ಪೊಲೀಸರ ಮೇಲೆ ಹಲ್ಲೆ; ಕಳ್ಳನಿಗೆ ಗುಂಡೇಟು

7

ಪೊಲೀಸರ ಮೇಲೆ ಹಲ್ಲೆ; ಕಳ್ಳನಿಗೆ ಗುಂಡೇಟು

Published:
Updated:
Deccan Herald

ಬೆಂಗಳೂರು: ಪಿಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕಳ್ಳ ಸಯ್ಯದ್ ಸುಹೇಲ್ ಅಲಿಯಾಸ್‌ ಪಪ್ಪಾಯಿ (22) ಎಂಬಾತನನ್ನು ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

ಡಿ.ಜೆ.ಹಳ್ಳಿ ನಿವಾಸಿಯಾದ ಸುಹೇಲ್, ವಾಹನ ಕಳವು ಹಾಗೂ ಸುಲಿಗೆ ಪ್ರಕರಣದ ಆರೋಪಿ. ಪೊಲೀಸರ ಫೈರಿಂಗ್‌ನಿಂದಾಗಿ ಆತನ ಎರಡೂ ಕಾಲುಗಳಿಗೆ ಗುಂಡು ತಗುಲಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಚ್ಚಿನೇಟಿನಿಂದ ಪಿಎಸ್ಐ ಶರತ್‌ಕುಮಾರ್ ಹಾಗೂ ಹೆಡ್‌ ಕಾನ್‌ಸ್ಟೆಬಲ್ ರಫೀಕ್ ಅವರ ಕೈಗಳಿಗೆ ಗಾಯಗಳಾದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಬಾಲ್ಯದಿಂದಲೇ ವಾಹನಗಳ ಕಳವು ಮಾಡುತ್ತಿದ್ದ ಆರೋಪಿ, ಅವುಗಳ ಮಾರಾಟದಿಂದ ಬಂದ ಹಣವನ್ನು ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದ. ಕೆಲವು ವರ್ಷಗಳ ಹಿಂದಷ್ಟೇ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ ಆತ, ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೋಗುತ್ತಿದ್ದ ಹಿರಿಯ ನಾಗರಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲಾರಂಭಿಸಿದ್ದ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ಕದ್ದ ದ್ವಿಚಕ್ರ ವಾಹನಗಳಲ್ಲಿ ಸಹಚರರ ಜೊತೆ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿ, ಮಾರಕಾಸ್ತ್ರಗಳನ್ನು ತೋರಿಸಿ ಸಾರ್ವಜನಿಕರನ್ನು ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ. ಅದೇ ವೇಳೆಯೇ ಹಲವರ ಮೇಲೆ ಹಲ್ಲೆಯನ್ನೂ ಮಾಡಿದ್ದ’ ಎಂದು ಮಾಹಿತಿ ನೀಡಿದರು.

‘ಮೇ 16ರಂದು ಚಂದ್ರಶೇಖರ್ (63) ಎಂಬುವರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಿದ್ದ ಆರೋಪಿ, 60 ಗ್ರಾಂ ಚಿನ್ನದ ಸರ ಕಿತ್ತೊಯ್ದಿದ್ದ’ ಎಂದು ಪೊಲೀಸರು ಹೇಳಿದರು.

ಎರಡು ಸುತ್ತು ಗುಂಡು: ಸುಹೇಲ್ ಹಾಗೂ ಆತನ ಸಹಚರರು, ಬಾಣಸವಾಡಿಯಲ್ಲಿ ಇತ್ತೀಚೆಗೆ ಸುಲಿಗೆ ಮಾಡಿದ್ದರು. ಅಂದಿನಿಂದಲೇ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಭಾನುವಾರ ರಾತ್ರಿ 1.45 ಗಂಟೆ ಸುಮಾರಿಗೆ ಬಾಣಸವಾಡಿ ಅಗ್ನಿಶಾಮಕ ದಳದ ಠಾಣೆ ರಸ್ತೆಯಲ್ಲಿ ಸುಹೇಲ್‌ ಹೊರಟಿದ್ದ ಮಾಹಿತಿ ಸಿಕ್ಕಿತ್ತು. ಇನ್‌ಸ್ಪೆಕ್ಟರ್ ಮುನಿಕೃಷ್ಣ ಹಾಗೂ ಪಿಎಸ್ಐ ಶರತ್‌ಕುಮಾರ್, ಸಿಬ್ಬಂದಿ ಜೊತೆಯಲ್ಲಿ ಸ್ಥಳಕ್ಕೆ ಹೋಗಿದ್ದರು. ಡಿಯೊ ಸ್ಕೂಟರ್‌ನಲ್ಲಿದ್ದ ಆರೋಪಿಯನ್ನು ಪಿಎಸ್‌ಐ ಹಾಗೂ ಹೆಡ್ ಕಾನ್‌ಸ್ಟೆಬಲ್ ಅಡ್ಡಗಟ್ಟಿದ್ದರು. ಆಗ ಆರೋಪಿ, ಅವರಿಬ್ಬರ ಮೇಲೂ ಮಚ್ಚು ಬೀಸಿದ್ದ. ನಂತರ, ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಅವಾಗಲೇ ಇನ್‌ಸ್ಪೆಕ್ಟರ್‌, ಆತನತ್ತ ಎರಡು ಸುತ್ತು ಗುಂಡು ಹಾರಿಸಿದ್ದರು. ಎರಡೂ ಕಾಲಿಗೆ ಪೆಟ್ಟಾಗಿ ಸ್ಥಳದಲ್ಲೇ ಕುಸಿದು ಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಯ ಬಂಧನದಿಂದ ಜೆ.ಸಿ.ನಗರ, ಕೆ.ಜಿ ಹಳ್ಳಿ, ಬಾಣಸವಾಡಿ, ಹೆಣ್ಣೂರು, ಡಿ.ಜೆ.ಹಳ್ಳಿ ಹಾಗೂ ಆರ್‌.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 15ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆತನ ಕೃತ್ಯಕ್ಕೆ ಸಹಕರಿಸಿದ್ದ ಸಹಚರರು ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !