ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ಪ್ರಕರಣ: ಮೋದಿ ಜಾಣ ಮೌನ–ಬಿಎಸ್‌ಪಿ

Published 3 ಮೇ 2024, 1:49 IST
Last Updated 3 ಮೇ 2024, 1:49 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ತಂದೆ, ಶಾಸಕ ರೇವಣ್ಣ ಅವರು ಅಮಾಯಕ ಬಡ ಹೆಣ್ಣುಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವು ನಾಡಿನ ಮಾನವನ್ನು ಹರಾಜು ಹಾಕಿದೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ದೂರಿದ್ದಾರೆ.

‘ಮಿತ್ರ ಪಕ್ಷದ ಅಭ್ಯರ್ಥಿಯ ಲೈಂಗಿಕ ಪುರಾಣ ಬೀದಿಬೀದಿಗಳಲ್ಲಿ ಹರಾಜಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಜಾಣ ಮೌನ ವಹಿಸಿದ್ದಾರೆ. ಈ ಅನೈತಿಕ ಕತೆ ಮೊದಲೇ ಗೊತ್ತಿದ್ದರೂ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿದೇಶಕ್ಕೆ ಹೋಗಲು ನೆರವಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಸದಸ್ಯನನ್ನು ಅಮಾನತು ಮಾಡಿರುವುದು ದೊಡ್ಡ ಶಿಕ್ಷೆಯಲ್ಲ. ಪಕ್ಷದಿಂದ ಉಚ್ಚಾಟಿಸಿ, ವಿದೇಶದಿಂದ ಕರೆತಂದು ಪೊಲೀಸರಿಗೆ ಒಪ್ಪಿಸಿದರೆ ಗೌಡರ ಕುಟುಂಬದ ಪ್ರಾಮಾಣಿಕತೆ, ನ್ಯಾಯಪ್ರಜ್ಞೆ ಮೆಚ್ಚಬಹುದಿತ್ತು. ಆದರೆ ಅಮಾನತು ಮಾಡಿ ಕಣ್ಣೊರೆಸುವ ನಾಟಕ ವಾಡಿದ್ದಾರೆ’ ಎಂದಿದ್ದಾರೆ.

‘ಸಿದ್ದರಾಮಯ್ಯ ಅವರ ಸರ್ಕಾರವು ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿರು ವುದು ಸ್ವಾಗತಾರ್ಹ. ತನಿಖೆ ಪಾರದರ್ಶಕ ವಾಗಿ ನಡೆದು, ಸಾಕ್ಷ್ಯ ನಾಶವಾಗದಂತೆ ನೋಡಿಕೊಳ್ಳಬೇಕು. ಸಂತ್ರಸ್ತೆಯರಿಗೆ ರಕ್ಷಣೆ ನೀಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT