ಬುಧವಾರ, ನವೆಂಬರ್ 20, 2019
20 °C
ಹರಿದಾಡಿದ ಹಳೆ ವಿಡಿಯೊ l ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ‌ l ವರದಿ ಸಲ್ಲಿಸಲು ಸೂಚಿಸಿದ್ದೇನೆ–ಡಿಸಿಪಿ

ಆರೋಪಿಗೆ ಸಬ್ಇನ್‌ಸ್ಪೆಕ್ಟರ್‌ ಹಿಗ್ಗಾಮುಗ್ಗಾ ಥಳಿ‌ತ

Published:
Updated:
Prajavani

ಬೆಂಗಳೂರು: ಆರೋಪಿಯೊಬ್ಬನಿಗೆ ಸುಬ್ರಹ್ಮಣ್ಯ ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶ್ರೀಕಂಠೇಗೌಡ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

‘‌ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯಶವಂತ ಎಂಬ ವ್ಯಕ್ತಿಗೆ ಶ್ರೀಕಂಠೇಗೌಡ ಥಳಿಸಿದ್ದಾರೆ. ಆತ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ‌ ಎ.ಸಿ. ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿನ ಪಾರ್ಕಿಂಗ್‌ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

‘ಮೇ 12ರಂದು ಯುವತಿ ನೀಡಿದ್ದ ದೂರಿನ ಆಧಾರದಲ್ಲಿ ಯಶವಂತನನ್ನು ಅಂದೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಂದಿನ ವಿಡಿಯೊ ದೃಶ್ಯ ಈಗ ಹರಿದಾಡಿದೆ. ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ’ ಎಂದೂ ಅವರು ಹೇಳಿದರು.

‘ಯಶವಂತ ಹಲವು ಯುವತಿ
ಯರಿಗೆ ಕಿರುಕುಳ ನೀಡಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಆದರೆ, ಒಬ್ಬಳು ಮಾತ್ರ ಆತನ ವಿರುದ್ಧ ದೂರು ನೀಡುವ ಧೈರ್ಯ ಮಾಡಿದ್ದಳು. ಆಕೆಯನ್ನು ಅವನು ಬಲವಂತವಾಗಿ ಕರೆದೊಯ್ದು ಕಿರುಕುಳ ನೀಡಿದ್ದ. ಸಹಕರಿಸದಿದ್ದರೆ ಆ್ಯಸಿಡ್‌ ಹಾಕುತ್ತೇನೆ. ಜೈಲಿನಿಂದ ಹೊರಗೆ ಬಂದ ಬಳಿಕ ಸಾಯಿಸಿ ಬಿಡುತ್ತೇನೆ ಎಂದೂ ಬೆದರಿ
ಸಿದ್ದ. ಪೊಲೀಸರ ಜೊತೆಗೂ ದುರ್ವತನೆ ತೋರಿಸಿದ್ದ. ಆ ಹಿನ್ನೆಲೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಧಳಿಸಿದ್ದಾರೆ’ ಎಂದರು.

‌‘ಥಳಿಸುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಯಾರು, ಯಾವ ಉದ್ದೇಶಕ್ಕೆ ಚಿತ್ರೀಕರಿಸಲಾಗಿದೆ ಎನ್ನುವುದು ಗೊತ್ತಾಗಿಲ್ಲ. ಸಬ್ ಇನ್‌ಸ್ಪೆಕ್ಟರ್ ಮೇಲೆ ದ್ವೇಷದಿಂದ ಠಾಣೆಯಲ್ಲಿದ್ದವರ ಪೈಕಿ ಯಾರೋ ಚಿತ್ರೀಕರಿಸಿರುವ ಸಾಧ್ಯತೆ ಕಡಿಮೆ. ಪೊಲೀಸರು ಥಳಿಸಿದ ದೃಶ್ಯವನ್ನು ಆತನ ಸ್ನೇಹಿತರಿಗೆ ಹಾಗೂ ಪೋಷಕರಿಗೆ ತೋರಿಸಿ ಮತ್ತೊಮ್ಮೆ ಆರೋಪಿ ಈ ಕೃತ್ಯ ಎಸಗಲು ಮುಂದಾಗದಂತೆ ಬೆದರಿಸುವ ಉದ್ದೇಶವೂ ಇರಬಹುದು’ ಎಂದೂ ಹೇಳಿದರು.

ಪ್ರತಿಕ್ರಿಯಿಸಿ (+)