ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ಯ ಮಾತನಾಡಿದರೆ ಬೆದರಿಕೆ ಸಾಮಾನ್ಯ’

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಂ.ಚಿದಾನಂದಮೂರ್ತಿ
Last Updated 10 ಮೇ 2018, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ನಿರ್ಭಯ, ಸತ್ಯ, ನ್ಯಾಯನಿಷ್ಠುರನಾಗಿ ಮಾತನಾಡಿದ್ದಕ್ಕೆ, ಬೆದರಿಕೆ ಕರೆಗಳು ಬಂದಿವೆ’ ಎಂದು ಸಂಶೋಧಕ ಎಂ.ಚಿದಾನಂದಮೂರ್ತಿ ಹೇಳಿದರು.

ಕರ್ನಾಟಕ ವಿಕಾಸ ರಂಗ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಾನು ನನ್ನ ಬದುಕು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಕುರಿತು ಅವರು ಮಾತನಾಡಿದರು.

‘ಸಂಶೋಧನೆಯಲ್ಲಷ್ಟೇ ತೊಡಗಿಕೊಳ್ಳದೆ, ಸಮಾಕಾಲೀನ ವಿಷಯಗಳಿಗೂ ಸ್ಪಂದಿಸಿದ್ದೇನೆ. ಟಿಪ್ಪು, ಹಿಂದೂ, ವೀರಶೈವ.. ಹೀಗೆ ಎಲ್ಲಾ ಚರ್ಚೆಗಳಲ್ಲೂ ಭಾಗಿಯಾಗಿದ್ದೇನೆ. ಸರಿ–ತಪ್ಪುಗಳನ್ನು ತಿಳಿಸಿದ್ದೇನೆ’ ಎಂದು ಹೇಳಿದರು.

‘ಕುವೆಂಪು ಶಿಷ್ಯನಾಗಿದ್ದಾಗ ನಾನೂ ಕವಿ, ನಾಟಕಕಾರ, ಕಾದಂಬರಿಕಾರ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ನಮ್ಮ ಮಿತಿಗಳನ್ನು ನಾವು ಒಪ್ಪಿಕೊಳ್ಳಬೇಕಲ್ಲವೇ. ಸಂಶೋಧನೆಯಲ್ಲಿ ಒಲವು ಹೆಚ್ಚಿದ್ದರಿಂದ ಅದರಲ್ಲಿಯೇ ಮುಂದುವರಿದೆ’ ಎಂದು ವಿವರಿಸಿದರು.

‘ಪಂಪನ ವಂಶಸ್ಥರನ್ನು ಪತ್ತೆ ಹಚ್ಚಿದ್ದು, ನೇಪಾಳದಲ್ಲಿನ ಕೆಲವು ಆಚರಣೆಗಳಲ್ಲಿ ಕರ್ನಾಟಕದ ಸಂಸ್ಕೃತಿಯ ಪ್ರಭಾವವಿದೆ ಎನ್ನುವುದು ಹಾಗೂ ಕಾವೇರಿಯಿಂದ ಗೋದಾವರಿಯವರೆಗೆ ‘ಕರ್ಣಾಟಕ’ ಹಬ್ಬಿತ್ತು ಎನ್ನುವುದನ್ನು ಕವಿರಾಜ ಮಾರ್ಗದಲ್ಲಿ ಉಲ್ಲೇಖಿಸಲಾಗಿದ್ದು, ಅದು ನಿಜವೆಂದು ಸಾಬೀತು ಮಾಡಲು ಭಾಷಾ ಪುರಾವೆಗಳಿವೆ... ಹೀಗೆ ಹೊಸ ವಿಷಯಗಳನ್ನು ಪ್ರಪಂಚಕ್ಕೆ ಗೋಚರಿಸುವ ಕೆಲಸ ಮಾಡಿದ್ದೇನೆ ಎನ್ನುವ ಸಂತೃಪ್ತಿ ಇದೆ’ ಎಂದರು.

‘ಸಂಘಟನೆಗಳನ್ನು ಕಟ್ಟಿಕೊಂಡು ಕನ್ನಡ ಉಳಿವಿಗಾಗಿ ಹೋರಾಟ ಮಾಡಿದ್ದೇವೆ. ಆದರೆ, ಈಗಿನ ಕನ್ನಡ ಸಂಘಗಳು ಪ್ರದರ್ಶನಕ್ಕೆ ಸೀಮಿತವಾಗಿವೆ. ಅಲ್ಲದೆ, ಕನ್ನಡದ ಹೆಸರಿನಲ್ಲಿ ಹಣ ಕೀಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT