ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪ್ರಮಾಣಪತ್ರಕ್ಕೆ ಅಸಲಿ ಅಧಿಕಾರಿ ಸಹಿ

ಕಮಿಷನರ್ ಕಚೇರಿಯ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ಅಮಾನತು ಪ್ರಕರಣ
Last Updated 17 ಮಾರ್ಚ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ನಕಲಿ ಪರಿಶೀಲನಾ ಪ್ರಮಾಣಪತ್ರ ತಯಾರಿಸುತ್ತಿದ್ದ ಪ್ರಕರಣ ಬಯಲಾದ ಬೆನ್ನಲ್ಲೇ, ಆ ನಕಲಿ ಪ್ರಮಾಣ ಪತ್ರಗಳಿಗೆ ವಿಶೇಷ ಶಾಖೆಯ ಅಸಲಿ ಪೊಲೀಸ್ ಅಧಿಕಾರಿಯೇ ಸಹಿ ಮಾಡುತ್ತಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣ ಸಂಬಂಧ ವಿಧಾನಸೌಧ ಠಾಣೆಗೆ ದೂರು ನೀಡಿರುವವಿಶೇಷ ಶಾಖೆಯ ಎಸಿಪಿ ಎಚ್‌. ಮಂಜುನಾಥ್ ಬಾಬು, ‘ನಕಲಿ ಪ್ರಮಾಣಪತ್ರಗಳನ್ನೇ ಅಸಲಿ ಎಂಬುದಾಗಿ ಹೇಳುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ಗಳು, ಹಿರಿಯ ಅಧಿಕಾರಿಗಳ ದಿಕ್ಕು ತಪ್ಪಿಸಿ ಅವರ ಸಹಿ ಪಡೆದುಕೊಳ್ಳುತ್ತಿದ್ದರು. ನಂತರ, ಅದೇ ಪ್ರಮಾಣಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದರು’ ಎಂದು ಅವರು ತಿಳಿಸಿದ್ದಾರೆ.

‘ವಿಶೇಷ ಶಾಖೆಯ ಆಡಳಿತ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಪಿ. ನಾರಾಯಣಸ್ವಾಮಿ ಹಾಗೂ ಎ.ವಿ.ಮಂಜುನಾಥ್ ಅವರೇ ಅಧಿಕಾರ ದುರುಪಯೋಗಪಡಿಸಿಕೊಂಡು ನಕಲಿ ಪ್ರಮಾಣಪತ್ರಗಳನ್ನು ತಯಾರಿಸುತ್ತಿ
ದ್ದರು. ಅವರ ಕೃತ್ಯದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹73,350 ನಷ್ಟವಾಗಿದೆ’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಹೆಡ್ ಕಾನ್‌ಸ್ಟೆಬಲ್‌ಗಳ ವಿಚಾರಣೆ ಸಾಧ್ಯತೆ: ಪ್ರಕರಣ ದಾಖಲಾಗುತ್ತಿದ್ದಂತೆ ವಿಧಾನಸೌಧ ಪೊಲೀಸರು, ನಕಲಿ ಪ್ರಮಾಣಪತ್ರ ಪಡೆದ ಸಾರ್ವಜನಿಕರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ. ಆರೋಪಿಗಳು ಇದುವರೆಗೂ 160 ಮಂದಿಗೆ ನಕಲಿ ಪ್ರಮಾಣಪತ್ರಗಳನ್ನು ವಿತರಿಸಿದ್ದಾರೆ ಎಂದು ಗೊತ್ತಾಗಿದೆ.

‘ಸಾರ್ವಜನಿಕರಿಗೆ ಅಗತ್ಯವಿರುವ ಪೊಲೀಸ್ ಪರಿಶೀಲನಾ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಿಶೇಷ ಶಾಖೆಗೆ ವಹಿಸಲಾಗಿದೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲನೆ ಮಾಡಲಾಗುತ್ತದೆ. ಕೊನೆಯದಾಗಿ ಕಂಪ್ಯೂಟರ್ ಆಪರೇಟರ್‌ಗಳು ಪ್ರಮಾಣಪತ್ರಗಳನ್ನು ಮುದ್ರಿಸಿ ಹಿರಿಯ ಅಧಿಕಾರಿಗಳ ಸಹಿ ಮಾಡಿಸಿ ಸಾರ್ವಜನಿಕರಿಗೆ ವಿತರಿಸುತ್ತಾರೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

‘ಪ್ರಕರಣದ ಆರೋಪಿಗಳಾದ ಪಿ. ನಾರಾಯಣಸ್ವಾಮಿ ಹಾಗೂ ಎ.ವಿ. ಮಂಜುನಾಥ್, ವಿಶೇಷ ಶಾಖೆಯಲ್ಲಿ ಕಂಪ್ಯೂಟರ್ ಆಪರೇಟರ್‌ಗಳಾಗಿದ್ದರು. ಹಣದ ಆಸೆಗಾಗಿ ಅಕ್ರಮವಾಗಿ ನಕಲಿ ಪ್ರಮಾಣಪತ್ರಗಳನ್ನು ತಯಾರಿಸುತ್ತಿದ್ದರು. ಅವುಗಳನ್ನೇ ನಿಜವೆಂದು ನಂಬುತ್ತಿದ್ದ ಹಿರಿಯ ಅಧಿಕಾರಿಗಳು, ಸಹಿ ಮಾಡುತ್ತಿದ್ದರು’ ಎಂದರು.

‘ಪ್ರಮಾಣಪತ್ರಕ್ಕೆ ಅಂಟಿಸಲಾಗಿದ್ದ ಹಾಲೋಗ್ರಾಮ್ ಸ್ಟಿಕ್ಕರ್‌ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಇತ್ತೀಚೆಗೆ ಅನುಮಾನ ಬಂದಿತ್ತು. ಪರಿಶೀಲನೆ ನಡೆಸಿದಾಗಲೇ ಪ್ರಮಾಣಪತ್ರ ನಕಲಿ ಎಂಬುದು ಗೊತ್ತಾಗಿತ್ತು. ಬಳಿಕವೇ ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ಹೆಡ್ ಕಾನ್‌ಸ್ಟೆಬಲ್‌ಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT