ಬೆಂಗಳೂರು: ಪೌರಕಾರ್ಮಿಕರ ಮುಷ್ಕರ ಅಂತ್ಯ

ಬೆಂಗಳೂರು: ‘ಕೆಲಸ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿ ಪೌರಕಾರ್ಮಿಕರು ರಾಜ್ಯದಾದ್ಯಂತ ನಡೆಸುತ್ತಿದ್ದ ಮುಷ್ಕರ ಸೋಮವಾರ ಅಂತ್ಯವಾಗಿದೆ.
ರಾಜ್ಯದ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜುಲೈ 1ರಿಂದ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು.
ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ, ರಾಜ್ಯ ನಗರ ಪಾಲಿಕೆ- ಪುರಸಭೆ- ನಗರಸಭೆ ಪೌರಕಾರ್ಮಿಕರ ಮಹಾ ಸಂಘ ಹಾಗೂ ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಸಹಯೋಗದಲ್ಲಿ ಮುಷ್ಕರ ನಡೆಯುತ್ತಿತ್ತು.
ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಮುಷ್ಕರ ಕೈಬಿಡುವುದಿಲ್ಲವೆಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದರು. ಸೋಮವಾರ ಮುಖ್ಯಮಂತ್ರಿ ಅವರಿಂದ ಲಿಖಿತ ಭರವಸೆ ಸಿಕ್ಕಿದ್ದರಿಂದ, ಮುಷ್ಕರವನ್ನು ಕೈಬಿಡಲಾಗಿದೆ.
‘ಎಲ್ಲ ಪೌರಕಾರ್ಮಿಕರನ್ನು ಮೂರು ತಿಂಗಳ ಒಳಗಾಗಿ ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. 60 ವಯಸ್ಸಿನ ನಂತರ ನಿವೃತ್ತಿಯಾದವರಿಗೆ ಇಡುಗಂಟು ನೀಡುವುದಾಗಿಯೂ ಹೇಳಿದ್ದಾರೆ. ಮಕ್ಕಳ ಖಾಸಗಿ ಶಾಲೆ ಶುಲ್ಕ ಭರಿಸುವ, ವಸತಿ ವ್ಯವಸ್ಥೆ ಒದಗಿಸುವ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಸಂಬಂಧ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ, ಪ್ರತಿಭಟನೆ ಹಿಂಪಡೆಯಲಾಗಿದೆ’ ಎಂದು ಮುಖಂಡರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.