ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ಮೂರ್ತಿ ಮಾಹಿತಿ ಮುಚ್ಚಿಟ್ಟ ಬಿಬಿಎಂಪಿ

ನಿಷೇಧ ಆದೇಶ ಉಲ್ಲಂಘನೆ: ವಿಸರ್ಜನೆಯಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು
Published 21 ಸೆಪ್ಟೆಂಬರ್ 2023, 16:50 IST
Last Updated 21 ಸೆಪ್ಟೆಂಬರ್ 2023, 16:50 IST
ಅಕ್ಷರ ಗಾತ್ರ

ಬೆಂಗಳೂರು: ನಿಷೇಧಿತ ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರಿಸ್‌) ಗಣೇಶ ಮೂರ್ತಿಗಳ ಬಳಕೆ ಹಾಗೂ ವಿಸರ್ಜನೆ ಅಧಿಕಾರಿಗಳ ಮುಂದೆಯೇ ನಡೆಯುತ್ತಿದ್ದರೂ, ಈ ಬಗ್ಗೆ ಒಂದು ಪ್ರಕರಣವನ್ನೂ ದಾಖಲಿಸಿಲ್ಲ. ಬದಲಿಗೆ, ಅಂತಹ ಮೂರ್ತಿಗಳು ವಿಸರ್ಜನೆಯಾದ ಮಾಹಿತಿಯನ್ನೂ ಇದೀಗ ಮುಚ್ಚಿಡಲಾಗುತ್ತಿದೆ.

ಗಣೇಶ ಹಬ್ಬದ ಮೊದಲನೇ ದಿನ 10 ಸಾವಿರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ ಎಂದು ಬಿಬಿಎಂಪಿ ಅಧಿಕೃತವಾಗಿ ಮಾಹಿತಿ ನೀಡಿತ್ತು. ‘ನಿಷೇಧವಿದ್ದರೂ ಹೇಗೆ ವಿಸರ್ಜನೆ ಮಾಡಿಕೊಡಲಾಯಿತು’ ಎಂಬ ಪ್ರಶ್ನೆ ನಾಗರಿಕರಿಂದ ವ್ಯಕ್ತವಾಗಿತ್ತು.

ಪಿಒಪಿ, ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕಾರ ಮಾಡಿದ ಗಣೇಶ ಸೇರಿದಂತೆ ಇಂಥ ಯಾವುದೇ ವಿಗ್ರಹಗಳ ತಯಾರಿಕೆ, ಮಾರಾಟ ಹಾಗೂ ನೀರಿನಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶ ಉಲ್ಲಂಘಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ಕನಿಷ್ಠ ಒಂದೂವರೆ ವರ್ಷ, ಗರಿಷ್ಠ ಆರು ವರ್ಷಗಳ ಕಾರಾಗೃಹವಾಸ ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.

ಗಣೇಶ ಹಬ್ಬದ ದಿನದಂದು 10 ಸಾವಿರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳು ಬಿಬಿಎಂಪಿ ವ್ಯಾಪ್ತಿಯಲ್ಲೇ ವಿಸರ್ಜನೆಯಾಗಿದ್ದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಒಂದು ಪ್ರಕರಣವನ್ನೂ ದಾಖಲಿಸಿರಲಿಲ್ಲ. ಇದನ್ನು ಪರಿಸರ ಕಾರ್ಯಕರ್ತರು, ನಾಗರಿಕರು ಪ್ರಶ್ನಿಸಿದ್ದರು. 

ಬುಧವಾರ 1.19 ಲಕ್ಷ ಗಣೇಶ ಮೂರ್ತಿಗಳು ವಿಸರ್ಜನೆಯಾಗಿವೆ ಎಂದು ಬಿಬಿಎಂಪಿ ತಿಳಿಸಿದೆ. ಆದರೆ, ಇದರಲ್ಲಿ ಪಿಒಪಿ ಮೂರ್ತಿಗಳ ವಿವರ ಇಲ್ಲ. ವಿಸರ್ಜನೆಯಾದವೆಲ್ಲ ಮಣ್ಣಿನ ಮೂರ್ತಿಗಳೇ ಎಂದು ಬಿಂಬಿಸಲಾಗಿದೆ. ಈ ರೀತಿ ಮಾಡುವಂತೆ ಅರಣ್ಯ ಸಚಿವರ ಕಚೇರಿಯಿಂದ ಮೌಖಿಕ ಸೂಚನೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿಸರ್ಜನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆ.20ರಂದು ಒಟ್ಟು 1,19,718 ಗಣೇಶ ಮೂರ್ತಿಗಳನ್ನು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲಾಗಿದೆ.

ಪೂರ್ವ ವಲಯದಲ್ಲಿ 32,975, ಪಶ್ಚಿಮ– 25,010, ದಕ್ಷಿಣ– 40,131, ಬೊಮ್ಮನಹಳ್ಳಿ– 2,646, ದಾಸರಹಳ್ಳಿ– 909, ಮಹದೇವಪುರ– 5,742, ಆರ್.ಆರ್.ನಗರ– 5,747, ಯಲಹಂಕ ವಲಯದಲ್ಲಿ 6,559 ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಸೆ.23ರಂದು ಸ್ವಚ್ಚತಾ ಕಾರ್ಯ ಕೈಗೊಂಡಿರುವುದರಿಂದ ಗಣೇಶ ಮೂರ್ತಿ ವಿಸರ್ಜನೆಗೆ ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT