಣ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ. ಈ ಕ್ಷೇತ್ರಕ್ಕೆ ಸೃಜನಶೀಲ ಮತ್ತು ಹೊಸ ಆಲೋಚನೆಗಳ ಅಗತ್ಯವಿದೆ. ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಪ್ರತಿ ದಿನವೂ ಈ ಕ್ಷೇತ್ರದಲ್ಲಿ ಸವಾಲುಗಳು ಎದುರಾಗುತ್ತವೆ. ಮುಂದಿನ ದಿನಗಳಲ್ಲಿ ಕಟ್ಟಡ ವಿನ್ಯಾಸಕಾರರಿಗೆ ಹೆಚ್ಚು, ಹೆಚ್ಚು ಕೆಲಸ ದೊರೆಯುವಂತಾಗಲಿ. ನಿಮ್ಮ ಕೆಲಸದ ವಿಚಾರದಲ್ಲಿ ಯಾವುದಾದರೂ ತೊಂದರೆ ಉಂಟಾದರೆ ನನ್ನನ್ನು ನೇರವಾಗಿ ಭೇಟಿಯಾಗಿ ಸಮಸ್ಯೆ ತಿಳಿಸಬಹುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT