ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಶಕ್ತಿ ಮೇಲೆ ಆಡಳಿತ ನಡೆಸಿದ ಶಿವಾಜಿ

Last Updated 20 ಫೆಬ್ರುವರಿ 2018, 9:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಭಾರತಕ್ಕೆ ದಾಸ್ಯದಿಂದ ಮುಕ್ತಿ ಹೊಂದಲು ಚಿಕ್ಕವಯಸ್ಸಿನಲ್ಲೇ ಸಂಕಲ್ಪ ಮಾಡಿದ ಅಪ್ರತಿಮ ದೇಶಭಕ್ತ ಶಿವಾಜಿ ಮಹಾರಾಜ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದ ಶಿವಾಜಿ, ತನ್ನ ಆಡಳಿತದಲ್ಲಿ ಎಂದೆಂದೂ ಮೂಢನಂಬಿಕೆಗಳಿಗೆ ಅವಕಾಶ ನೀಡಲಿಲ್ಲ. ಇಂದಿನ ಯುವಕರೂ ಶಿವಾಜಿಯಂತೆ ಶಕ್ತಿಯ ಮೇಲೆ ನಂಬಿಕೆ ಇಡಿ. ಇಲ್ಲದ ವಿಚಾರಗಳ ಬಗ್ಗೆ ಯೋಚಿಸಲೂ ಬೇಡಿ ಎಂದು ಕಿವಿಮಾತು ಹೇಳಿದರು.

ಶಿವಾಜಿಗೆ ತಾಯಿಯ ಬಗ್ಗೆ ಅಪಾರ ಭಕ್ತಿ, ಗೌರವ. ತಾಯಿಯನ್ನು ಭವಾನಿ ದೇವಿ ಎಂದೇ ಪೂಜಿಸುತ್ತಿದ್ದರು. ಅಮ್ಮನಿಂದಲೇ ಎಲ್ಲ ಶಿಕ್ಷಣವನ್ನು ಕಲಿತರು ಎಂದು ಶಿವಾಜಿ ಜೀವನ ಚರಿತ್ರೆಯನ್ನು ಮೆಲುಕು ಹಾಕಿದರು.

‘ರಾಜ್ಯ ಸರ್ಕಾರವೇ ಶಿವಾಜಿ ಮಹಾರಾಜರ ಜಯಂತಿ ಆಚರಿಸಲು ಮುಂದಾಗಿದೆ. ಹಾಗಾಗಿ, ಮರಾಠರು ಅಲ್ಪಸಂಖ್ಯಾತರು ಎಂಬ ಮನೋಭಾವ ಬೇಡ. ನಾವು ನಿಮ್ಮ ಜತೆಗಿದ್ದೇವೆ. ಸರ್ಕಾರ ಹಲವು ಜನಪರ ಯೋಜನೆಗಳನ್ನು ರೂಪಿಸಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು’ ಎಂದರು.

ಇತ್ತೀಚೆಗಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದವರೆಗೆ ಶುಲ್ಕ ವಿನಾಯಿತಿ ನೀಡಿದೆ. ಅಲ್ಲದೇ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿ ವೇತನ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಪರಿಣಾಮಕಾರಿ ಅನುಷ್ಠಾನಗೊಳಿಸುತ್ತಿದೆ. ಅವುಗಳ ಪ್ರಯೋಜನ ಪಡೆದುಕೊಂಡು ಶಿಕ್ಷಣದಲ್ಲಿ ಯಶಸ್ಸು ಸಾಧಿಸಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಟಿ.ಎ.ಪಿ.ಶೆಣೈ, ‘ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಶಿವಾಜಿ ಮಹಾರಾಜರ ಕಾಲದ ಚರಿತ್ರೆ ರೋಮಾಂಚನವಾಗಿದೆ. ಆತನ ಸಾಮ್ರಾಜ್ಯದಲ್ಲಿದ್ದ ಸಂಸ್ಕೃತಿ, ಧರ್ಮ, ಕಲೆ, ನೀತಿ ನಿಯಮಗಳು ಮುಂದಿನ ಪೀಳಿಗೆವರೆಗೆ ಸ್ಫೂರ್ತಿಯಾಗುತ್ತವೆ’ಎಂದು ವಿಶ್ಲೇಷಿಸಿದರು.

ಶಿವಾಜಿ ವನವಾಸಿಗಳನ್ನು ಸೇನಾಧಿಪತಿಗಳನ್ನಾಗಿ ಮಾಡಿಕೊಂಡಿದ್ದರು. ಕಾಡಿನ ಜನರೂ ಸ್ವತಂತ್ರವಾಗಿ ಬದುಕಬೇಕು ಎಂದು ಬಯಸಿದ್ದರು. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಪಣಕ್ಕಿಡುವ ನೀತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿತ್ತು ಎಂದು ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಡಿಡಿಪಿಐ ಆಂತೋಣಿ, ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‌ರಾವ್ ಜಾದವ್, ಕಾರ್ಯದರ್ಶಿ ಗೋಪಾಲ್‌ ರಾವ್ ಜಾದವ್, ಜೀಜಾಬಾಯಿ ಮಂಡಳಿ ಅಧ್ಯಕ್ಷೆ ಉಷಾಬಾಯಿ ಇದ್ದರು.

ನಗರದಾದ್ಯಂತ ಭವ್ಯ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ಸರ್ಕಲ್‌ನಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಮದಕರಿನಾಯಕ ಹಾಗೂ ರಾಣಾ ಪ್ರತಾಪಸಿಂಹರ ಭಾವಚಿತ್ರಗಳು ಮತ್ತು ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಕಹಳೆ, ಚಂಡೆ ಮದ್ದಳೆ, ಬೊಂಬೆ ಕುಣಿತ, ಮರಗಾಲು ಕುಣಿತ ಸೇರಿದಂತೆ ಹಲವು ಜಾನಪದ ತಂಡಗಳು ಮೆರುಗು ನೀಡಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕ– ಯುವತಿಯರು ತಲೆಗೆ ಕೆಂಪು ಮತ್ತು ಕೇಸರಿ ರುಮಾಲು ಸುತ್ತಿಕೊಂಡು, ಕುಣಿದು ಕುಪ್ಪಳಿಸಿದರು.

ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ ಸಂಗೊಳ್ಳಿರಾಯಣ್ಣ ಸರ್ಕಲ್, ಗಾಂಧಿ ವೃತ್ತ, ಎಸ್‌ಬಿಎಂ ಸರ್ಕಲ್, ಪ್ರವಾಸಿ ಮಂದಿರ, ಅಂಬೇಡ್ಕರ್ ಮಾರ್ಗವಾಗಿ ತರಾಸು ರಂಗಮಂದಿರ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT